ಮೇ 23 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಆರ್‍ಸಿಬಿ ಹಾಗೂ ಸನ್‌ರೈಸರ್ಸ್ ನಡುವಿನ ಪಂದ್ಯವನ್ನು ಬೆಂಗಳೂರಿನಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಲಕ್ನೋದ ಏಕಾನಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಐಪಿಎಲ್ ಸಮಿತಿಯು, “ಬೆಂಗಳೂರಿನಲ್ಲಿ ಕಳೆದ ಭಾನುವಾರದಿಂದ ವಿಪರೀತ ಮಳೆಯಾಗುತ್ತಿದೆ. ಹವಾಮಾನ ವೈಪರೀತ್ಯವು ಇನ್ನಷ್ಟು ಮುಂದುವರಿಯುವ ಬಗ್ಗೆ ಮಾಹಿತಿಯ ಹಿನ್ನೆಲೆಯಲ್ಲಿ ಮೇ 23ರಂದು ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ಆರ್‍ಸಿಬಿ ಹಾಗೂ ಸನ್‌ರೈಸರ್ಸ್ ನಡುವಿನ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಗಿದೆ. ಪಂದ್ಯಕ್ಕಾಗಿ ಟಿಕೆಟ್ ಬುಕ್ ಮಾಡಿದ್ದ ಅಭಿಮಾನಿಗಳಿಗೆ ಹಣವನ್ನು ಮರುಪಾವತಿ ಮಾಡಲಾಗುವುದು” ಎಂದು ತಿಳಿಸಿದೆ.
ಸೋಮವಾರವಷ್ಟೇ ಲಕ್ನೋದಲ್ಲಿ ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯ ಆಡಿ ಗೆದ್ದಿರುವ ಹೈದರಾಬಾದ್, ಅದೇ ಮೈದಾನದಲ್ಲಿ ಮತ್ತೊಂದು ಪಂದ್ಯ ಆಡಲಿದೆ. ಅಲ್ಲದೇ, ಮೇ 23ರಂದು ಆರ್‌ಸಿಬಿ ಕೂಡ ಹೈದರಬಾದ್ ವಿರುದ್ಧ ಈ ಪಂದ್ಯ ಆಡಿದ ಬಳಿಕ ಮೇ 27 ರಂದು ತನ್ನ ಕೊನೆಯ ಲೀಗ್ ಪಂದ್ಯವನ್ನೂ ಲಕ್ನೋದಲ್ಲೇ ಆಡಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಪ್ಲೇ ಆಫ್ಗೆ ಲಗ್ಗೆ ಇಟ್ಟಿದೆ. ಮೇ 17ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್‍ಸಿಬಿ ಹಾಗೂ ಕೆಕೆಆರ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಈಗ ಮಳೆಯ ಕಾರಣಕ್ಕೆ ಮೇ 23ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಹೈದರಾಬಾದ್ ಹಾಗೂ ಆರ್ಸಿಬಿ ಪಂದ್ಯವನ್ನು ಲಕ್ನೋಗೆ ಶಿಫ್ಟ್ ಮಾಡಲಾಗಿದೆ.
ಈಗಾಗಲೇ ಆರ್ಸಿಬಿ ಪ್ಲೇ ಆಫ್ಗೆ ಪ್ರವೇಶಿಸಿದ್ದು, ಇನ್ನುಳಿದ ಈ ಎರಡು ಪಂದ್ಯಗಳಲ್ಲಿ ಆರ್ಸಿಬಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಥವಾ ಎರಡನೇ ಸ್ಥಾನ ಪಡೆದುಕೊಂಡರೆ ಪ್ಲೇ ಆಫ್ನಲ್ಲಿ ಸೋತರೂ ಸಹ ಇನ್ನೊಂದು ಅವಕಾಶ ಸಿಗಲಿದೆ. ಹೀಗಾಗಿ ಆರ್ಸಿಬಿ ಅಂಕಪಟ್ಟಿಯಲ್ಲಿ ಟಾಪ್ ಒನ್ ಅಥವಾ ಎರಡನೇ ಸ್ಥಾನವನ್ನು ಕಾಯ್ದುಕೊಳ್ಳಲು ಯೋಜನೆ ಹಾಕಿಕೊಂಡಿದೆ.
ಕ್ವಾಲಿಫೈಯ್ಯರ್ ಹಾಗೂ ಫೈನಲ್ ಪಂದ್ಯದ ಸ್ಥಳ ಪ್ರಕಟಿಸಿದ ಬಿಸಿಸಿಐ
ಇದೇ ವೇಳೆ ಬಿಸಿಸಿಐ ಕ್ವಾಲಿಫೈಯ್ಯರ್ ಹಾಗೂ ಫೈನಲ್ ಪಂದ್ಯದ ಸ್ಥಳವನ್ನು ಕೂಡ ಬಿಸಿಸಿಐ ಪ್ರಕಟಿಸಿದೆ. ಕ್ವಾಲಿಫೈಯ್ಯರ್ 1 ಹಾಗೂ ಎಲಿಮಿನೇಟರ್ ಪಂದ್ಯವು ಚಂಡೀಗಡದ ಮೈದಾನದಲ್ಲಿ ನಡೆಯಲಿದ್ದು, ಕ್ವಾಲಿಫೈಯ್ಯರ್ 2 ಹಾಗೂ ಫೈನಲ್ ಪಂದ್ಯವು ಗುಜರಾತ್‌ನ ಅಹ್ಮದಾಬಾದಿನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದನ್ನು ಓದಿದ್ದೀರಾ? ವಿಚಾರ ಹಂಚಿದರೆ ವಿಚಾರಣೆ, ಜೈಲು; ಇದು ನವಭಾರತದ ನವ ನಿಯಮವೆ?
ಮೇ 29 ರಿಂದ ಪ್ಲೇ-ಆಫ್ ಪಂದ್ಯಗಳು ನಡೆಯಲಿದ್ದು, ಜೂನ್ 3 ರಂದು ಫೈನಲ್ ಪಂದ್ಯ ನಡೆಯಲಿದೆ.





