2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ಸಜ್ಜಾಗುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ವದ ಸೂಚನೆಯೊಂದನ್ನು ನೀಡಿದೆ. ಇತ್ತೀಚಿನ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ತಂಡಕ್ಕೆ ಆಯ್ಕೆಯಾಗಿದ್ದ ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ.
ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ವಿಷಯವನ್ನು ದೃಢಪಡಿಸಿದ್ದು, ಬಿಸಿಸಿಐ ನಿರ್ಧಾರವನ್ನು ಕೆಕೆಆರ್ ಆಡಳಿತ ಮಂಡಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
“ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಕಾರಣದಿಂದಾಗಿ, ತಮ್ಮ ತಂಡದಲ್ಲಿರುವ ಬಾಂಗ್ಲಾದೇಶದ ಆಟಗಾರ ಮುಸ್ತಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಕೆಕೆಆರ್ ಫ್ರಾಂಚೈಸಿಗೆ ಸೂಚಿಸಲಾಗಿದೆ. ಒಂದು ವೇಳೆ ಫ್ರಾಂಚೈಸಿಯು ಅವರ ಸ್ಥಾನಕ್ಕೆ ಬದಲಿ ಆಟಗಾರನಿಗಾಗಿ ಮನವಿ ಮಾಡಿದರೆ, ಬಿಸಿಸಿಐ ಅದಕ್ಕೆ ಅನುಮತಿ ನೀಡಲಿದೆ” ಎಂದು ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
2025ರ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡವು ಮುಸ್ತಫಿಜುರ್ ರೆಹಮಾನ್ ಅವರನ್ನು ಬರೋಬ್ಬರಿ 9.20 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, ಈ ಖರೀದಿಯ ಬೆನ್ನಲ್ಲೇ ವಿರೋಧಗಳು ವ್ಯಕ್ತವಾಗಿದ್ದವು.
ಇದನ್ನು ಓದಿದ್ದೀರಾ? ಮೈದಾನದಲ್ಲಿ ಮಿಂಚುವ ‘ಮಂಧಾನ-ಜೆಮಿಮಾ’ ಜೋಡಿ: ಭಾರತೀಯ ಮಹಿಳಾ ಕ್ರಿಕೆಟ್‌ನ ಭರವಸೆಯ ಬೆಳಕು
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂ ವ್ಯಕ್ತಿಯ ಹತ್ಯೆ ಹಾಗೂ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿರುವ ಸಂದರ್ಭದಲ್ಲೇ, ಬಾಂಗ್ಲಾ ಆಟಗಾರನನ್ನು ಐಪಿಎಲ್‌ನಲ್ಲಿ ಆಡಸಬಾರದು ಎಂಬ ಒತ್ತಾಯ ಕೇಳಿಬಂದಿತ್ತು. ಅಲ್ಲದೆ ಹರಾಜಿನಲ್ಲಿ ಮುಸ್ತಫಿಜುರ್ ಅವರನ್ನು ಖರೀದಿಸಿದ್ದಕ್ಕಾಗಿ ಕೆಕೆಆರ್ ಸಹ ಮಾಲೀಕ ಹಾಗೂ ನಟ ಶಾರೂಖ್ ಖಾನ್ ವಿರುದ್ಧವೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.
ರಾಜಕೀಯ ವಲಯ ಹಾಗೂ ಧಾರ್ಮಿಕ ಗುಂಪುಗಳಿಂದ ವಿರೋಧ ಹೆಚ್ಚಾಗುತ್ತಿದ್ದಂತೆ ಬಿಸಿಸಿಐ ಈ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ದೃಷ್ಟಿಕೋನದಿಂದ ನೋಡುವುದಾದರೆ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪರಿಣಾಮಕಾರಿಯಾದ ಬೌಲಿಂಗ್‌ಗೆ ಹೆಸರಾಗಿರುವ ಮುಸ್ತಫಿಜುರ್ ಅವರ ನಿರ್ಗಮನ ಕೆಕೆಆರ್ ಬೌಲಿಂಗ್ ವಿಭಾಗಗಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಆದರೆ, ಬದಲಿ ಆಟಗಾರರನನ್ನು ಆಯ್ಕೆ ಮಾಡಲು ಬಿಸಿಸಿಐ ಅವಕಾಶ ನೀಡಿರುವುದು ಫ್ರಾಂಚೈಸಿಗೆ ಸಮಾಧಾನಕರ ವಿಷಯವಾಗಿದೆ.





