ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಅಚ್ಚರಿಯ ಸೋಲು ಕಂಡ ನಂತರ, ಇದೀಗ ಸರಣಿಯ ಭವಿಷ್ಯ ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಮತ್ತು ಅಂತಿಮ ಟೆಸ್ಟ್‌ನ ಮೇಲೆ ನಿಂತಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಒಂದೇ ಸಮಯದಲ್ಲಿ ಒಳ್ಳೆಯ ಸುದ್ದಿಯೂ ಜೊತೆ ಚೂರು ಆಘಾತಕಾರಿ ಮಾಹಿತಿಯೂ ಲಭ್ಯವಾಗಿದೆ.
ನಾಯಕ ಶುಭ್‌ಮನ್ ಗಿಲ್ ತಂಡದೊಂದಿಗೆ ಗುವಾಹಟಿಗೆ ಬಂದರೂ, ಅವರ ಫಿಟ್ನೆಸ್ ಇನ್ನೂ ಶೇ.100ರಷ್ಟು ಸ್ಪಷ್ಟವಾಗಿಲ್ಲ. ಕೋಲ್ಕತ್ತಾ ಟೆಸ್ಟ್‌ನಲ್ಲಿ ಭಾರತದ ಮೊದಲ ಇನಿಂಗ್ಸ್ ವೇಳೆ ಗಿಲ್ ಕುತ್ತಿಗೆ ನೋವಿನಿಂದ ನಿವೃತ್ತಿ ಪಡೆದು ಮೈದಾನದಿಂದ ಹೊರಗುಳಿದಿದ್ದರು. ನಂತರ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಿಸಬೇಕಾಯಿತು. ನವೆಂಬರ್ 16ರಂದು ವುಡ್‌ಲ್ಯಾಂಡ್ಸ್ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಿದರೂ, ಅಂದಿನಿಂದಲೂ ವೈದ್ಯರು ಅವರ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಎರಡನೇ ಟೆಸ್ಟಿನಲ್ಲಿ ಅವರು ಆಡುತ್ತಾರಾ ಎಂಬ ಪ್ರಶ್ನೆಗೆ ಇನ್ನೂ ಅಂತಿಮ ಉತ್ತರ ಸಿಗಬೇಕಿದೆ.
ಕೆಲವೊಂದು ವರದಿ ಪ್ರಕಾರ, ಗಿಲ್ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸುವುದು ಸ್ಪಷ್ಟವಾಗಿದೆ. ತಜ್ಞರ ಸಲಹೆಗಾಗಿ ಅವರನ್ನು ಮುಂಬೈಗೆ ಕಳುಹಿಸುವ ಯೋಜನೆಯೂ ಇದ್ದರೂ, ಅದನ್ನು ಕೊನೆಯ ಕ್ಷಣದಲ್ಲಿ ಕೈಬಿಡಲಾಗಿದೆ. ಇದರಿಂದ ಟೀಂ ಇಂಡಿಯಾ ಗಿಲ್ ಅವರ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿಲ್ಲ ಎಂಬುದೂ ಸ್ಪಷ್ಟ.
ಇದನ್ನು ಓದಿದ್ದೀರಾ? ಕ್ರಿಕೆಟ್ | ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ; ರೋಚಕತೆ, ದಾಖಲೆಗಳು ಮತ್ತು ಸವಾಲುಗಳು
ಬಿಸಿಸಿಐ ವೈದ್ಯರು ಹಾಗೂ ತಂಡದ ನಿರ್ವಹಣೆ ನಿರಂತರವಾಗಿ ಗಿಲ್‌ರ ಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಪಂದ್ಯಕ್ಕೆ ಒಂದು ದಿನ ಬಾಕಿ ಇರುವಾಗಲೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಗಿಲ್ ಮೈದಾನಕ್ಕೆ ಇಳಿದರೆ ಭಾರತಕ್ಕೆ ಅದು ದೊಡ್ಡ ಮನೋಬಲ, ಆದರೆ ಅವರು ಹೊರಗುಳಿದರೆ ಭಾರತದ ಬ್ಯಾಟಿಂಗ್ ಕ್ರಮದಲ್ಲಿ ಮತ್ತೊಂದು ಬಿರುಕು ಕಾಣಿಸಿಕೊಳ್ಳುವುದು ನಿಶ್ಚಿತ.
ಈ ನಡುವೆ, ಆಯ್ಕೆದಾರರು ಬಲಗೈ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನು ತುರ್ತಾಗಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಮೂಲತಃ ಟೆಸ್ಟ್ ತಂಡದಲ್ಲಿದ್ದ ಅವರನ್ನು ರಾಜ್‌ಕೋಟ್‌ನಲ್ಲಿ ಭಾರತ ಎ ತಂಡದ ಪರ ಸೀಮಿತ ಓವರ್‌ಗಳ ಪಂದ್ಯಗಳಿಗೆ ಕಳುಹಿಸಿದ್ದರು. ಈಗ ಗಿಲ್ ಅವರ ಫಿಟ್ನೆಸ್ ಹಿನ್ನೆಲೆ, ಅವರನ್ನು ತಕ್ಷಣ ಕೋಲ್ಕತ್ತಾಗೆ ಮತ್ತು ಅಲ್ಲಿಂದ ಗುವಾಹಟಿಗೆ ಕರೆಸಲಾಗಿದೆ. ಅಂದರೆ, ಅಗತ್ಯ ಬಂದರೆ ನಿತೀಶ್ ಎರಡನೇ ಟೆಸ್ಟ್‌ಗೆ ನೇರ ಪ್ರವೇಶ ಪಡೆಯಬಹುದು.
ನ.22 ರಂದು ನಡೆಯುವ ಗುವಾಹಟಿ ಟೆಸ್ಟ್ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿ. ಗಿಲ್ ಆಡುತ್ತಾರೋ ಇಲ್ಲವೋ ಎಂಬುದು ಪಂದ್ಯಕ್ಕಿಂತಲೂ ದೊಡ್ಡ ಚರ್ಚೆ. ಆದರೆ ಭಾರತಕ್ಕೀಗ ಮುಖ್ಯವಾಗಿರುವುದು ಉತ್ತಮ ತಂಡವನ್ನು ಮೈದಾನಕ್ಕೆ ಇಳಿಸಿ ಸರಣಿಯನ್ನು ಉಳಿಸಿಕೊಳ್ಳುವುದು.





