67 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡ 2025-26ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಇನ್ನೊಂದೆಡೆ, ತವರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಕರ್ನಾಟಕ ತಂಡ ತನ್ನ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.
ಫೈನಲ್ ಪಂದ್ಯ ಕೊನೆಯ ದಿನ ಅಂತಿಮವಾಗಿ ‘ಡ್ರಾ’ನಲ್ಲಿ ಕೊನೆಗೊಂಡಿತು. ಆದರೆ, ಮೊದಲ ಇನಿಂಗ್ಸ್‌ನಲ್ಲಿ ಸಾಧಿಸಿದ ಬೃಹತ್ ಮುನ್ನಡೆಯ ಆಧಾರದ ಮೇಲೆ ಜಮ್ಮುಕಾಶ್ಮೀರ ತಂಡವನ್ನು ವಿಜೇತ ಎಂದು ಘೋಷಿಸಲಾಯಿತು. ಮೊದಲ ಬಾರಿಗೆ ರಣಜಿ ಪ್ರಶಸ್ತಿ ಎತ್ತಿ ಹಿಡಿದ ಜಮ್ಮು ಮತ್ತು ಕಾಶ್ಮೀರ ತಂಡದ ಆಟಗಾರರು ಸಂಭ್ರಮದಲ್ಲಿ ತೇಲಿದರು.
ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 584 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡ, ಬಲಿಷ್ಠ ಜಮ್ಮು ಮತ್ತು ಕಾಶ್ಮೀರ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗದೆ ಕೇವಲ 293 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ 291 ರನ್‌ಗಳ ನಿರ್ಣಾಯಕ ಮೊದಲ ಇನಿಂಗ್ಸ್ ಮುನ್ನಡೆ ಲಭಿಸಿತು.
ಇದನ್ನು ಓದಿದ್ದೀರಾ? ರಣಜಿ ಟ್ರೋಫಿ ಫೈನಲ್: ಮೈದಾನದಲ್ಲಿ ಜಗಳವಾಡಿದ ಕರ್ನಾಟಕ – ಜಮ್ಮು ಕಾಶ್ಮೀರದ ಆಟಗಾರರು
ನಂತರ ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ ಜಮ್ಮು ಮತ್ತು ಕಾಶ್ಮೀರ ತಂಡ, 4 ವಿಕೆಟ್ ನಷ್ಟಕ್ಕೆ 342 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಪರಿಗಣಿಸಲಾಯಿತು. ಪಂದ್ಯ ಡ್ರಾ ಆದಕಾರಣ, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಕಣಿವೆ ತಂಡ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿತು.
ಹುಬ್ಬಳ್ಳಿಯ ತವರಿನ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕರ್ನಾಟಕ ತಂಡ ಸುಲಭವಾಗಿ ಗೆಲುವು ಸಾಧಿಸಲಿದೆ ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ಕರ್ನಾಟಕದ ಹಿನ್ನಡೆಗೆ ಮುಖ್ಯ ಕಾರಣವಾಯಿತು. ಬಲಿಷ್ಠ ತಂಡವನ್ನು ಹೊಂದಿದ್ದರೂ, ನಿರ್ಣಾಯಕ ಸಮಯದಲ್ಲಿ ತಕ್ಕ ಹೋರಾಟ ನಡೆಸದೆ ಹೋದದ್ದು ಕರ್ನಾಟಕದ ಸೋಲಿಗೆ ಕಾರಣವಾಯಿತು.





