ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಇಂದು ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಜೂನ್ 4, 2025ರಂದು ಆರ್‌ಸಿಬಿ ತಂಡದ ಟ್ರೋಫಿ ಸಂಭ್ರಮಾಚರಣೆ ವೇಳೆ ಕ್ರೀಡಾಂಗಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿದ್ದರು. ಈ ದುರಂತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲ ರೀತಿಯ ಕ್ರಿಕೆಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬೇರೆಡೆಗೆ ಸ್ಥಳಾಂತರಿಸಿತ್ತು. ದುಲೀಪ್ ಟ್ರೋಫಿ, ಭಾರತ-ದಕ್ಷಿಣ ಆಫ್ರಿಕಾ ಪುರುಷರ ‘ಎ’ ಸರಣಿ, ವಿಜಯ್ ಹಜಾರೆ ಟ್ರೋಫಿ ಮತ್ತು 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ (ಫೈನಲ್ ಪಂದ್ಯ ಸೇರಿ) ಈ ಮೈದಾನದಿಂದ ಕೈತಪ್ಪಿದ್ದವು.
ಈ ದುರಂತದ ಪರಿಣಾಮವಾಗಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಹಲವು ಪ್ರಮುಖ ಟೂರ್ನಿಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬೇರಡೆಗೆ ಸ್ಥಳಾಂತರಿತ್ತು. ದುಲೀಪ್ ಟ್ರೋಫಿ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಮಹಿಳಾ ಹಾಗೂ ಪುರುಷರ ವಿಶ್ವಕಪ್, ವಿಜಯ್ ಹಜಾರೆ, ರಣಜಿ ಟ್ರೋಫಿ ಈ ಮೈದಾನದಿಂದ ಕೈತಪ್ಪಿದ್ದವು.
ದುರಂತದ ತನಿಖೆಗಾಗಿ ರಚಿಸಲಾಗಿದ್ದ ‘ನ್ಯಾಯಮೂರ್ತಿ ಮೈಕೆಲ್ ಡಿಕುನ್ಹಾ’ ಸಮಿತಿಯ ವರದಿಯ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಷರತ್ತಿನ ಮೇರೆಗಷ್ಟೇ ಇದೀಗ ಪಂದ್ಯಗಳ ಆಯೋಜನೆಗೆ ಮರಳಿ ಅವಕಾಶ ಕಲ್ಪಿಸಲಾಗಿದೆ.
“ಬೆಂಗಳೂರಿನ ಐತಿಹಾಸಿಕ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ಕೆಎಸ್‌ಸಿಎಗೆ ಅನುಮತಿ ನೀಡಿದೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ” ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ವಿಧಿಸಿರುವ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳ ಪಾಲನೆಗೆ ಒಳಪಟ್ಟು ಈ ಅನುಮತಿ ನೀಡಲಾಗಿದ್ದು, ನಿಗದಿಪಡಿಸಿದ ಎಲ್ಲಾ ಷರತ್ತುಗಳನ್ನು ಪೂರೈಸುವ ವಿಶ್ವಾಸವನ್ನು ಮೃತ್ಯುಂಜಯ ವ್ಯಕ್ತಪಡಿಸಿದ್ದಾರೆ.
ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ನೇತೃತ್ವದ ನೂತನ ಕೆಎಸ್‌ಸಿಎ ಆಡಳಿತ ಮಂಡಳಿಯು, ಕ್ರೀಡಾಂಗಣಕ್ಕೆ ಕ್ರಿಕೆಟ್ ಅನ್ನು ಮರಳಿ ತರಲು ಕಳೆದ ತಿಂಗಳಿನಿಂದ ವಿವಿಧ ಸರ್ಕಾರಿ ಏಜೆನ್ಸಿಗಳೊಂದಿಗೆ ನಿರಂತರ ಚರ್ಚೆ ನಡೆಸುತ್ತಿತ್ತು.
”ಸಂಸ್ಥೆಯು ಈಗಾಗಲೇ ತಜ್ಞರ ಪರಿಶೀಲನಾ ಸಮಿತಿಯ ಮುಂದೆ ವಿವರವಾದ ಅನುಸರಣಾ ನೀಲನಕ್ಷೆಯನ್ನು ಮಂಡಿಸಿದೆ. ಭದ್ರತೆ, ಸುರಕ್ಷತೆ ಮತ್ತು ಜನದಟ್ಟಣೆ ನಿರ್ವಹಣಾ ಕ್ರಮಗಳನ್ನು ಚಾಚೂತಪ್ಪದೆ ಜಾರಿಗೊಳಿಸಲು ನಾವು ಬದ್ಧರಾಗಿದ್ದೇವೆ” ಎಂದು ವಿನಯ್ ಮೃತ್ಯುಂಜಯ ಭರವಸೆ ನೀಡಿದರು.
ರಾಜ್ಯ ಸರ್ಕಾರದ ಈ ಅನುಮತಿಗೂ ಮುನ್ನ, ತವರಿನ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡುವ ಬಗ್ಗೆ ಬಲವಾದ ಚರ್ಚೆಗಳಿದ್ದವು. ಆರ್‌ಸಿಬಿ ಉಪಾಧ್ಯಕ್ಷ ರಾಜೇಶ್ ಮೆನನ್ ಅವರು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರನ್ನು ಭೇಟಿಯಾಗಿ, ನವ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡು ಪಂದ್ಯಗಳನ್ನು ಆಡುವ ಕುರಿತು ಮಾತುಕತೆ ನಡೆಸಿದ್ದರು. ಐಪಿಎಲ್ ವೇಳಾಪಟ್ಟಿ ಪ್ರಕಟವಾದ ನಂತರ 7 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಹೊರಗೆ ಆಡಲು ಅನುಮತಿ ನೀಡಲಾಗಿತ್ತು.
ಇದೀಗ ರಾಜ್ಯ ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಆರ್‌ಸಿಬಿ ತನ್ನ 2026ರ ಐಪಿಎಲ್‌ನ ಎಲ್ಲಾ ತವರಿನ ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲೇ ಆಡಲಿದೆಯೇ ಅಥವಾ ವೇಳಾಪಟ್ಟಿ ಪ್ರಕಟವಾದಂತೆ ರಾಯ್‌ಪುರದಲ್ಲಿ ಎರಡು ಪಂದ್ಯಗಳನ್ನು ಆಡುವ ನಿರ್ಧಾರಕ್ಕೆ ಬದ್ಧವಾಗಿರುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.





