ಇಂಗ್ಲೆಂಡ್ ವಿರುದ್ಧ ಗುಜರಾತ್‌ನ ರಾಜ್‌ಕೋಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಿಂದ ಕೆ ಎಲ್ ರಾಹುಲ್ ‘ಔಟ್’ ಆಗಿದ್ದಾರೆ. ಅವರ ಸ್ಥಾನಕ್ಕೆ ಮತ್ತೋರ್ವ ಕನ್ನಡಿಗ ದೇವದತ್ತ್ ಪಡಿಕ್ಕಲ್ ಆಯ್ಕೆಯಾಗಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಇಂಗ್ಲೆಂಡ್ ವಿರುದ್ಧ ಈಗಾಗಲೇ ಎರಡು ಟೆಸ್ಟ್ ಪಂದ್ಯಗಳು ಹೈದರಾಬಾದ್ ಹಾಗೂ ವಿಶಾಖಪಟ್ಟಣದಲ್ಲಿ ನಡೆದಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿದ್ದರೆ, ಎರಡನೇ ಟೆಸ್ಟ್ ಅನ್ನು ಟೀಮ್ ಇಂಡಿಯಾ ಗೆಲ್ಲುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
KL Rahul out of the 3rd Test against England.
Devdutt Padikkal replaces him in the squad. (Express Sports). pic.twitter.com/wnvpgAmB2P
— Mufaddal Vohra (@mufaddal_vohra) February 12, 2024
ಇನ್ನುಳಿದ ಮೂರು ಟೆಸ್ಟ್ ರಾಜ್‌ಕೋಟ್, ರಾಂಚಿ ಮತ್ತು ಧರ್ಮಶಾಲಾದಲ್ಲಿ ನಡೆಯಲಿದೆ. ಈ ಮೂರೂ ಟೆಸ್ಟ್‌ಗಳಿಗೆ ಕಳೆದ ಶನಿವಾರ ಬಿಸಿಸಿಐ ತಂಡ ಪ್ರಕಟಿಸಿತ್ತು. ಗಾಯದ ಸಮಸ್ಯೆಯಿಂದ ಎರಡನೇ ಟೆಸ್ಟ್ ಪಂದ್ಯ ಮಿಸ್ ಮಾಡಿಕೊಂಡಿದ್ದ ಕೆ ಎಲ್ ರಾಹುಲ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಸ್ಥಾನ ಪಡೆದುಕೊಂಡಿದ್ದರು. ಆದರೆ ಬಿಸಿಸಿಐನ ವೈದ್ಯಕೀಯ ತಂಡವು ಇವರಿಬ್ಬರಿಗೂ ಫಿಟ್‌ನೆಸ್ ಕುರಿತು ವರದಿ ನೀಡಿರಲಿಲ್ಲ.
ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಬಲಭಾಗದ ತೊಡೆಯ ಸ್ನಾಯು ಸೆಳೆತದ ನೋವಿನಿಂದ ಬಳಲಿದ್ದರು. ಇದರಿಂದ ಗುಣಮುಖರಾಗದ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ.
ಸಂಪೂರ್ಣ ಗುಣಮುಖರಾಗಲು ಇನ್ನೂ ಕೂಡ ಕೆಲವು ದಿನಗಳ ವಿಶ್ರಾಂತಿಯ ಅವಶ್ಯಕತೆ ಇರುವುದರಿಂದ ಮೂರನೇ ಟೆಸ್ಟ್‌ನಲ್ಲಿ ಆಡಲು ವೈದ್ಯಕೀಯ ತಂಡ ಸೂಚಿಸಿಲ್ಲ ಎಂದು ವರದಿ ಹೇಳಿದೆ. ಈ ನಡುವೆ ಆಲ್‌ರೌಂಡರ್ ಜಡೇಜಾ ಭಾಗವಹಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಕೆ ಎಲ್ ರಾಹುಲ್ ಸ್ಥಾನಕ್ಕೆ ದೇವದತ್ತ್ ಪಡಿಕ್ಕಲ್
ತೆರವಾಗಲಿರುವ ಕೆ ಎಲ್ ರಾಹುಲ್ ಸ್ಥಾನಕ್ಕೆ ಮತ್ತೋರ್ವ ಕನ್ನಡಿಗ ದೇವದತ್ತ್ ಪಡಿಕ್ಕಲ್ ಆಯ್ಕೆಯಾಗಿದ್ದಾರೆ. ಆದರೆ ಈ ಬಗ್ಗೆ ಬಿಸಿಸಿಐ ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ.

ರಣಜಿ ಟ್ರೋಫಿಯಲ್ಲಿ ಪಡಿಕ್ಕಲ್ ಉತ್ತಮ ಪ್ರದರ್ಶನ ನೀಡಿದ್ದರು. ಕರ್ನಾಟಕ ಹಾಗೂ ತಮಿಳುನಾಡು ನಡೆದಿದ್ದ ಪಂದ್ಯದಲ್ಲಿ ಪಡಿಕ್ಕಲ್ 151 ರನ್ ಬಾರಿಸಿದ್ದರು. ಈ ಪಂದ್ಯವನ್ನು ಆಯ್ಕೆಗಾರರ ಸಮಿತಿಯ ಅಧ್ಯಕ್ಷ, ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಕೂಡ ವೀಕ್ಷಿಸಿದ್ದರು. ಪಂಜಾಬ್ ವಿರುದ್ಧ 193 ರನ್ ಹಾಗೂ ಗೋವಾ ವಿರುದ್ಧ ಕೂಡ 103 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ತೆರವಾದ ಕೆ ಎಲ್ ರಾಹುಲ್ ಸ್ಥಾನಕ್ಕೆ ದೇವದತ್ತ್ ಪಡಿಕ್ಕಲ್ ಆಯ್ಕೆಯಾಗಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯಲ್ಲಿ ಉಲ್ಲೇಖಿಸಿದೆ.
ಇಂಗ್ಲೆಂಡ್ ವಿರುದ್ಧದ ಎಲ್ಲ ಟೆಸ್ಟ್ ಪಂದ್ಯಗಳಿಂದಲೂ ಹಿಂದೆ ಸರಿದಿದ್ದ ವಿರಾಟ್ ಕೊಹ್ಲಿ
ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಇನ್ನುಳಿದ ಮೂರು ಟೆಸ್ಟ್ಗಳಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎಂದು ಬಿಸಿಸಿಐ ಶನಿವಾರ ಅಧಿಕೃತ ಹೇಳಿಕೆ ನೀಡಿತ್ತು.
ಇದನ್ನು ಓದಿದ್ದೀರಾ? 70ರ ದಶಕದ ಕ್ರಿಕೆಟ್ ಪ್ರಿಯರ ಆರಾಧ್ಯ ದೈವ ಜಿಆರ್‌ವಿಗೆ 75ರ ಸಂಭ್ರಮ
“ಟೀಮ್ ಇಂಡಿಯಾದ ಮಾಜಿ ನಾಯಕ ಕೊಹ್ಲಿ, ವೈಯಕ್ತಿಕ ಕಾರಣಗಳಿಂದ ಉಳಿದ ಮೂರು ಟೆಸ್ಟ್‌ಗಳಿಂದ ಹಿಂದೆ ಸರಿಯುವ ನಿರ್ಧಾರದ ಬಗ್ಗೆ ಆಯ್ಕೆದಾರರಿಗೆ ತಿಳಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ” ಎಂದು ಬಿಸಿಸಿಐ ಮೂರು ಟೆಸ್ಟ್ ಪಂದ್ಯಗಳಿಗೆ ತಂಡ ಪ್ರಕಟಿಸುವಾಗ ತಿಳಿಸಿತ್ತು.
Sarfaraz Khan will make his Test debut in Rajkot against England. (Express Sports). pic.twitter.com/zM5Mn22UyH
— Mufaddal Vohra (@mufaddal_vohra) February 12, 2024
ಸರ್ಫರಾಝ್ ಖಾನ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ
ರಾಜ್‌ಕೋಟ್‌ನ ಮೂರನೇ ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಾಗಲೇ ತಂಡಕ್ಕೆ ಆಯ್ಕೆಯಾಗಿರುವ ಯುವ ಬ್ಯಾಟರ್ ಸರ್ಫರಾಝ್ ಖಾನ್, ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಯುವ ಆಟಗಾರ ಸರ್ಫರಾಜ್ ಖಾನ್ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ ಕೊನೆಯ 11ರಲ್ಲಿ ಸ್ಥಾನ ಪಡೆದಿರಲಿಲ್ಲ. ಇದು ಹಲವರನ್ನು ನಿರಾಸೆಗೆ ದೂಡಿತ್ತು.
ಭಾರತ ಟೆಸ್ಟ್ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ದೇವದತ್ತ್ ಪಡಿಕ್ಕಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.





