ರಾಜ್‌ಕೋಟ್‌ನ ನಿರಂಜನ್ ಶಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ, ಮಧ್ಯಮ ಕ್ರಮಾಂಕದ ಆಟಗಾರ ಕನ್ನಡಿಕರಾದ ಕೆ ಎಲ್ ರಾಹುಲ್ ಅವರ ಆಕರ್ಷಕ ಶತಕ ಹಾಗೂ ನಾಯಕ ಶುಭಮನ್ ಗಿಲ್ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಭಾರತ ತಂಡವು 284 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ನಾಯಕ ಮೈಕಲ್ ಬ್ರೇಸ್‌ವೆಲ್ ಅವರ ನಿರ್ಧಾರವನ್ನು ಸಮರ್ಥಿಸುವಂತೆ ಪ್ರವಾಸಿ ಬೌಲರ್‌ಗಳು ಆರಂಭದಲ್ಲಿ ಬಿಗಿ ದಾಳಿ ನಡೆಸಿದರು.
ಆರಂಭಿಕ ಆಘಾತ, ರಾಹುಲ್ ಆಸರೆ
ತವರಿನ ಅಂಗಳದಲ್ಲಿ ಭರ್ಜರಿ ಬ್ಯಾಟಿಂಗ್ ನಿರೀಕ್ಷೆಯಲ್ಲಿದ್ದ ರೋಹಿತ್ ಶರ್ಮಾ (24) ಹಾಗೂ ವಿರಾಟ್ ಕೊಹ್ಲಿ (23) ಉತ್ತಮ ಆರಂಭ ಪಡೆದರೂ, ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು. ಈ ಹಂತದಲ್ಲಿ ಒಂದಾದ ನಾಯಕ ಶುಭಮನ್ ಗಿಲ್ (56) ಹಾಗೂ ಕೆ.ಎಲ್. ರಾಹುಲ್ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ವಿಶೇಷವಾಗಿ ಕೆ.ಎಲ್. ರಾಹುಲ್, ಕಿವೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. 92 ಎಸೆತಗಳನ್ನು ಎದುರಿಸಿದ ಅವರು ಅಜೇಯ 112 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 280ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಆಟದಲ್ಲಿ 11 ಬೌಂಡರಿ, 1 ಸಿಕ್ಸರ್ ಒಳಗೊಂಡಿತ್ತು. ಅಂತಿಮವಾಗಿ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 284 ರನ್ ಕಲೆಹಾಕಿತು.
ನ್ಯೂಜಿಲೆಂಡ್ ಪರ ಕ್ರಿಸ್ ಕ್ಲಾರ್ಕ್ 56 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು. ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆ ಸಾಧಿಸಿರುವ ಭಾರತ, ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ.
ಸಂಕ್ಷಿಪ್ತ ಸ್ಕೋರ್:
ಭಾರತ: 50 ಓವರ್‌ಗಳಲ್ಲಿ 284/7 (ಕೆ.ಎಲ್. ರಾಹುಲ್ ಅಜೇಯ 112, ಶುಭಮನ್ ಗಿಲ್ 56, ರೋಹಿತ್ ಶರ್ಮಾ 24; ಕ್ರಿಸ್ ಕ್ಲಾರ್ಕ್ 56/3).





