ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಕಂಚಿನ ಪದಕ ಗೆದ್ದ ಭಾರತದ 22 ವರ್ಷದ ಆಟಗಾರ್ತಿ ಮನು ಭಾಕರ್ ಅವರೊಂದಿಗೆ ಪ್ರಾಯೋಜಕತ್ವ ಒಪ್ಪಂದ ಹೊಂದಿಲ್ಲದ ಹಲವು ಕಂಪನಿಗಳು ಆಕೆಯ ವಿಡಿಯೋಗಳು ಹಾಗೂ ಭಾವಚಿತ್ರಗಳನ್ನು ಬಳಸಿ ತಮ್ಮ ಬ್ರಾಂಡ್‌ನೊಂದಿಗೆ ಅಭಿನಂದನಾ ಜಾಹೀರಾತು ನೀಡುತ್ತಿವೆ.
ಅಧಿಕೃತವಾಗಿ ಮನು ಭಾಕರ್ ಅವರ ಕ್ರೀಡೆ ಹಾಗೂ ಮನರಂಜನೆಯ ನಿರ್ವಹಣೆಯ ಒಪ್ಪಂದ ಹೊಂದಿರುವ ಐಒಎಸ್ ಸ್ಪೋರ್ಟ್ಸ್ ಆಂಡ್ ಎಂಟರ್‌ಟೈನ್‌ಮೆಂಟ್ ಕಂಪನಿಯ ಯಾವುದೇ ಅನುಮತಿ ಪಡೆಯದೆ ಜಾಹೀರಾತು ನೀಡುತ್ತಿರುವ ಕಂಪನಿಗಳಿಗೆ ಲೀಗಲ್ ನೋಟಿಸ್ ನೀಡಲಾಗಿದೆ. ಕಂಪನಿ ವ್ಯವಸ್ಥಾಪಕರು ಲೀಗಲ್ ನೋಟಿಸ್ ನೀಡಿದ್ದಾರೆ.
“ನಿನ್ನೆಯಿಂದ ಮನು ಭಾಕರ್ ಅವರೊಂದಿಗೆ ಅಧಿಕೃತವಾಗಿ ಪ್ರಾಯೋಜಕತ್ವ ಹೊಂದಿರದ 12ಕ್ಕೂ ಹೆಚ್ಚು ಕಂಪನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮನು ಅವರ ಭಾವಚಿತ್ರಗಳು ಹಾಗೂ ತಮ್ಮ ಕಂಪನಿಗಳ ಉತ್ಪನ್ನಗಳನ್ನು ಬಳಸಿ ಅಭಿನಂದನಾ ಜಾಹೀರಾತು ಪ್ರಕಟಿಸಿವೆ. ಇವುಗಳು ಕಾನೂನಾತ್ಮಕವಾಗಿ ಅನುಮತಿ ಪಡೆದಿಲ್ಲ. ಈ ಕಂಪನಿಗಳಿಗೆ ನಾವು ಲೀಗಲ್ ನೋಟಿಸ್ ನೀಡುತ್ತೇವೆ” ಎಂದು ಐಒಎಸ್ ಸ್ಪೋರ್ಟ್ಸ್ ಆಂಡ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಎಂಡಿ ನೀರವ್ ತೋಮರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್ 2024 | ಭಾರತಕ್ಕೆ ಮೊದಲ ಪದಕ; 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್
ಬಜಾಜ್ ಫುಡ್ಸ್, ಎಲ್‌ಐಸಿ, ಎಫ್‌ಐಐಟಿಜೆಇಇ, ಓಕ್‌ವುಡ್ ಇಂಟರ್ ನ್ಯಾಷನಲ್ ಸ್ಕೂಲ್, ರಾಧಾ ಟಿಎಂಟಿ, ಪಾರುಲ್ ಆಯುರ್ವೇದ ಆಸ್ಪತ್ರೆ ಒಳಗೊಂಡ ಕಂಪನಿಗಳಿಗೆ ಲೀಗಲ್ ನೋಟಿಸ್ ನೀಡಲಾಗಿದೆ.
ಮನು ಭಾಕರ್ ಪ್ರಸ್ತುತ ಪರ್‌ಪೋರ್‌ಮ್ಯಾಕ್ಸ್ ಆಕ್ಟೇವ್‌ವೇರ್ ಫಿಟ್‌ನೆಸ್ ಫ್ಯಾಷನ್ ಕಂಪನಿಗೆ ಮಾತ್ರ ಜಾಹೀರಾತಿಗೆ ಸಮ್ಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಲೀಗಲ್ ನೋಟಿಸ್ ನೀಡಲಾಗಿರುವ ಕಂಪನಿಗಳ ವಿರುದ್ಧ ಭಾರತದಲ್ಲಿ ಕಾನೂನು ಪ್ರಕ್ರಿಯೆಗಳು ಮುಂದುವರಿಯಲಿವೆ.





