ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೊತೆ ತನ್ನ ಮದುವೆಯ ವದಂತಿ ಬಗ್ಗೆ ಭಾರತ ಕ್ರಿಕೆಟ್ ತಂಡದ ವೇಗಿ ಬೌಲರ್ ಮೊಹಮ್ಮದ್ ಶಮಿ ಕೊನೆಗೂ ಮೌನ ಮುರಿದಿದ್ದಾರೆ. ವದಂತಿಗಳನ್ನು ಹಬ್ಬಿಸುತ್ತಿರುವವರಿಗೆ ‘ತಾಕತ್ತಿದ್ದರೆ ಪರಿಶೀಲಿಸಿದ (ವೆರಿಫೈಡ್) ಖಾತೆಯ ಮೂಲಕ ಈ ಪೋಸ್ಟ್‌ಗಳನ್ನು ಮಾಡಿ’ ಎಂದು ಸವಾಲೆಸೆದಿದ್ದಾರೆ.
ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಆನ್‌ಲೈನ್‌ನಲ್ಲಿ ಮ್ಯಾನಿಪುಲೇಟ್ ಮಾಡಿದ ಚಿತ್ರಗಳನ್ನು ಹಂಚಿಕೊಂಡು ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಮದುವೆಯಾಗಲಿದ್ದಾರೆ ಎಂದು ಹೇಳಿಕೊಂಡಿವೆ.
ಯೂಟ್ಯೂಬ್‌ನಲ್ಲಿ ಶುಭಂಕರ್ ಮಿಶ್ರಾ ಜೊತೆಗಿನ ಇತ್ತೀಚಿನ ಸಂವಾದದಲ್ಲಿ ಈ ವದಂತಿಗಳ ಬಗ್ಗೆ ಶಮಿ ಅವರನ್ನು ಪ್ರಶ್ನಿಸಲಾಗಿದ್ದು, ಊಹಾಪೋಹದ ಸುದ್ದಿಗಳನ್ನು ಹರಡುವವರ ವಿರುದ್ಧ ಶಮಿ ಸಿಡಿಮಿಡಿಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಡದಂತೆ ಜನರಲ್ಲಿ ಮನವಿ ಮಾಡಿದ್ದಾರೆ.
“ಇಂತಹ ಮೇಮ್‌ಗಳು ಜನರಿಗೆ ಮನರಂಜನೆ ನೀಡಬಹುದಾದರೂ ಇದು ಒಬ್ಬರ ವ್ಯಕ್ತಿತ್ವಕ್ಕೆ ಹಾನಿಕಾರಕವೂ ಆಗಬಹುದು. ಸಾಮಾಜಿಕ ಜಾಲತಾಣ ಬಳಸುವಾಗ ಎಲ್ಲರೂ ಜವಾಬ್ದಾರರಾಗಿರಬೇಕು. ಇಂತಹ ಆಧಾರರಹಿತ ಸುದ್ದಿಗಳನ್ನು ಹರಡಬಾರದೆಂದು ನಾನು ಮನವಿ ಮಾಡುತ್ತೇನೆ” ಎಂದು ಶಮಿ ಹೇಳಿದರು.
ಇದನ್ನು ಓದಿದ್ದೀರಾ? ಮೊಹಮ್ಮದ್ ಶಮಿಗೆ ರಾಷ್ಟ್ರಪತಿಯಿಂದ ಅರ್ಜುನ ಪ್ರಶಸ್ತಿ ಪುರಸ್ಕಾರ
“ಇದು ವಿಚಿತ್ರವಾಗಿದೆ, ಉದ್ದೇಶಪೂರ್ವಕವಾಗಿ ಕೆಲವು ಕೀಳುಮಟ್ಟದ ವಿನೋದಕ್ಕಾಗಿ ಮಾಡಲಾಗಿದೆ. ಆದರೆ ಏನು ಮಾಡಬಹುದು? ನಾನು ನನ್ನ ಫೋನ್ ತೆರೆದರೆ ಆ ಮೇಮ್‌ಗಳೇ ಕಾಣಿಸುತ್ತದೆ” ಎಂದಿದ್ದಾರೆ.
“ಈ ಮೇಮ್‌ಗಳನ್ನು ಮೋಜಿಗಾಗಿ ಮಾಡಲಾಗಿದೆ ಎಂದು ನಾನು ಅಂದುಕೊಂಡಿದ್ದೇನೆ. ಆದರೆ ಇದು ಇನ್ನೊಬ್ಬರ ಜೀವನಕ್ಕೆ ಸಂಬಂಧಿಸಿದೆ. ಹಾಗಿರುವಾಗ ನೀವು ಇನ್ನೊಬ್ಬರ ಜೀವನದ ಬಗ್ಗೆ ಯೋಚಿಸಬೇಕು” ಎಂದು ತಿಳಿಸಿದ್ದಾರೆ.
“ಈ ಜನರು ಪರಿಶೀಲಿಸದ (ವೆರಿಫೈ ಮಾಡದ) ಪೇಜ್‌ಗಳಿಂದ ಈ ಮೇಮ್‌ಗಳನ್ನು ಹಂಚಿಕೊಳ್ಳುತ್ತಾರೆ. ಏನೂ ಬೇಕಾದರೂ ಹೇಳಿ ಸುಮ್ಮನಾಗುತ್ತಾರೆ. ಆದರೆ ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ನಿಮಗೆ ತಾಕತ್ತಿದ್ದರೆ ಪರಿಶೀಲಿಸಿದ (ವೆರಿಫೈ ಮಾಡಿರುವ) ಪೇಜ್‌ನಿಂದ ಈ ಪೋಸ್ಟ್‌ಗಳನ್ನ ಮಾಡಿ. ಆಗ ನಾನು ಉತ್ತರಿಸುತ್ತೇನೆ. ಯಶಸ್ಸನ್ನು ಸಾಧಿಸಲು ಪ್ರಯತ್ನಿಸಿ, ಜನರಿಗೆ ಸಹಾಯ ಮಾಡಿ ಮತ್ತು ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ. ಆಗ ನೀವು ಒಳ್ಳೆಯ ವ್ಯಕ್ತಿ ಎಂದು ನಾನು ನಂಬುತ್ತೇನೆ” ಎಂದೂ ಕೂಡಾ ಮೊಹಮ್ಮದ್ ಶಮಿ ತಿಳಿಸಿದ್ದಾರೆ.
Mohammed Shami Breaks Silence On Sania Mirza Marriage Rumours, Says “If You Have Guts…#MohammadShami #SaniaMirza pic.twitter.com/V3FI0Y3jov
— Shubhankar Mishra (@shubhankrmishra) July 20, 2024




