ಟಿ20 ವಿಶ್ವಕಪ್ ಜಯಿಸಿದ ಸಂಭ್ರಮಾಚರಣೆಯ ಅಂಗವಾಗಿ ಮುಂಬೈನಲ್ಲಿ ಜು.4 ರಂದು ಭಾರತ ತಂಡದ ಆಟಗಾರರು ವಿಜಯೋತ್ಸವ ಮೆರವಣಿಗೆ ನಡಿಸಿದ್ದರು. ರೋಡ್ ಶೋನಲ್ಲಿ ಟಿಂ ಇಂಡಿಯಾ ಆಟಗಾರರನ್ನು ನೋಡಲು ಬಂದವರಲ್ಲಿ 11 ಮಂದಿಗೆ ಅನಾರೋಗ್ಯವುಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡ ಕಾರಣ 11 ಮಂದಿಗೆ ತಲೆ ಸುತ್ತು ಹಾಗೂ ಇತರ ಅನಾರೋಗ್ಯ ಉಂಟಾಗಿದೆ. ಇವರಲ್ಲಿ 9 ಮಂದಿಯನ್ನು ಸರ್ಕಾರಿ ಸ್ವಾಮ್ಯದ ಜಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಅಧಿಕ ಜನಸಮೂಹ ಸೇರಿದ್ದ ಕಾರಣ ಉಸಿರಾಟದ ಸಮಸ್ಯೆ ಸೇರಿದಂತೆ ಸಣ್ಣಪುಟ್ಟದಾಗಿ ಗಾಯಗೊಂಡಿದ್ದರು.
ಆಸ್ಪತ್ರೆಗೆ ದಾಖಲಾದವರ ಪರಿಸ್ಥಿತಿ ಸುಧಾರಿಸಿದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ ವಿಜಯೋತ್ಸವದ ಮೆರವಣಿಗೆ: ಸಾವಿರಾರು ಅಭಿಮಾನಿಗಳೊಂದಿಗೆ ಸಂಭ್ರಮಿಸಿದ ಟೀಂ ಇಂಡಿಯಾ
ಗಾಯಗೊಂಡ ಮತ್ತೊಬ್ಬನನ್ನು ಸೇಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ನಿಗಾ ಘಟಕದಲ್ಲಿಡಲಾಗಿದೆ.
ಮತ್ತೊಬ್ಬ ಗಾಯಾಳುವನ್ನು ದಕ್ಷಿಣ ಮುಂಬೈನ ಖಾಸಗಿ ಆಸ್ಪತ್ರೆಗೆ ಸೇರಿಸಲಾದರೂ ಆತ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾನೆ.
ಟೀಂ ಇಂಡಿಯಾ ಸದಸ್ಯರನ್ನು ನೋಡುವ ಸಲುವಾಗಿ ಸಾವಿರಾರು ಮಂದಿ ಸೇರುವ ಕಾರಣ ಮುಂಬೈ ವಾಂಖೆಡೆ ಕ್ರೀಡಾಂಗಣ ಹಾಗೂ ಸುತ್ತಮುತ್ತ ಬಿಗಿ ಭದ್ರತೆ ಆಯೋಜಿಸಲಾಗಿತ್ತು.





