- ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್
- ನೀರಜ್ ಸಹಿತ ಫೈನಲ್ಗೆ ಲಗ್ಗೆ ಇಟ್ಟ ಭಾರತದ ಮೂವರು ಜಾವೆಲಿನ್ ಎಸೆತಗಾರರು
ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕೂಟದಲ್ಲಿ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು 88.77 ಮೀಟರ್ ಎಸೆಯುವ ಮೂಲಕ ಫೈನಲ್ಗೆ ಪ್ರವೇಶಿಸಿದ್ದಲ್ಲದೇ, ಪ್ಯಾರಿಸ್ ಒಲಿಂಪಿಕ್ಸ್ಗೂ ಅರ್ಹತೆ ಪಡೆದಿದ್ದಾರೆ.
ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಅವರು ಮೊದಲ ಪ್ರಯತ್ನದಲ್ಲೇ 88.77 ಮೀಟರ್ ಎಸೆಯುವ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಅಭಿಯಾನ ಪ್ರಾರಂಭಿಸಿದರು.
ಮೊದಲ ಎಸೆತದಲ್ಲೇ ಫೈನಲ್ ಪ್ರವೇಶಿಸಿರುವ ಟೋಕಿಯೋ ಒಲಿಂಪಿಕ್ಸ್ನ ಚಿನ್ನದ ಹುಡುಗ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಕೂಡ ಚಿನ್ನ ಗೆಲ್ಲುವ ತವಕದಲ್ಲಿದ್ದಾರೆ.
ಒಂದು ವೇಳೆ ಚಿನ್ನದ ಪದಕ ಗೆದ್ದರೆ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಫೈನಲ್ ಸ್ಪರ್ಧೆಯು ರವಿವಾರ ನಡೆಯಲಿದೆ.
ನೀರಜ್ ಚೋಪ್ರಾ, ಕಳೆದ ವರ್ಷ ಅಮೆರಿಕದಲ್ಲಿ ನಡೆದಿದ್ದ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಈ ನಡುವೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ನೀರಜ್ ಚೋಪ್ರಾ ಸಹಿತ ಡಿಪಿ ಮನು ಮತ್ತು ಕಿಶೋರ್ ಜೆನಾ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಪುರುಷರ ವಿಭಾಗದ ಫೈನಲ್ನಲ್ಲಿ ಭಾರತದ ಮೂವರು ಜಾವೆಲಿನ್ ಎಸೆತಗಾರರು ಭಾಗವಹಿಸಲಿದ್ದಾರೆ.
ಪಾಕಿಸ್ತಾನದ ಅರ್ಷದ್ ನದೀಮ್ ‘ಬಿ’ ಗುಂಪಿನಲ್ಲಿ 86.79 ಮೀಟರ್ಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.





