ನ್ಯೂಜಿಲೆಂಡ್ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಜನವರಿ 11ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಭಾರತದಲ್ಲಿಯೇ ನಡೆಯಲಿರುವ ಸರಣಿಯನ್ನು ಟೀಮ್ ಇಂಡಿಯಾ ಗೆಲ್ಲುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಈ ಸರಣಿಯಲ್ಲಿ ಭಾರತೀಯ ವೇಗಿ ಬೌಲರ್ ಮೊಹಮ್ಮದ್ ಸಿರಾಜ್ ಅವರು ತಂಡಕ್ಕೆ ಮರಳಿದ್ದಾರೆ. ಗಾಯಗಳ ಕಾರಣಕ್ಕಾಗಿ ಕಳೆದ ಮೂರು ತಿಂಗಳಿನಿಂದ ವಿಶ್ರಾಂತಿಯಲ್ಲಿದ್ದ ಏಕದಿನ ಉಪನಾಯಕ ಶ್ರೇಯಸ್ ಅಯ್ಯರ್ ಕೂಡ ತಂಡಕ್ಕೆ ‘ಕಮ್ ಬ್ಯಾಕ್’ ಮಾಡಿದ್ದಾರೆ. ಇನ್ನು, ಜಸ್ಪ್ರಿತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದು, ತಂಡದಲ್ಲಿ ಹೊರಗಿಡಲಾಗಿದೆ.
ಕಿವೀಸ್ ವಿರುದ್ಧದ ಏಕದಿನ ಸರಣಿಯು ಜನವರಿ 11ರಂದು ವಡೋದರಾದಲ್ಲಿ ಆರಂಭವಾಗುತ್ತದೆ. ಜನವರಿ 14ರಂದು ರಾಜ್‌ಕೋಟ್ ಮತ್ತು ಜನವರಿ 18ರಂದು ಇಂದೋರ್‌ನಲ್ಲಿ ಪಂದ್ಯಗಳು ನಡೆಯಲಿವೆ.
ಸಿರಾಜ್ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಕೊನೆಯದಾಗಿ ಆಗಿದ್ದರು. ನಂತರದ ದಕ್ಷಿಣ ಆಫ್ರಿಕಾ ಜೊತೆಗಿನ ಟೂರ್ನಿಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಈವರೆಗೆ 47 ಏಕದಿನ ಪಂದ್ಯಗಳನ್ನು ಆಡಿರುವ ಸಿರಾಜ್, 24.67 ಸರಾಸರಿಯಲ್ಲಿ 73 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
“ಸಿರಾಜ್ ಅವರನ್ನು ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಕೈಬಿಡಲಾಗಿಲ್ಲ. ಅವರಿಗೆ ವಿಶ್ರಾಂತಿ ನೀಡಲಾಯಿತು. ಅವರು ನಮ್ಮ ವೇಗಿ ಬೌಲರ್‌ಗಳ ಗುಂಪಿನಲ್ಲಿ ಒಬ್ಬರಾಗಿದ್ದಾರೆ. ಇತರ ವೇಗಿಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಮತ್ತು ಬೌಲರ್‌ಗಳು ಫಿಟ್ ಮತ್ತು ಫ್ರೆಶ್ ಆಗಿರುವಂತೆ ನೋಡಿಕೊಳ್ಳುವ ಕಾರಣಕ್ಕಾಗಿ ಆಗ್ಗಾಗ್ಗೆ ಬದಲಾಯಿಸಲಾಗುತ್ತದೆ” ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇನ್ನು, ಅಯ್ಯರ್ ಅವರು ಅಕ್ಟೋಬರ್ 25 ರಂದು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಡೈವಿಂಗ್ ಕ್ಯಾಚ್‌ಗೆ ಪ್ರಯತ್ನಿಸುವಾಗ ಗಾಯಗೊಂಡಿದ್ದರು. ಹೀಗಾಗಿ, ಅವರು ಕಳೆದ ಮೂರು ತಿಂಗಳುಗಳಿಂದ ವಿಶ್ರಾಂತಿಯಲ್ಲಿದ್ದರು. ಈಗ, ಅವರೂ ಕೂಡ ತಂಡಕ್ಕೆ ಮರಳಿದ್ದಾರೆ.
ಈ ಲೇಖನ ಓದಿದ್ದೀರಾ?: 2025ರಲ್ಲಿ ಧರ್ಮಾಧಾರಿತ ಹಿಂಸಾಚಾರ, ಗುಂಪು ದಾಳಿಗಳು ಹೆಚ್ಚಳ !- ವರದಿ
ಆಲ್ ರೌಂಡರ್ ಅಟಗಾರ ಹಾರ್ದಿಕ್ ಪಾಂಡ್ಯ ಮತ್ತು ವೇಗಿ ಬೌಲರ್ ಜಸ್ಪ್ರೀತ್ ಬುಮ್ರಾ ಇಬ್ಬರಿಗೂ ಕೆಲಸದ ಹೊರೆ ನಿರ್ವಹಿಸಲು ವಿಶ್ರಾಂತಿ ನೀಡಲಾಗಿದೆ. “ಹಾರ್ದಿಕ್ ಪಾಂಡ್ಯ ಮತ್ತು ಬುಮ್ರಾಗೆ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಲು ಅನುಮತಿ ನೀಡಿಲ್ಲ. ಮುಂಬರುವ ಟಿ20 ವಿಶ್ವಕಪ್‌ಅನ್ನು ಪರಿಗಣಿಸಿ, ಅವರಿಗೆ ವಿಶ್ರಾಂತಿ ನೀಡಲಾಗಿದೆ” ಎಂದು ಬಿಸಿಸಿಐ ತಿಳಿಸಿದೆ.
ಕಿವೀಸ್ ವಿರುದ್ಧ ಟೂರ್ನಿಯಲ್ಲಿ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ತಂಡದಲ್ಲಿ; ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (WK), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ರಿಷಭ್ ಪಂತ್ (wk), ನಿತೀಶ್ ಕುಮಾರ್ ರೆಡ್ಡಿ, ಅರ್ಶ್‌ದೀಪ್ ಸಿಂಗ್ ಹಾಗೂ ಯಶಸ್ವಿ ಜೈಶ್ವಾಲ್ ಇರಲಿದ್ದಾರೆ.




