ಏಷ್ಯಾ ಕಪ್‌ನಲ್ಲಿ ಇಂದು ನಡೆಯಬೇಕಿದ್ದ ಯುಎಇ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಒಂದು ಗಂಟೆ ತಡವಾಗಿ ಆರಂಭವಾಗಲಿದೆ ಎಂದು ವರದಿಯಾಗಿದೆ.
ಮ್ಯಾಚ್ ರೆಫ್ರಿ ಆಂಡಿ ಪೈಕ್ರಾಫ್ಟ್ ಅವರನ್ನು ಟೂರ್ನಿಯಿಂದ ವಜಾಗೊಳಿಸುವಂತೆ ಈ ಹಿಂದೆ ಪಿಸಿಬಿ, ಐಸಿಸಿಗೆ ದೂರು ನೀಡಿತ್ತು. ಆದರೆ ಐಸಿಸಿ ಮಾತ್ರ ಆ ರೀತಿಯ ಯಾವುದೇ ಕ್ರಮ ತೆಗೆದುಕೊಳ್ಳುವುದನ್ನು ನಿರಾಕರಿಸಿತು. ಇದರಿಂದ ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೂರ್ನಿಯಿಂದ ತನ್ನ ಹೆಸರನ್ನು ಹಿಂಪಡೆಯಲು ನಿರ್ಧರಿಸಿದೆ ಎಂತಲೂ ವರದಿಯಾಗಿದೆ. ಯಾವುದಕ್ಕೂ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದು ಗಂಟೆ ಸಮಯಾವಕಾಶ ಕೇಳಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಏಷ್ಯಾ ಕಪ್ 2025 | ಪಾಕ್ ವಿರುದ್ಧ ಭಾರತಕ್ಕೆ ಸುಲಭ ಗೆಲುವು, ನಾಟಕೀಯ ಕ್ಷಣಗಳಿಗೂ ಸಾಕ್ಷಿಯಾದ ಪಂದ್ಯ
ಪೂರ್ವ ನಿಗದಿಯಂತೆ ಇಂದು ರಾತ್ರಿ 8 ಗಂಟೆಗೆ ಪಾಕಿಸ್ತಾನ ತಂಡ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ದುಬೈನಲ್ಲಿ ಆಡಬೇಕಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಕ್ವಿ ಅವರು ಎಕ್ಸ್‌ನಲ್ಲಿ ಪಾಕಿಸ್ತಾನ ತಂಡವನ್ನು ಕ್ರೀಡಾಂಗಣಕ್ಕೆ ತೆರಳಲು ಸೂಚಿಸಿರುವುದಾಗಿ ಘೋಷಿಸಿದ್ದಾರೆ. “ಪಾಕಿಸ್ತಾನ ತಂಡವನ್ನು ದುಬೈ ಕ್ರಿಕೆಟ್ ಕ್ರೀಡಾಂಗಣಕ್ಕೆ ತೆರಳಲು ಕೇಳಿಕೊಂಡಿದ್ದೇವೆ. ಮುಂದಿನ ವಿವರಗಳನ್ನು ಶೀಘ್ರದಲ್ಲಿ ತಿಳಿಸಲಾಗುವುದು,” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ, ಯುಎಇ ತಂಡವು ಈಗಾಗಲೇ ಕ್ರೀಡಾಂಗಣಕ್ಕೆ ಆಗಮಿಸಿತ್ತು. ಪಿಸಿಬಿ ಸಲಹೆಗಾರ ಅಮೀರ್ ಮಿರ್ ಅವರು ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, “ಪಂದ್ಯವು ವಿಳಂಬವಾಗಲಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಕ್ವಿ ಅವರು ಮಾಜಿ ಪಿಸಿಬಿ ಮುಖ್ಯಸ್ಥರಾದ ರಮೀಜ್ ರಾಜಾ ಮತ್ತು ನಜಮ್ ಸೇಠಿ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ,” ಎಂದು ತಿಳಿಸಿದರು.





