ಚಿನ್ನಸ್ವಾಮಿ ಅವರು ಕೇವಲ ಕ್ರೀಡಾಂಗಣ ನಿರ್ಮಿಸದೇ, ಪ್ರತಿಭೆಗಳನ್ನು ಬೆಳೆಸುವ ಶಕ್ತಿಶಾಲಿ ವ್ಯವಸ್ಥೆಯನ್ನು ರೂಪಿಸಿದರು. ಕ್ರೀಡಾಂಗಣದಲ್ಲಿ ಸುಸಜ್ಜಿತ ಪೆವಿಲಿಯನ್, ಉತ್ತಮ ಡ್ರೆಸ್ಸಿಂಗ್ ರೂಮ್‌ಗಳು ಮತ್ತು ಪ್ರೇಕ್ಷಕರಿಗೆ ಅನುಕೂಲಕರ ಗ್ಯಾಲರಿಗಳನ್ನು ನಿರ್ಮಿಸುವ ಮೂಲಕ ಮೂಲಸೌಕರ್ಯವನ್ನು ಬಲಪಡಿಸಿದರು. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಕೆಎಎಸ್‌ಸಿಎ ಹಣಕಾಸು ನಿರ್ವಹಣೆಯಲ್ಲಿ ಕಟ್ಟುನಿಟ್ಟಾದ ಶಿಸ್ತು ಜಾರಿಗೊಳಿಸಿ ಸಂಸ್ಥೆಗೆ ಆರ್ಥಿಕ ಆಧಾರ ಒದಗಿಸಿದರು.
ಬೆಂಗಳೂರಿನ ಹೃದಯಭಾಗದಲ್ಲಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವಾಗಲಾದರೂ ಪಂದ್ಯ ನಡೆಯುವಾಗ ಕೇಳಿಬರುವ ಕರತಾಡನ, ಅಭಿಮಾನಿಗಳ ಹರ್ಷೋದ್ಗಾರ ಕೇವಲ ಆಟಗಾರರಿಗೆ ಸೀಮಿತವಾಗಿದ್ದಲ್ಲ. ಆ ಬೃಹತ್ ಕಾಂಕ್ರಿಟ್ ಗೋಡೆಗಳ ನಡುವೆ, ಹಸಿರು ಹುಲ್ಲುಹಾಸಿನ ಪ್ರತಿ ಇಂಚಿನಲ್ಲೂ ಒಬ್ಬ ವ್ಯಕ್ತಿಯ ದೂರದರ್ಶಿತ್ವ ಮತ್ತು ಪರಿಶ್ರಮದ ಕಥೆ ಅಡಗಿದೆ. ಅವರೇ ಮಂಡ್ಯದ ಮಣ್ಣಿನ ಮಗ, ಕರ್ನಾಟಕ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಸಂಸ್ಥಾಪಕ ಎಂ ಚಿನ್ನಸ್ವಾಮಿ. ಒಬ್ಬ ಶ್ರೇಷ್ಠ ಆಡಳಿತಗಾರನಾಗಿ, ಕಾನೂನು ತಜ್ಞನಾಗಿ ಮತ್ತು ಅಪ್ರತಿಮ ಕ್ರಿಕೆಟ್ ಪ್ರೇಮಿಯಾಗಿ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೊಡುಗೆ ನೀಡಿದ್ದಾರೆ.
ಮಂಡ್ಯದಲ್ಲಿ ಜನನ
ಎಂ ಚಿನ್ನಸ್ವಾಮಿ (ಮಂಗಳಂ ಚಿನ್ನಸ್ವಾಮಿ) ಅವರು ಜನಿಸಿದ್ದು 1900ರ ಮಾರ್ಚ್ 29ರಂದು ಹಳೆಯ ಮೈಸೂರು ಭಾಗದ ಸಕ್ಕರೆ ನಾಡು ಮಂಡ್ಯದಲ್ಲಿ. ಗ್ರಾಮೀಣ ಸಂಸ್ಕೃತಿಯ ಕುಟುಂಬದಲ್ಲಿ ಬೆಳೆದ ಅವರು ಬಾಲ್ಯದಲ್ಲೇ ಶಿಸ್ತನ್ನು ರೂಢಿಸಿಕೊಂಡರು. ಶಿಕ್ಷಣಕ್ಕೆ ಮಹತ್ವ ನೀಡಿದ ಕಾರಣ ಅವರು ಮೈಸೂರು ಹಾಗೂ ಬಳಿಕ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ಕಾನೂನು ಕ್ಷೇತ್ರವನ್ನು ತಮ್ಮ ಜೀವನದ ಪ್ರಮುಖ ವೃತ್ತಿಯನ್ನಾಗಿ ಆರಿಸಿಕೊಂಡರು. 1925ರಲ್ಲಿ ವಕೀಲ ವೃತ್ತಿಗೆ ಪಾದಾರ್ಪಣೆ ಮಾಡಿದ ಅವರು, 1975ರವರೆಗೆ ನಾಲ್ಕು ದಶಕಕ್ಕೂ ಹೆಚ್ಚು ಕಾಲ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿದರು. ಈ ಕಾನೂನು ಅನುಭವವೇ ಮುಂದೆ ಕ್ರಿಕೆಟ್ ಆಡಳಿತದಲ್ಲಿ ಎದುರಾದ ಅನೇಕ ತೊಡಕುಗಳನ್ನು ನಿವಾರಿಸಲು ಮತ್ತು ಕ್ರೀಡಾಂಗಣ ನಿರ್ಮಾಣದಂತಹ ಬೃಹತ್ ಯೋಜನೆಗಳಿಗೆ ಸರ್ಕಾರದಿಂದ ಒಪ್ಪಿಗೆ ಪಡೆಯಲು ಪ್ರಮುಖ ಅಸ್ತ್ರವಾಯಿತು.
ಕರ್ನಾಟಕ ಕ್ರಿಕೆಟ್ ಸಂಸ್ಥೆಯ (KSCA) ಉದಯ
ಕರ್ನಾಟಕ ಕ್ರಿಕೆಟ್ ಇತಿಹಾಸವನ್ನು ಚಿನ್ನಸ್ವಾಮಿ ಅವರ ಹೆಸರಿಲ್ಲದೆ ಕಲ್ಪಿಸುವುದೇ ಅಸಾಧ್ಯ. ಮೈಸೂರು ರಾಜ್ಯ ಕ್ರಿಕೆಟ್ ಸಂಸ್ಥೆ (ಈಗಿನ ಕೆಎಸ್‌ಸಿಎ) ಸ್ಥಾಪನೆಯ ಸಂದರ್ಭದಲ್ಲಿ ಅವರು ಸಂಸ್ಥಾಪಕ ಸದಸ್ಯರಾಗಿ ನೀಡಿದ ಕೊಡುಗೆ ಅಪಾರ. ಅಂದಿನ ಅವರ ದೃಢ ಬುನಾದಿ ಇಂದು ಕೆಎಸ್‌ಸಿಎಯನ್ನು ದೇಶದ ಅತ್ಯಂತ ಶ್ರೀಮಂತ ಮತ್ತು ಸುಸಜ್ಜಿತ ಕ್ರಿಕೆಟ್ ಸಂಸ್ಥೆಗಳ ಸಾಲಿನಲ್ಲಿ ನಿಲ್ಲಿಸಿದೆ. ಸಂಸ್ಥೆಯ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಚಿನ್ನಸ್ವಾಮಿ, 1953 ರಿಂದ 1978ರವರೆಗೆ 25 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಆಡಳಿತಕ್ಕೆ ಹೊಸ ಜೀವ ತುಂಬಿದರು. ನಂತರ 1978 ರಿಂದ 1990 ರವರೆಗೆ 12 ವರ್ಷಗಳ ಕಾಲ ಅಧ್ಯಕ್ಷರಾಗಿ ಕೆಎಸ್‌ಸಿಎಯನ್ನು ಮತ್ತಷ್ಟು ಪ್ರಗತಿಯ ಮಾರ್ಗದಲ್ಲಿ ಮುನ್ನಡೆಸಿದರು. ಸುಮಾರು ನಾಲ್ಕು ದಶಕಗಳ ಕಾಲ ಸಂಸ್ಥೆಯ ಆಧಾರಸ್ತಂಭವಾಗಿ ನಿಂತ ಅವರು, ಕ್ರಿಕೆಟ್ ಅನ್ನು ಕೇವಲ ಆಟವಲ್ಲ, ಒಂದು ಕ್ರಮಬದ್ಧ ಮತ್ತು ಶಿಸ್ತಿನ ಸಂಸ್ಥೆಯಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನು ಓದಿದ್ದೀರಾ? ದೀಪಿಕಾ ಟಿ ಸಿ | ಅಂಧತ್ವದ ಗೆರೆಗಳನ್ನು ಮೀರಿ ಕ್ರಿಕೆಟ್‌ನಲ್ಲಿ ಬೆಳಗುತ್ತಿರುವ ನಕ್ಷತ್ರ
ಚಿನ್ನಸ್ವಾಮಿ ಕ್ರೀಡಾಂಗಣ: ಒಂದು ಐತಿಹಾಸಿಕ ಕೊಡುಗೆ
ಎಂ. ಚಿನ್ನಸ್ವಾಮಿ ಅವರ ಜೀವನದ ಮಹತ್ವದ ಸಾಧನೆ ಎಂದರೆ ಬೆಂಗಳೂರಿನ ಹೃದಯಭಾಗವಾದ ಎಂ.ಜಿ. ರಸ್ತೆ ಮತ್ತು ಕಬ್ಬನ್ ಪಾರ್ಕ್ ಪಕ್ಕದಲ್ಲಿ ನಿರ್ಮಾಣವಾದ ಬೃಹತ್ ಕ್ರೀಡಾಂಗಣ. 1960ರ ದಶಕದವರೆಗೂ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳಿಗೆ ಸೂಕ್ತವಾದ ಮೈದಾನವಿರಲಿಲ್ಲ. ಪಂದ್ಯಗಳು ಸೆಂಟ್ರಲ್ ಕಾಲೇಜು ಮೈದಾನದಲ್ಲೇ ನಡೆಯುತ್ತಿದ್ದವು. ಈ ಕೊರತೆಯನ್ನು ನಿವಾರಿಸಬೇಕೆಂಬ ದೃಢಸಂಕಲ್ಪ ಚಿನ್ನಸ್ವಾಮಿ ಅವರದ್ದಾಗಿತ್ತು. ನಗರದ ಅತ್ಯಂತ ಪ್ರಮುಖ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಬೇಕೆಂಬುದು ಅವರ ಕನಸಾಗಿದ್ದರೂ, ಅಂದಿನ ಕಾಲದಲ್ಲಿ ಇಂತಹ ಪ್ರಮುಖ ಜಾಗ ಪಡೆಯುವುದು ಸುಲಭವಾಗಿರಲಿಲ್ಲ. ತಮ್ಮ ಕಾನೂನು ಜ್ಞಾನ, ರಾಜಕೀಯ ಸಂಪರ್ಕ ಹಾಗೂ ಛಲಬಿಡದ ಹೋರಾಟದ ಮೂಲಕ 1969ರಲ್ಲಿ ಕರ್ನಾಟಕ ಸರ್ಕಾರವನ್ನು ಮನವರಿಕೆ ಮಾಡಿ ಕ್ರೀಡಾಂಗಣಕ್ಕಾಗಿ ಜಾಗ ಮಂಜೂರು ಮಾಡಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.
ಕ್ರೀಡಾಂಗಣ ನಿರ್ಮಾಣ ಪೂರ್ಣಗೊಂಡ ನಂತರ, ಅದಕ್ಕೆ ಹೆಸರಿಡುವ ಪ್ರಶ್ನೆ ಉದ್ಭವಿಸಿತು. ಆಗ ಸಮಿತಿಯಲ್ಲಿದ್ದ ಎಲ್ಲರೂ ಒಮ್ಮತದಿಂದ “ಈ ಮೈದಾನಕ್ಕೆ ಚಿನ್ನಸ್ವಾಮಿ ಅವರ ಹೆಸರೇ ಆಗಬೇಕು” ಎಂದು ಪಟ್ಟು ಹಿಡಿದರು. ಆದರೆ ಸರಳತೆಗೂ, ವಿನಯಕ್ಕೂ ಹೆಸರಾದ ಚಿನ್ನಸ್ವಾಮಿ ಅವರು ತಮ್ಮ ಹೆಸರನ್ನು ಬಳಸಲು ಮೊದಲು ಒಪ್ಪಿರಲಿಲ್ಲ. ಕೊನೆಗೆ ಸಮಿತಿಯ ಒತ್ತಾಯಕ್ಕೆ ಮಣಿದು ತಮ್ಮ ಹೆಸರನ್ನು ನೀಡಲು ಸಮ್ಮತಿಸಿದಾಗ, 1969ರಲ್ಲಿ ಈ ಮೈದಾನಕ್ಕೆ “ಎಂ. ಚಿನ್ನಸ್ವಾಮಿ ಕ್ರೀಡಾಂಗಣ” ಎಂಬ ನಾಮಕರಣ ನಡೆಯಿತು. ಕ್ರಿಕೆಟ್ ಆಡಳಿತಗಾರನೊಬ್ಬನ ಹೆಸರಿನಲ್ಲಿ ನಾಮಕರಣಗೊಂಡ ದೇಶದ ಮೊದಲ ಮತ್ತು ಏಕೈಕ ಕ್ರೀಡಾಂಗಣ ಎಂಬ ವಿಶೇಷ ಸ್ಥಾನಮಾನ ಇಂದಿಗೂ ಈ ಮೈದಾನಕ್ಕೆ ಅಂಟಿಕೊಂಡಿದೆ.

ಬಿಸಿಸಿಐ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು
ಚಿನ್ನಸ್ವಾಮಿ ಅವರ ಕಾರ್ಯವೈಖರಿ ಕರ್ನಾಟಕದ ಗಡಿಯನ್ನು ಮೀರಿ ದೇಶ–ವಿದೇಶಗಳ ಕ್ರಿಕೆಟ್ ವಲಯದಲ್ಲೂ ಗುರುತಿಸಿಕೊಂಡಿತ್ತು. ಅವರ ಆಡಳಿತಾತ್ಮಕ ದಕ್ಷತೆಯನ್ನು ಮೆಚ್ಚಿದ ಬಿಸಿಸಿಐ, ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿತು. 1960ರಿಂದ 1965ರವರೆಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅವರು, ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ವೃತ್ತಿಪರತೆಯನ್ನು ಹೆಚ್ಚಿಸುವ ಹಲವಾರು ಸಂದರ್ಭಗಳಲ್ಲಿ ತಮ್ಮ ಪ್ರಭಾವ ಮೂಡಿಸಿದರು. ನಂತರ 1977 ರಿಂದ 1980ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ನೇತೃತ್ವವಹಿಸಿ, ದೇಶದ ಕ್ರಿಕೆಟ್‌ಗೆ ಹೊಸ ದಿಕ್ಕು ನೀಡಿದ ಅನೇಕ ಸುಧಾರಣೆಗಳಿಗೆ ಕಾರಣರಾದರು. ಇವರ ಸಾಮರ್ಥ್ಯವನ್ನು ಗುರುತಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 1965, 1973 ಮತ್ತು 1977–1980ರ ಅವಧಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ನೀಡಿದ್ದು ಅವರ ಕೀರ್ತಿಗೆ ಮತ್ತೊಂದು ಸಮ್ಮಾನ. 1967–68ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಅವರು ತಂಡದ ಖಜಾಂಚಿ ಮತ್ತು ಅಧಿಕಾರಿಯಾಗಿ ಜೊತೆಗಿದ್ದರೆ, ನಂತರ ಆಸ್ಟ್ರೇಲಿಯಾ ಭಾರತ ಪ್ರವಾಸದ ವೇಳೆಯಲ್ಲಿ ಸರಣಿಯ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದರು. ಕ್ರಿಕೆಟ್ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಸೇವೆಯನ್ನು ಗುರುತಿಸಿದ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (MCC) 1969ರಲ್ಲಿ ಅವರಿಗೆ ಗೌರವ ಆಜೀವ ಸದಸ್ಯತ್ವ ನೀಡಿ ಸನ್ಮಾನಿಸಿತು.
ಕರ್ನಾಟಕ ಕ್ರಿಕೆಟ್ಗೆ ನೀಡಿದ ಸುಧಾರಣೆಗಳು
ಚಿನ್ನಸ್ವಾಮಿ ಅವರು ಕೇವಲ ಕ್ರೀಡಾಂಗಣ ನಿರ್ಮಿಸದೇ, ಪ್ರತಿಭೆಗಳನ್ನು ಬೆಳೆಸುವ ಶಕ್ತಿಶಾಲಿ ವ್ಯವಸ್ಥೆಯನ್ನು ರೂಪಿಸಿದರು. ಕ್ರೀಡಾಂಗಣದಲ್ಲಿ ಸುಸಜ್ಜಿತ ಪೆವಿಲಿಯನ್, ಉತ್ತಮ ಡ್ರೆಸ್ಸಿಂಗ್ ರೂಮ್‌ಗಳು ಮತ್ತು ಪ್ರೇಕ್ಷಕರಿಗೆ ಅನುಕೂಲಕರ ಗ್ಯಾಲರಿಗಳನ್ನು ನಿರ್ಮಿಸುವ ಮೂಲಕ ಮೂಲಸೌಕರ್ಯವನ್ನು ಬಲಪಡಿಸಿದರು. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಕೆಎಎಸ್‌ಸಿಎ ಹಣಕಾಸು ನಿರ್ವಹಣೆಯಲ್ಲಿ ಕಟ್ಟುನಿಟ್ಟಾದ ಶಿಸ್ತು ಜಾರಿಗೊಳಿಸಿ ಸಂಸ್ಥೆಗೆ ದಿಟ್ಟ ಆರ್ಥಿಕ ಆಧಾರ ಒದಗಿಸಿದರು. ಜೊತೆಗೆ ಗ್ರಾಮೀಣ ಮತ್ತು ಸ್ಥಳೀಯ ಪ್ರತಿಭೆಗಳ ಗುರುತಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಅವರಿಗೆ ಅವಕಾಶ ಕಲ್ಪಿಸಿದರು. ಅವರ ನೇತೃತ್ವದಲ್ಲಿ ಕರ್ನಾಟಕ (ಅಂದಿನ ಮೈಸೂರು) ರಣಜಿ ಟ್ರೋಫಿಯಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು.
ಚಿನ್ನಸ್ವಾಮಿ ಅವರು ತಮ್ಮ ವೃತ್ತಿ ಮತ್ತು ಕ್ರಿಕೆಟ್ ಆಡಳಿತದಲ್ಲಿ ಎಷ್ಟು ಕಠಿಣ ಶಿಸ್ತನ್ನು ಹೊಂದಿದ್ದರೋ, ವೈಯಕ್ತಿಕ ಜೀವನದಲ್ಲಿಯೂ ಅಷ್ಟೇ ಸರಳವಾಗಿದ್ದರು. ವಕೀಲ ವೃತ್ತಿ ಮತ್ತು ಕ್ರಿಕೆಟ್ ಆಡಳಿತ ಎರಡನ್ನೂ ಸಮತೂಕದಲ್ಲಿ ನಿಭಾಯಿಸುತ್ತಿದ್ದರು. ರಾಜ್ಯ ಕ್ರಿಕೆಟ್‌ನಲ್ಲಿ ಹಲವು ಸುಧಾರಣೆ ತಂದ ಎಂ. ಚಿನ್ನಸ್ವಾಮಿ ಅವರು 1991ರ ನವೆಂಬರ್ 8ರಂದು, 91ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರು ಕಟ್ಟಿಸಿದ ಕ್ರೀಡಾಂಗಣ ಇಂದು ವಿಶ್ವದ ಅತ್ಯುತ್ತಮ ಕ್ರಿಕೆಟ್ ಮೈದಾನಗಳಲ್ಲಿ ಒಂದಾಗಿ ನಿಂತಿದೆ. 1996ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಸೇರಿದಂತೆ 2011ರ ವಿಶ್ವಕಪ್ ಪಂದ್ಯಗಳು ಮತ್ತು ಐಪಿಎಲ್‌ನ ಅನೇಕ ಪಂದ್ಯಗಳು ಈ ಮೈದಾನದಲ್ಲಿ ನಡೆದಿದ್ದು, ಅವರ ದೂರದರ್ಶಿತ್ವದ ಮಹತ್ವವನ್ನು ಸಾಬೀತುಪಡಿಸುತ್ತವೆ.
ಜಿ.ಆರ್. ವಿಶ್ವನಾಥ್, ಬಿ ಎಸ್ ಚಂದ್ರಶೇಖರ್, ಸಯ್ಯದ್ ಕಿರ್ಮಾನಿ, ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಸೇರಿದಂತೆ ಭಾರತದ ಹಲವು ದಿಗ್ಗಜ ಕ್ರಿಕೆಟಿಗರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ರೂಪುಗೊಂಡರು. ಕರ್ನಾಟಕ ಕ್ರಿಕೆಟ್ ಇಂದು ತಲುಪಿರುವ ಎತ್ತರಕ್ಕೆ ಸಿಂಹಪಾಲು ’ಮೇಷ್ಟ್ರು’ ಎಂದು ಕರೆಯಲ್ಪಡುತ್ತಿದ್ದ ಎಂ. ಚಿನ್ನಸ್ವಾಮಿ ಅವರಿಗೆ ಸಲ್ಲುತ್ತದೆ. ಆಡಳಿತಗಾರನೊಬ್ಬ ತನ್ನ ಶಿಸ್ತು, ಬದ್ಧತೆ ಮತ್ತು ದೂರದರ್ಶಿತ್ವದಿಂದ ಒಂದು ಕ್ರೀಡೆಯ ಬೆಳವಣಿಗೆಯನ್ನು ಹೇಗೆ ಮಾರ್ಪಡಿಸಬಲ್ಲನು ಎಂಬುದಕ್ಕೆ ಅವರ ಜೀವನವೇ ಶ್ರೇಷ್ಠ ಪಾಠ, ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳಸಿಕೊಳ್ಳುವವರಿಗೆ ಮುಂದಿನ ಪೀಳಿಗೆಗಳಿಗೆ ಸ್ಪೂರ್ತಿದಾಯಕ ದಾರಿದೀಪವೂ ಹೌದು.






