ಭಾರತದ ಮಾಜಿ ಆಲ್‌ರೌಂಡರ್, ಕರ್ನಾಟಕದವರಾದ ರೋಜರ್ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು, ಸದ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ರಾಜೀವ್ ಶುಕ್ಲಾ ಮುಂದಿನ ಚುನಾವಣೆಯವರೆಗೂ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿಯಮಗಳ ಪ್ರಕಾರ, 70 ವಯಸ್ಸಿನ ನಂತರ ಯಾವುದೇ ಪದಾಧಿಕಾರಿಗಳು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗುತ್ತಾರೆ. ಇತ್ತೀಚಿಗೆ ಜು.19ರಂದು ರೋಜರ್ ಬಿನ್ನಿ ಅವರು 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಹೀಗಾಗಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿದೆ.
2017ರ ಸುಪ್ರೀಂ ಕೋರ್ಟ್‌ನ ಶಿಫಾರಸುಗಳ ಪ್ರಕಾರ, ಬಿಸಿಸಿಐನಂತಹ ಕೆಲವು ಭಾರತೀಯ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಒಟ್ಟು 9 ವರ್ಷಗಳು ಅಥವಾ ಸತತ ಆರು ವರ್ಷಗಳನ್ನು ಪೂರೈಸಿದ ನಂತರ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ. ಈ ನಿಯಮಗಳು ಹೊಸ ನಾಯಕತ್ವವನ್ನು ಉತ್ತೇಜಿಸುವ ಮತ್ತು ಅಧಿಕಾರದ ಕೇಂದ್ರೀಕರಣವನ್ನು ತಡೆಯುವ ಮೂಲ ಗುರಿಯನ್ನು ಹೊಂದಿದೆ.
ಇದನ್ನು ಓದಿದ್ದೀರಾ? ನನ್ನ ತಂಟೆಗೆ ಬರದಂತೆ ಹೇಳಿ; ಕೋಚ್‌ಗೆ ಎಚ್ಚರಿಕೆ ನೀಡಿದ್ದ ಸೆಹ್ವಾಗ್
ಈ ಬೆಳವಣಿಗೆಯೊಂದಿಗೆ ಬಿಸಿಸಿಐ ಭವಿಷ್ಯದ ನೇತೃತ್ವದ ಕುರಿತು ಕುತೂಹಲ ಹೆಚ್ಚಿದೆ. ರೋಜರ್ ಬಿನ್ನಿಯವರು ಮುಂದಿನ ಚುನಾವಣೆಯಲ್ಲಿ ಮರು ಸ್ಪರ್ಧಿಸಿದರೆ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಮರಳುವ ಸಾಧ್ಯತೆಯಿದೆ. ಇಲ್ಲದಿದ್ದರೆ ಬಿಸಿಸಿಐಗೆ ಹೊಸ ಅಧ್ಯಕ್ಷರು ನೇಮಕವಾಗಲಿದ್ದಾರೆ.
ಬುಧವಾರ (ಆ.29) ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯು ಶುಕ್ಲಾ ಅವರ ನೇತೃತ್ವದಲ್ಲಿ ನಡೆದಿದ್ದು, ಸಭೆಯಲ್ಲಿ ಡ್ರೀಮ್ 11 ಒಪ್ಪಂದವನ್ನು ಮುಕ್ತಾಯಗೊಳಿಸುವುದರ ಜೊತೆಗೆ ಮುಂದಿನ ಎರಡೂವರೆ ವರ್ಷಗಳ ಕಾಲ ಹೊಸ ಪ್ರಾಯೋಜಕರ ಹುಡುಕಾಟದ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನೂ ಸೆಪ್ಟೆಂಬರ್ 10ರಂದು ಏಷ್ಯಾ ಕಪ್ ಪ್ರಾರಂಭವಾಗುವುದರೊಳಗೆ ಹೊಸ ಪ್ರಾಯೋಜಕರನ್ನು ಕಂಡುಕೊಳ್ಳಲಿದೆ. ಇಲ್ಲದಿದ್ದರೆ ಆಟಗಾರರು ಪ್ರಾಯೋಜಕರಿಲ್ಲದ ಜರ್ಸಿ ಧರಿಸಿ ಆಟವಾಡಲಿದ್ದಾರೆ ಎನ್ನಲಾಗಿದೆ.





