ನಿನ್ನೆ ರಾಂಚಿಯಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯವು ಹಲವು ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಯಿತು.
ರೋಹಿತ್ ಶರ್ಮಾ ಸಿಕ್ಸರ್ ಸರದಾರ
ಈ ಪಂದ್ಯವು ಭಾರತಕ್ಕೆ ಗೆಲುವು ತಂದರೂ, ಎರಡೂ ತಂಡಗಳ ಆಟಗಾರರು ತಮ್ಮ ಪ್ರದರ್ಶನದ ಮೂಲಕ ಚರಿತ್ರೆಯಲ್ಲಿ ಹೊಸ ಪುಟಗಳನ್ನು ಬರೆದರು. ಮೊದಲು ಭಾರತದ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ, ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮುರಿದರು. ಅವರು ಈಗ 352 ಸಿಕ್ಸರ್‌ಗಳೊಂದಿಗೆ ಶಾಹಿದ್ ಅಫ್ರಿದಿಯ 351 ದಾಖಲೆಯನ್ನು ಹಿಂದಿಕ್ಕಿದರು.
ವಿರಾಟ್ ಕೊಹ್ಲಿ ಶತಕದ ದಾಖಲೆ
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಒಟ್ಟಿಗೆ ಆಡಿದ 392ನೇ ಅಂತರರಾಷ್ಟ್ರೀಯ ಪಂದ್ಯವಾಗಿದ್ದು, ಇದು ಭಾರತಕ್ಕಾಗಿ ಒಂದು ಜೋಡಿಯ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯಾಗಿದೆ. ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ 391 ಏಕದಿನ ದಾಖಲೆಯನ್ನು ಮೀರಿಸಿದರು. ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾದರು. ಹಾಗೆಯೇ ವಿರಾಟ್ ಕೊಹ್ಲಿ ರಾಂಚಿ ಮೈದಾನದಲ್ಲಿ ಆಡಿದ 5 ಇನಿಂಗ್ಸ್‌ಗಳಲ್ಲಿ 3ನೇ ಶತಕವನ್ನು ಬಾರಿಸಿದರು. ಈ ಮೂಲಕ ಭಾರತದ ನಿರ್ದಿಷ್ಟ ಮೈದಾನವೊಂದರಲ್ಲಿ ವೇಗವಾಗಿ 3 ಶತಕ ಬಾರಿಸಿದ ದಾಖಲೆ ಬರೆದರು.
ದಕ್ಷಿಣ ಆಫ್ರಿಕಾದ ದಾಖಲೆ
ದಕ್ಷಿಣ ಆಫ್ರಿಕಾ ತಂಡವು ಕೇವಲ 11 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೂ ಛಲ ಬಿಡದೆ ಹೋರಾಡಿ 332 ರನ್ ಕಲೆಹಾಕಿತು. ಏಕದಿನ ಇತಿಹಾಸದಲ್ಲಿ 15 ರನ್‌ಗಳ ಒಳಗೆ 3 ವಿಕೆಟ್ ಕಳೆದುಕೊಂಡ ನಂತರವೂ ಬೆನ್ನಟ್ಟಿ 300ರ ಗಡಿ ದಾಟಿದ ವಿಶ್ವದ ಮೊದಲ ತಂಡ ದಕ್ಷಿಣ ಆಫ್ರಿಕಾ ಆಗಿದೆ.
ಇದನ್ನು ಹೋದಿದ್ದೀರಾ? ವ್ಯಕ್ತಿಚಿತ್ರ | KSCA ಕ್ರೀಡಾಂಗಣದ ಶಿಲ್ಪಿ- ಎಂ ಚಿನ್ನಸ್ವಾಮಿ
ತಂಡದ ಪರ ಮಾರ್ಕೊ ಯಾನ್ಸೆನ್ (70) ಮತ್ತು ಕಾರ್ಬಿನ್ ಬಾಷ್ (67) ಕೆಳಕ್ರಮಾಂಕದಲ್ಲಿ (7ನೇ ಕ್ರಮಾಂಕದ ನಂತರ) ಅದ್ಭುತ ಆಟ ಪ್ರದರ್ಶಿಸಿ ಅರ್ಧಶತಕಗಳನ್ನು ಬಾರಿಸಿದ್ದು ಕೂಡ ದಾಖಲೆಯಾಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಒಟ್ಟು 681 ರನ್ ದಾಖಲಾದವು. ಇದು ಭಾರತ-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯಗಳ ಇತಿಹಾಸದಲ್ಲೇ ಅತ್ಯಧಿಕ ಮೊತ್ತವಾಗಿದೆ.
ಕುಲದೀಪ್ ಯಾದವ್ ಸ್ಪಿನ್ ಮೋಡಿ
ಕುಲದೀಪ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಬಾರಿಗೆ 4ಕ್ಕೂ ಹೆಚ್ಚು ವಿಕೆಟ್ ಪಡೆದರು. ನಿರ್ದಿಷ್ಟ ಎದುರಾಳಿಯ ವಿರುದ್ಧ ಹೆಚ್ಚು ಬಾರಿ ಈ ಸಾಧನೆ ಮಾಡಿದ ಭಾರತದ ಬೌಲರ್ ಎಂಬ ಕೀರ್ತಿಗೆ ಪಾತ್ರರಾದರು. ಜಹೀರ್ ಖಾನ್ ಮತ್ತು ಶಮಿ ಅವರ ದಾಖಲೆ ಈ ಪಂದ್ಯದಲ್ಲಿ ಅಳಿಸಿಹೋಯಿತು.
ಬ್ಯಾಟ್ಸ್‌ಮನ್‌ಗಳ ಅಬ್ಬರ ಮತ್ತು ಬೌಲರ್‌ಗಳ ಸಮಯೋಚಿತ ದಾಳಿಯಿಂದ ಭಾರತ ತಂಡವು ರೋಚಕ ಜಯ ಸಾಧಿಸಿತು. ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ದಕ್ಷಿಣ ಆಫ್ರಿಕಾದ ಕೆಳಕ್ರಮಾಂಕದ ಆಟಗಾರರು ತೋರಿದ ಕೆಚ್ಚೆದೆಯ ಹೋರಾಟ ಭಾರತದ ಪಾಳಯದಲ್ಲಿ ಆತಂಕ ಮೂಡಿಸಿತ್ತು. ಆದರೆ ಭಾರತದ ಬೃಹತ್ ಮೊತ್ತದ (349) ಒತ್ತಡವನ್ನು ಮೀರಿ ನಿಲ್ಲಲು ಪ್ರವಾಸಿಗರಿಗೆ ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-0 ಮೇಲುಗೈ ಸಾಧಿಸಿದೆ.





