ಭಾರತೀಯ ದೇಶೀಯ ಕ್ರಿಕೆಟ್‌ನ ಅತ್ಯುನ್ನತ ವೇದಿಕೆ ರಣಜಿ ಟ್ರೋಫಿ. ದಶಕಗಳಿಂದ ಈ ಟೂರ್ನಿ ಹಲವು ಕ್ರಿಕೆಟ್ ದಿಗ್ಗಜರನ್ನು ಹುಟ್ಟುಹಾಕಿದೆ. ಆದರೆ ಈ ಬಾರಿಯ ರಣಜಿ ಫೈನಲ್ಸ್ ಇನ್ನೊಂದು ಕಾರಣಕ್ಕೆ ಸಕ್ಕತ್ ಹೈಪ್ ಕ್ರಿಯೇಟ್ ಮಾಡಿದೆ. ಇತಿಹಾಸ ನಿರ್ಮಿಸುವತ್ತ ಜಮ್ಮು-ಕಾಶ್ಮೀರ ತಂಡ ದಾಪುಗಾಲು ಹಾಕುತ್ತಿದೆ.
ಪಂದ್ಯದ ಮೂರನೇ ದಿನವಾದ ಗುರುವಾರ, ಜಮ್ಮು-ಕಾಶ್ಮೀರ ತಂಡ ಕೇವಲ 57 ರನ್ ಕಲೆಹಾಕುವ ಹೊತ್ತಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಎರಡನೇ ದಿನದಾಟದ ಅಂತ್ಯಕ್ಕೆ ಜಮ್ಮು-ಕಾಶ್ಮೀರ 6 ವಿಕೆಟ್‌ಗೆ 527 ರನ್ ಪೇರಿಸಿತ್ತು. ಆದರೆ ಮೂರನೇ ದಿನದ ಆರಂಭದಲ್ಲಿ ಕರ್ನಾಟಕ ಬೌಲರ್‌ಗಳು ಶಿಸ್ತಿನ ದಾಳಿಯೊಂದಿಗೆ ತ್ವರಿತವಾಗಿ ಉಳಿದ ವಿಕೆಟ್‌ಗಳನ್ನು ಉರುಳಿಸಿಬಿಟ್ಟರು.
ನಾಲ್ಕನೇ ದಿನವಾದ ಇಂದು ಶುಕ್ರವಾರ, ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ ಜಮ್ಮು-ಕಾಶ್ಮೀರದ ಬೃಹತ್ 584 ರನ್‌ಗಳಿಗೆ ಉತ್ತರವಾಗಿ 93.3 ಓವರ್‌ಗಳಲ್ಲಿ 293 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಕರ್ನಾಟಕ 291 ರನ್‌ಗಳ ಹಿನ್ನಡೆ ಅನುಭವಿಸಬೇಕಾಯಿತು. ರಣಜಿ ಟ್ರೋಫಿ ಫೈನಲ್‌ಗೆ ಮೊದಲ ಬಾರಿಗೆ ಪ್ರವೇಶಿಸಿರುವ ಕಣಿವೆನಾಡಿನ ತಂಡ ಈ ಪ್ರದರ್ಶನದ ಮೂಲಕ ಪಂದ್ಯದಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದ್ದು, ಇತಿಹಾಸ ನಿರ್ಮಾಣದ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ.
ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 220 ರನ್ ಗಳಿಸಿದ್ದ ಕರ್ನಾಟಕ, ನಾಲ್ಕನೇ ದಿನವಾದ ಶುಕ್ರವಾರ ನಿರೀಕ್ಷಿತ ಪ್ರತಿರೋಧ ನೀಡಲಿಲ್ಲ. ದಿನದ ಮೊದಲ ಅವಧಿಯಲ್ಲೇ ತಂಡವು ಕೇವಲ 73 ರನ್‌ಗಳಿಗೆ ಉಳಿದ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಮಯಾಂಕ್ ಅಗರವಾಲ್ ಹಾಗೂ 27 ರನ್‌ಗಳೊಂದಿಗೆ ಅಜೇಯರಾಗಿದ್ದ ಕೃತಿಕ್ ಕೃಷ್ಣ ನಾಲ್ಕನೇ ದಿನ ಬ್ಯಾಟಿಂಗ್ ಮುಂದುವರೆಸಿದರು. ಆದರೆ ಆರಂಭದಲ್ಲೇ ಕೃತಿಕ್ ಕೃಷ್ಣ 36 ರನ್‌ಗಳಿಗೆ ಔಟಾದರೆ, ಅವರ ಬಳಿಕ ಬಂದ ವಿದ್ಯಾಧರ ಪಾಟೀಲ ಕೂಡ 11 ರನ್‌ಗಳಿಗೆ ಪೆವಿಲಿಯನ್ ಹಾದಿಹಿಡಿದರು. ಇನ್ನೊಂದೆಡೆ ಮಯಾಂಕ್ ಅಗರವಾಲ್ ಮಾತ್ರ ನಾಲ್ಕನೇ ದಿನವೂ ಏಕಾಂಗಿ ಹೋರಾಟ ಮುಂದುವರೆಸಿದರು. ದೀರ್ಘಕಾಲ ಕ್ರೀಸ್‌ನಲ್ಲಿ ನೆಲೆಸಿದ ಅವರು 443 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿ 260 ಎಸೆತಗಳಲ್ಲಿ 160 ರನ್ ಪೇರಿಸಿದರು. ಆದರೆ ಅಂತಿಮವಾಗಿ ನಬಿ ಬೌಲಿಂಗ್‌ನಲ್ಲಿ ಔಟಾದರು. ಇದಾದ ಬಳಿಕ, ಶಿಖರ್ ಶೆಟ್ಟಿ 0 ಹಾಗೂ ಪ್ರಸಿದ್ಧ್ ಕೃಷ್ಣ 4 ರನ್ಗೆ ಔಟಾಗುವ ಮೂಲಕ ಕರ್ನಾಟಕ ಎಲ್ಲಾ ವಿಕೆಟ್ ಕಳೆದುಕೊಂಡಿತು. ವಿಜಯ್ಕುಮಾರ್ ವೈಶಾಖ್ ಅಜೇಯ 17 ರನ್ ಗಳಿಸಿದರು.
291 ರನ್‌ಗಳ ಭಾರಿ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ಗೆ ಕಾಲಿಟ್ಟ ಜೆಕೆ ತಂಡ, 19 ಓವರ್‌ಗಳಲ್ಲಿ2 ವಿಕೆಟ್ ನಷ್ಟಕ್ಕೆ66 ರನ್ ಸೇರಿಸಿಕೊಂಡಿದೆ. ಈ ಹಂತದಲ್ಲಿ ತಂಡ ತನ್ನ ಆರಂಭಿಕ ಬ್ಯಾಟರ್‌ಗಳಾದ ಯಾವರ್ ಹಸನ್ ಹಾಗೂ ಶುಭಂ ಕುಂದಿರ್ ವಿಕೆಟ್‌ಗಳನ್ನು ಕಳೆದುಕೊಂಡಿತು.
ಕರ್ನಾಟಕ ಪರ ವೇಗಿ ಪ್ರಸಿದ್ಧ್ ಕೃಷ್ಣ ಚುರುಕು ಬೌಲಿಂಗ್ ಮೂಲಕ ಯಾವರ್ ಹಸನ್‌ರನ್ನು ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ಮತ್ತೊಂದೆಡೆ, ವೈಶಾಖ್ ಎಸೆತದಲ್ಲಿ ಶುಭಂ ಕುಂದಿರ್ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡುವ ಮೂಲಕ ಔಟಾದರು. ಈಗಾಗಲೇ ಮುನ್ನಡೆಯಲ್ಲಿರುವ ಜಮ್ಮು-ಕಾಶ್ಮೀರ ಉಳಿದ ಬ್ಯಾಟರ್‌ಗಳ ಮೂಲಕ ಇನ್ನಷ್ಟು ಮುನ್ನಡೆದು ಗೆಲುವಿಗೆ ಮುತ್ತಿಕ್ಕುವ ಪ್ರಯತ್ನದಲ್ಲಿದೆ.
ಇದನ್ನೂ ಓದಿ: ರಣಜಿ ಟ್ರೋಫಿ ಫೈನಲ್ | ಸಂಕಷ್ಟದಲ್ಲಿ ಕರ್ನಾಟಕ; ಮಯಾಂಕ್ ಏಕಾಂಗಿ ಹೋರಾಟ
ಫೈನಲ್ ಪಂದ್ಯ ವೀಕ್ಷಣೆಗೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಗಮಿಸಲಿದ್ದಾರೆ. ಇಂದು ಸಂಜೆ 7.20ಕ್ಕೆ ಹುಬ್ಬಳ್ಳಿಗೆ ಬರುವ ಅವರು ಶನಿವಾರ ಬೆಳಿಗ್ಗೆ 10 ಗಂಟೆಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಐದನೇ ದಿನದಾಟ ವೀಕ್ಷಿಸಲಿದ್ದಾರೆ. ಈ ಹಿನ್ನೆಲೆ ಮೈದಾನದಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ.
ಇಂದಿನ ದಿನದಾಟದ ಅಂತ್ಯಕ್ಕೆ ಜೆ-ಕೆ ತಂಡವು 4 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದೆ. ಒಟ್ಟು 477 ರನ್‌ಗಳ ಭಾರೀ ಮುನ್ನಡೆ ಸಾಧಿಸಿದೆ. ಆರಂಭಿಕ ಆಟಗಾರ ಖಮ್ರಾನ್ ಇಕ್ಬಾಲ್ ಅಜೇಯ 94 ರನ್ ಗಳಿಸಿದ್ದು, ಐದನೇ ದಿನಕ್ಕೂ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಜಮ್ಮು-ಕಾಶ್ಮೀರ ತಂಡ ರಣಜಿ ಟ್ರೋಫಿಯಲ್ಲಿ ದೀರ್ಘಕಾಲ ʼಅಂಡರ್‌ಡಾಗ್ʼ ಎಂದೇ ಗುರುತಿಸಿಕೊಂಡಿತ್ತು. ಸೌಲಭ್ಯಗಳ ಕೊರತೆ, ಹವಾಮಾನ ಸವಾಲುಗಳು, ರಾಜಕೀಯ ಅಸ್ಥಿರತೆಯ ನಡುವೆಯೂ ಈ ತಂಡ ದೇಶೀಯ ಕ್ರಿಕೆಟ್‌ನಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.
ಹಿಂದೆ ಕ್ವಾರ್ಟರ್‌ಫೈನಲ್ ತಲುಪುವುದೇ ದೊಡ್ಡ ಸಾಧನೆ ಎಮದು ಟೀಕಿಸಿಕೊಳ್ಳುತ್ತಿದ್ದ ತಂಡ, ಈಗ ರಣಜಿ ಟ್ರೋಫಿ ಫೈನಲ್‌ನಲ್ಲಿ ಗೆಲುವಿನ ಅಂಚಿಗೆ ಬಂದು ನಿಂತಿದೆ.





