ಉತ್ತರಾಖಂಡದ ವಿರುದ್ಧ ರಣಜಿ ಟ್ರೋಫಿಯ ಸೆಮಿಫೈನಲ್ ಪಂದ್ಯಾವಳಿಯ ಮೊದಲ ದಿನ ರಾಜ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. 15ನೇ ಬಾರಿಗೆ ಫೈನಲ್‌ಗೆ ಪ್ರವೇಶಿಸುವ ಇರಾದೆಯಲ್ಲಿರುವ ಕರ್ನಾಟಕ ಮೊದಲ ದಿನವೇ 2 ವಿಕೆಟ್ ನಷ್ಟದೊಂದಿಗೆ 355 ರನ್‌ಗಳೊಂದಿಗೆ ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿದೆ.
ಟಾಸ್ ಗೆದ್ದ ಉತ್ತರಾಖಂಡ ತಂಡ ಕರ್ನಾಟಕವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆದರೆ ನಾಯಕ ಕುನಾಲ್ ಚಾಂಡೇಲಾ ಅವರ ಈ ನಿರ್ಧಾರ ಮೊದಲ ದಿನ ಉತ್ತರಾಖಂಡ ತಂಡಕ್ಕೆ ಮುಳುವಾಗಿ ಪರಿಣಮಿಸಿದೆ. ಏಕೆಂದರೆ ಕರ್ನಾಟಕ ಆಟಗಾರರ ಬ್ಯಾಟಿಂಗ್ ಅಬ್ಬರಕ್ಕೆ ಉತ್ತರಾಖಂಡ ಬೌಲರ್‌ಗಳು ನೆಲಕಚ್ಚಿದರು.
ಕೆ ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಮೈದಾನಕ್ಕೆ ಇಳಿದರು. ಮಯಾಂಕ್ 32 ಎಸೆತಗಳನ್ನು ಎದುರಿಸಿ 5 ರನ್ ಗಳಿಸಿ ಆದಿತ್ಯ ರಾವತ್ ಅವರ ಓವರ್‌ನಲ್ಲಿ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು. ಆರಂಭದಲ್ಲಿ ಮಯಾಂಕ್ ಅವರ ವಿಕೆಟ್ ಕಳೆದುಕೊಂಡ ಬಳಿಕ ರಾಜ್ಯಕ್ಕೆ ನಾಯಕ ದೇವದತ್ ಪಡಿಕ್ಕಲ್ – ರಾಹುಲ್ ಅದ್ಭುತ ಆಟವಾಡಿದರು. ಇಬ್ಬರು ಶತಕ ಬಾರಿಸಿ ತಂಡಕ್ಕೆ ಆಸರೆಯಾದರು.
ಇದನ್ನು ಓದಿದ್ದೀರಾ? ಸೋತರೂ ಕ್ರೀಡಾಭಿಮಾನಿಗಳ ಮನಗೆದ್ದ ಗುರ್ಬಾಜ್: ಆಫ್ರಿಕಾ ಪಡೆಗೆ ನಡುಕ ಹುಟ್ಟಿಸಿದ ಅಫ್ಘಾನ್ ಆಟಗಾರ
ರಾಹುಲ್ ಅತ್ಯುತ್ತಮವಾಗಿ 11 ಬೌಂಡರಿ, 5 ಸಿಕ್ಸರ್‌ಗಳನ್ನು ಸಿಡಿಸಿದರು. ಇದರ ಜತೆ ಪಡಿಕ್ಕಲ್ ಕೂಡ ರಾಹುಲ್‌ಗೆ ಅಷ್ಟೇ ವೇಗವಾಗಿ ಜತೆಯಾದರು. 16 ಬೌಂಡರಿ, 2 ಸಿಕ್ಸರ್ ಸಹಿತ ಪಡಿಕ್ಕಲ್ 148 ರನ್ ಗಳೊಂದಿಗೆ ಇನ್ನೂ ಅಂಕಣದಲ್ಲಿದ್ದಾರೆ. ತಂಡ 292 ರನ್‌ಗಳಿಸಿದ್ದಾಗ ರಾಜ್ಯ ರಾಹುಲ್ ಅವರ ವಿಕೆಟ್ ಕಳೆದುಕೊಂಡಿತು. 141 ರನ್ ಗಳಿಸಿ ರಾಹುಲ್ ಆದಿತ್ಯ ರಾವತ್ ಎಸೆತಕ್ಕೆ ಔಟ್ ಆದರು. ರಾಹುಲ್ – ಪಡಿಕ್ಕಲ್ 257 ರನ್‌ಗಳ ಜತೆಯಾಟ ನೀಡಿದರು.
ಕರುಣ್ ನಾಯರ್ 37 ರನ್‌ನೊಂದಿಗೆ ಪಡಿಕ್ಕಲ್ ಜತೆ ಕ್ರೀಸ್‌ನಲ್ಲಿದ್ದಾರೆ. ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ 90 ಓವರ್‌ಗಳಲ್ಲಿ 355 ಕ್ಕೆ 2 ವಿಕೆಟ್ ಕಳೆದುಕೊಂಡು ಅತ್ಯುತ್ತಮ ಸ್ಥಿತಿಯಲ್ಲಿದೆ.
ಪಶ್ಚಿಮ ಬಂಗಾಳ – ಜಮ್ಮು ಕಾಶ್ಮೀರ ನಡುವಿನ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳ ತಂಡ ಮೊದಲ ದಿನದ ಅಂತ್ಯಕ್ಕೆ 90 ಓವರ್‌ಗಳಲ್ಲಿ 249 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. ಸುದೀಪ್ ಕುಮಾರ್ ಘರಾಮಿ 136 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.





