ಹುಬ್ಬಳ್ಳಿ ನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025-26ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದ ವೇಳೆ ಕ್ರೀಡಾಸ್ಫೂರ್ತಿಗೆ ಧಕ್ಕೆಯುಂಟುಮಾಡುವ ಘಟನೆಯೊಂದು ನಡೆದಿದೆ. ಪಂದ್ಯದ ಎರಡನೇ ದಿನದಾಟದ ವೇಳೆ ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ತಂಡದ ಆಟಗಾರರ ನಡುವೆ ಮೈದಾನದಲ್ಲಿಯೇ ತೀವ್ರ ವಾಗ್ವಾದ ನಡೆದಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಪರಿಸ್ಥಿತಿಯನ್ನು ಅಂಪೈರ್‌ಗಳು ಶಮನಗೊಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ತಂಡದ ಇನಿಂಗ್ಸ್‌ನ 100ನೇ ಓವರ್‌ನಲ್ಲಿ ಈ ಹೈಡ್ರಾಮಾ ನಡೆದಿದೆ. ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅವರ ಎಸೆತವನ್ನು ಜಮ್ಮು-ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಗಲ್ಲಿಯತ್ತ ಬಾರಿಸಿದರು. ಅಲ್ಲಿಯೇ ಇದ್ದ ಫೀಲ್ಡರ್ ಡೈವ್ ಮಾಡಿ ಚೆಂಡನ್ನು ತಡೆಯಲು ಯತ್ನಿಸಿದರಾದರೂ, ಚೆಂಡು ಬೌಂಡರಿ ಗೆರೆ ದಾಟಿತು. ಈ ಬೆನ್ನಲ್ಲೇ ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕರ್ನಾಟಕದ ಬದಲಿ ಆಟಗಾರ ಕೆ.ವಿ. ಅನೀಶ್ ಹಾಗೂ ಪರಾಸ್ ಡೋಗ್ರಾ ನಡುವೆ ಮಾತಿನ ಚಕಮಕಿ ಶುರುವಾಯಿತು.
ಅನೀಶ್‌ಗೆ ಡಿಚ್ಚಿ ಹೊಡೆದ ಡೋಗ್ರಾ
ಆಟಗಾರರ ನಡುವಿನ ವಾಗ್ವಾದ ಕ್ಷಣಾರ್ಧದಲ್ಲಿಯೇ ವಿಕೋಪಕ್ಕೆ ತಿರುಗಿದ್ದು, ಜಮ್ಮು ಕಾಶ್ಮೀರದ ನಾಯಕ ಪರಾಸ್ ಡೋಗ್ರಾ ಅವರು ಏಕಾಏಕಿ ಅನೀಶ್ ಅವರ ತಲೆಗೆ ಡಿಚ್ಚಿ ಹೊಡೆದಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಕರ್ನಾಟಕ ತಂಡದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಕೂಡಲೇ ಸ್ಥಳಕ್ಕೆ ಧಾವಿಸಿ ಡೋಗ್ರಾ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದರು. ಕೆಲಕಾಲ ಮೈದಾನದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಅಂಪೈರ್‌ಗಳು ಮಧ್ಯಪ್ರವೇಶಿಸಿ ಆಟಗಾರರನ್ನು ಬೇರ್ಪಡಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಇದನ್ನು ಓದಿದ್ದೀರಾ? ರಣಜಿ ಟ್ರೋಫಿ ಫೈನಲ್‌ಗೇರಿದ ಜಮ್ಮುಕಾಶ್ಮೀರ ತಂಡದ ರೋಚಕ ಪಯಣ; 70 ವರ್ಷಗಳ ಹೊಸ ವಿಕ್ರಮ!
ಈ ಅಹಿತಕರ ಘಟನೆಯ ನಂತರ ಅಂಪೈರ್‌ಗಳು ಕರ್ನಾಟಕದ ಪ್ರಸ್ತುತ ನಾಯಕ ದೇವದತ್ ಪಡಿಕ್ಕಲ್ ಅವರನ್ನು ಕರೆದು, ಫೀಲ್ಡಿಂಗ್ ವೇಳೆ ಆಟಗಾರರು ಶಿಸ್ತು ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ತದನಂತರ ಪರಾಸ್ ಡೋಗ್ರಾ ಅವರು ಅನೀಶ್ ಬಳಿ ತೆರಳಿ ಕ್ಷಮೆಯಾಚಿಸಲು ಮುಂದಾದರು. ಆದರೆ, ಡೋಗ್ರಾ ವರ್ತನೆಯಿಂದ ಅಸಮಾಧಾನಗೊಂಡಿದ್ದ ಅನೀಶ್, ಕ್ಷಮೆಯಾಚನೆಯನ್ನು ಸ್ವೀಕರಿಸಲು ನಿರಾಕರಿಸಿದರು. ಬಳಿಕ ಅಂಪೈರ್‌ಗಳು ಪರಿಸ್ಥಿತಿಯನ್ನು ವಿವರಿಸಿ ಆಟಗಾರರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.
ಬೃಹತ್ ಮೊತ್ತದತ್ತ ಜಮ್ಮು ಕಾಶ್ಮೀರ
ರಣಜಿ ಫೈನಲ್‌ನ ಎರಡನೇ ದಿನದಾಟ ಮುಂದುವರಿಸಿರುವ ಜಮ್ಮು ಕಾಶ್ಮೀರ ದಿನಾದಾಂತ್ಯಕ್ಕೆ 156 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 527 ರನ್ ಪೇರಿಸಿದೆ. ಶುಭಂ ಪುಂದೀರಾ(121) ಶತಕ ಬಾರಿಸಿದರೆ, ನಾಯಕ ಪಾರಸ್ ಡೋಗ್ರಾ(70), ಕನ್ನಯ್ಯ ವಾಧವನ್(70), ಅಬ್ದುಲ್ ಸಮದ್(61), ಸಾಹಿಲ್ ಲೋತ್ರಾ(57) ಅರ್ಧ ಶತಕ ಗಳಿಸಿ ತಂಡ 500 ರನ್ ದಾಟಲು ನೆರವಾಗಿದ್ದಾರೆ. ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ 90/3, ವಿದ್ಯಾದರ್, ಶ್ರೇಯಸ್ ಹಾಗೂ ಶ್ರೀಕರ್ ಶೆಟ್ಟಿ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ.





