ಕುಟುಂಬದಲ್ಲಿ ಎದುರಾದ ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ, ಭಾರತ ಕ್ರಿಕೆಟ್ ತಂಡದ ಬ್ಯಾಟರ್ ರಿಂಕು ಸಿಂಗ್ ಅವರು ದಿಢೀರನೆ ತಮ್ಮ ಊರಿಗೆ ಮರಳಿದ್ದಾರೆ.
ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರ ತಂದೆಯ ಆರೋಗ್ಯ ಸ್ಥಿತಿ ಕಳೆದ ಕೆಲವು ದಿನಗಳಿಂದ ತೀರಾ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ತವರಿಗೆ ತೆರಳಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಇಂದು ಸಂಜೆ 5:30ರ ಸುಮಾರಿಗೆ ಚೆನ್ನೈನಲ್ಲಿ ಭಾರತ ತಂಡವು ಅಭ್ಯಾಸ ನಡೆಸಿತು. ಆದರೆ, ಅಭ್ಯಾಸದ ಕಣದಲ್ಲಿ ರಿಂಕು ಗೈರುಹಾಜರಿ ಎದ್ದು ಕಾಣುತ್ತಿತ್ತು. ಈ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಆದರೂ, ತಂದೆಯ ಜೊತೆಗಿರಲು ರಿಂಕು ಅವರು ಈಗಾಗಲೇ ಚೆನ್ನೈನಿಂದ ನಿರ್ಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ರಿಂಕು ಸಿಂಗ್ ಅವರು ಭಾರತದ ‘ಆಡುವ ಹನ್ನೊಂದರ’ ಬಳಗದಲ್ಲಿ ಕಾಯಂ ಸ್ಥಾನ ಪಡೆದುಕೊಂಡಿದ್ದರು. ಆದರೆ, ಈ ಎಡಗೈ ಬ್ಯಾಟರ್‌ಗೆ ಈ ಟೂರ್ನಿಯು ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಟ್ಟಿಲ್ಲ. ಅವರು ಮತ್ತೆ ಯಾವಾಗ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಹೀಗಾಗಿ, ಅವರ ಗೈರಿನ ಹಿನ್ನೆಲೆಯಲ್ಲಿ ತಂಡದ ಆಡಳಿತ ಮಂಡಳಿಯು ಬೇರೆ ಆಟಗಾರರ ಆಯ್ಕೆಯನ್ನು ಪರಿಗಣಿಸುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ಬ್ಯಾಟ್ ಬೀಸಿದ ‘ಫಿನಿಶರ್’ಗೆ ಕ್ಲೀನ್ ಬೌಲ್ಡ್ ಆದ ಸಂಸದೆ
ರಿಂಕು ಗೈರುಹಾಜರಿಯ ನಡುವೆಯೂ ತಂಡದ ಇತರ ಆಟಗಾರರು ನೆಟ್ಸ್‌ನಲ್ಲಿ ತಮ್ಮ ಎಂದಿನ ಅಭ್ಯಾಸದಲ್ಲಿ ನಿರತರಾಗಿದ್ದರು. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ದೀರ್ಘಕಾಲ ಬ್ಯಾಟಿಂಗ್ ಕೌಶಲ ಸಾಣೆ ಹಿಡಿದರು. ಯುವ ಆಟಗಾರ ಅಭಿಷೇಕ್ ಶರ್ಮಾ ಅವರು ದೀರ್ಘಕಾಲದ ಬೌಲಿಂಗ್ ಸ್ಪೆಲ್ ಬಳಿಕ ಬ್ಯಾಟಿಂಗ್‌ಗಿಳಿದರು.
ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಬೌಲಿಂಗ್ ಕೋಚ್ ಮೊರ್ನೆ ಮಾರ್ಕೆಲ್ ಅವರ ಮಾರ್ಗದರ್ಶನದಲ್ಲಿ ಕೌಶಲ ಆಧಾರಿತ ಅಭ್ಯಾಸ ನಡೆಸಿದರು. ಮತ್ತೊಂದೆಡೆ, ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಅವರು ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಬೌಲಿಂಗ್ ಮಾಡುವ ಮೂಲಕ ಬೆವರು ಹರಿಸಿದರು.





