ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈಗಾಗಲೇ ಸರಣಿಯನ್ನು 2–0ರಿಂದ ಗೆಲುವು ಸಾಧಿಸಿರುವ ಆಸೀಸ್ ಪಡೆ ಇಂದು ಕ್ಲೀನ್‌ಸ್ವೀಪ್ ಗುರಿಯಿಟ್ಟುಕೊಂಡರೆ, ಭಾರತವು ಗೌರವ ಉಳಿಸಿಕೊಳ್ಳಲು ಹೋರಾಟ ಆರಂಭಿಸಿದೆ. ಈ ಪಂದ್ಯವು ಕೇವಲ ಸರಣಿಯ ಅಂತ್ಯವಲ್ಲ, ಇಬ್ಬರು ಭಾರತೀಯ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆಸ್ಟ್ರೇಲಿಯಾದ ವೇದಿಕೆಗೆ ಕೊನೆಯ ಪಂದ್ಯವೂ ಆಗಬಹುದು ಎಂಬ ನಿರೀಕ್ಷೆಯ ನಡುವೆ ಕಣಕ್ಕಿಳಿದಿದೆ.
ಸಿಡ್ನಿ ಮೈದಾನವು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರಿಗೂ ನೆನಪುಗಳಿಂದ ತುಂಬಿದ ಸ್ಥಳ. ಕೊಹ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯವನ್ನು ಭಾರತ ಪರವಾಗಿ ಇದೇ ಮೈದಾನದಲ್ಲಿ ಆಡಿದ್ದರು. ವಿರಾಟ್ ಕೊಹ್ಲಿ, ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಿಂದ ದೂರ ಸರಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಆಕರ್ಷಣೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಆದರೆ ಈ ಸರಣಿಯಲ್ಲಿ ಅವರ ಬ್ಯಾಟ್ ಮೌನವಾಗಿದೆ. ಪರ್ತ್ ಮತ್ತು ಅಡಿಲೇಡ್‌ನಲ್ಲಿ ಸತತ ಶೂನ್ಯಗಳೊಂದಿಗೆ ಕೊಹ್ಲಿ ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ. ಆದರೂ, ಸಿಡ್ನಿ ವಿಮಾನ ನಿಲ್ದಾಣದಲ್ಲಿ ಅವರ ಆಗಮನದ ಸಂದರ್ಭದಲ್ಲಿ ಅಭಿಮಾನಿಗಳ ಸಾಗರವೇ ಸೇರಿತ್ತು, ಇದು ಅವರ ಜನಪ್ರಿಯತೆಯನ್ನು ಎತ್ತಿ ತೋರಿಸಿತು.
ಇದನ್ನು ಓದಿದ್ದೀರಾ? ಏಕದಿನ ವೃತ್ತಿ ಜೀವನದಲ್ಲಿ ಸತತ 2 ಬಾರಿ ಶೂನ್ಯಕ್ಕೆ ವಿರಾಟ್ ಕೊಹ್ಲಿ ಔಟ್; ನಿವೃತ್ತಿ ಮುನ್ಸೂಚನೆಯೇ?
ಮತ್ತೊಂದೆಡೆ, ರೋಹಿತ್ ಶರ್ಮಾ ಅಡಿಲೇಡ್‌ನಲ್ಲಿ 97 ಎಸೆತಗಳಲ್ಲಿ 73 ರನ್‌ಗಳ ಉತ್ತಮ ಇನಿಂಗ್ಸ್‌ನೊಂದಿಗೆ ತಮ್ಮ ವರ್ಚಸ್ಸನ್ನು ತೋರಿಸಿದರು. ಆದರೆ, ಸಿಡ್ನಿಯಲ್ಲಿ ರೋಹಿತ್‌ಗೆ ವಿಶೇಷ ನೆನಪುಗಳಿವೆ. 2008ರ ತ್ರಿಕೋನ ಸರಣಿಯ ಮೊದಲ ಫೈನಲ್‌ನಲ್ಲಿ, ಸಚಿನ್ ತೆಂಡೂಲ್ಕರ್ ಜೊತೆಗೆ 123 ರನ್‌ಗಳ ಜೊತೆಗೂಡಿ 66 ರನ್ ಗಳಿಸಿದ್ದರು. 2016ರಲ್ಲಿ, 108 ಎಸೆತಗಳಲ್ಲಿ 99 ರನ್‌ಗಳ ಜೊತೆಗೆ ಮನೀಷ್ ಪಾಂಡೆ ಜೊತೆ 97 ರನ್‌ಗಳ ಜೊತೆಗೂಡಿ ಭಾರತವನ್ನು 331 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲು ಸಹಾಯ ಮಾಡಿದ್ದರು. ಈ ಎರಡೂ ಗೆಲುವುಗಳು ಭಾರತದ ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗೆಲುವುಗಳಾಗಿವೆ.
ಸಿಡ್ನಿಯ ಈ ಪಂದ್ಯವು ಕೊಹ್ಲಿ ಮತ್ತು ರೋಹಿತ್‌ಗೆ ಆಸ್ಟ್ರೇಲಿಯಾದಲ್ಲಿ ಕೊನೆಯ ಏಕದಿನ ಪಂದ್ಯವಾಗಿರಬಹುದು. 2027ರ ವಿಶ್ವಕಪ್‌ಗೆ ಮೊದಲು ಭಾರತವು ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿಯನ್ನು ಆಡುವುದಿಲ್ಲ. ಹೀಗಾಗಿ, ಈ ಪಂದ್ಯವು ಈ ಇಬ್ಬರು ದಿಗ್ಗಜರಿಗೆ ಭಾವನಾತ್ಮಕ ವಿದಾಯವಾಗಲಿದೆ. ಅಭಿಮಾನಿಗಳಿಗೆ, ಇದು ಕೊಹ್ಲಿ ಮತ್ತು ರೋಹಿತ್‌ರ ಕೊನೆಯ ಆಟವನ್ನು ಕಣ್ಣಾರೆ ಕಾಣುವ ಅವಕಾಶವಾಗಿದೆ.
ಭಾರತಕ್ಕೆ ಈ ಪಂದ್ಯವು ಕೇವಲ ಗೌರವದ ಪ್ರಶ್ನೆಯಷ್ಟೇ ಅಲ್ಲ, ತಂಡದ ಭವಿಷ್ಯದ ರೂಪುರೇಷೆಗೆ ಮಾರ್ಗದರ್ಶನವೂ ಆಗಿದೆ. ಯುವ ಆಟಗಾರರಿಗೆ ಅವಕಾಶ ನೀಡುವುದು, ತಂತ್ರಗಾರಿಕೆಯನ್ನು ಸರಿಪಡಿಸುವುದು, ಮತ್ತು ಕೊಹ್ಲಿ-ರೋಹಿತ್‌ರಂತಹ ದಿಗ್ಗಜರಿಗೆ ಗೌರವಯುತ ವಿದಾಯವನ್ನು ಖಚಿತಪಡಿಸುವುದು ತಂಡದ ಗುರಿಯಾಗಿದೆ. ಟಿಕೆಟ್‌ಗಳೆಲ್ಲ ಬಹುತೇಕ ಬರ್ತಿಯಾಗಿದೆ. ಹಾಗಾಗಿ ಸಿಡ್ನಿಯ ತುಂಬಿದ ಸ್ಟೇಡಿಯಂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಭಾರತಕ್ಕೆ ಗೆಲುವು ಅಗತ್ಯ
ಭಾರತವು ತನ್ನ 1,068 ಏಕದಿನ ಪಂದ್ಯಗಳ ಇತಿಹಾಸದಲ್ಲಿ ಕೇವಲ ಐದು ಬಾರಿ ಮಾತ್ರ ಶೂನ್ಯಕ್ಕೆ ಸರಣಿ ಸೋಲು ಕಂಡಿದೆ – 1983 ಮತ್ತು 1989ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ (5–0), 2006ರಲ್ಲಿ ದಕ್ಷಿಣ ಆಫ್ರಿಕಾ (4–0), 2020ರಲ್ಲಿ ನ್ಯೂಜಿಲೆಂಡ್ (3–0) ಮತ್ತು 2022ರಲ್ಲಿ ಮತ್ತೆ ದಕ್ಷಿಣ ಆಫ್ರಿಕಾ (3–0). ಇಂದು ಭಾರತ ಸೋತರೆ, ಅದು ಆರನೇ ವೈಟ್‌ವಾಶ್ ಆಗಲಿದೆ. ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಶುಭ್‌ಮನ್ ಗಿಲ್ ನಾಯಕತ್ವದ ಹೊಸ ತಂಡವು ಸಿಡ್ನಿಯಲ್ಲಿ ತಾವು ಅನುಭವಿಸಿದ 19 ಪಂದ್ಯಗಳಲ್ಲಿ 16 ಸೋಲುಗಳ ಕಹಿ ನೆನಪಿನಲ್ಲಿ ಕಣಕ್ಕಿಳಿದಿದೆ.
ಗೌತಮ್ ಗಂಭೀರ್ ಮತ್ತು ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು ಈ ಸರಣಿಯಲ್ಲಿ ಕೆಲವು ತಂತ್ರಗಾರಿಕೆಯ ತಪ್ಪುಗಳನ್ನು ಮಾಡಿದೆ. ಮೂರು ಆಲ್‌ರೌಂಡರ್‌ಗಳನ್ನು ಆಯ್ಕೆ ಮಾಡಿ ಬ್ಯಾಟಿಂಗ್ ಆಳವನ್ನು ಹೆಚ್ಚಿಸಿದರೂ, ಬೌಲಿಂಗ್ ಬಲವನ್ನು ಕಡಿಮೆಯಾಗಿಸಿತು. ಕನ್ನಡಿಗ ಪ್ರಸಿದ್ಧ್ ಕೃಷ್ಣ, ಕಣಕ್ಕಿಳಿದಿದ್ದಾರೆ. ಸರಣಿ ಸೋತರೂ ಈ ಪಂದ್ಯ ಭಾರತಕ್ಕೆ ಗೆಲುವಿನ ಅನಿವಾರ್ಯವಾಗಿದೆ. ಆಸ್ಟ್ರೇಲಿಯಾ ಈಗಾಗಲೇ ಸರಣಿಯನ್ನು ಗೆದ್ದಿದ್ದರೂ, ಸಂಪೂರ್ಣ ಕ್ಲೀನ್‌ಸ್ವೀಪ್ ಗುರಿಯಲ್ಲಿದೆ. ಜೋಷ್ ಇಂಗ್ಲಿಸ್ ತಂಡಕ್ಕೆ ಮರಳಿದ್ದು, ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಮತ್ತು ಆಲ್‌ರೌಂಡರ್ ಜಾಕ್ ಎಡ್ವರ್ಡ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.





