2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ಬಳಿಕ ತೀವ್ರ ಆಘಾತಕ್ಕೊಳಗಾಗಿದ್ದೆ. ಆ ಕ್ಷಣದಲ್ಲಿ ಕ್ರಿಕೆಟ್‌ನಿಂದಲೇ ನಿವೃತ್ತಿ ಹೊಂದಲು ನಿರ್ಧರಿಸಿದ್ದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಭಾನುವಾರ ನಡೆದ ‘ಮಾಸ್ಟರ್ಸ್ ಯೂನಿಯನ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕಪ್ ಫೈನಲ್ ಸೋಲಿನ ನಂತರದ ತಮ್ಮ ಮಾನಸಿಕ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. “ಆ ಕ್ರೀಡೆ ನನ್ನಲ್ಲಿರುವ ಎಲ್ಲವನ್ನೂ ಹೀರಿಕೊಂಡಂತೆ ಭಾಸವಾಯಿತು. ನನ್ನಲ್ಲಿ ಇನ್ನು ಆಡುವ ಶಕ್ತಿ ಉಳಿದಿಲ್ಲ ಎಂದು ಅನಿಸಿತ್ತು,” ಎಂದು ರೋಹಿತ್ ಹೇಳಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ತವರಿನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಸತತ ಒಂಬತ್ತು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸಿತ್ತು. ಆದರೆ, ಪ್ರಶಸ್ತಿ ಸುತ್ತಿನಲ್ಲಿ ಟ್ರಾವಿಸ್ ಹೆಡ್ ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ಭಾರತದ ಕನಸನ್ನು ಭಗ್ನಗೊಳಿಸಿತ್ತು.
“2023ರ ವಿಶ್ವಕಪ್ ಫೈನಲ್ ನಂತರ ನಾನು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದೆ. ಈ ಆಟ ನನ್ನಿಂದ ಎಲ್ಲವನ್ನೂ ಕಿತ್ತುಕೊಂಡಿದೆ, ಇನ್ನೇನೂ ಉಳಿದಿಲ್ಲ ಎನಿಸಿದ್ದರಿಂದ ಆಟವನ್ನೇ ಬಿಟ್ಟುಬಿಡಲು ಬಯಸಿದ್ದೆ,” ಎಂದು ರೋಹಿತ್ ತಮ್ಮ ನೋವನ್ನು ಹಂಚಿಕೊಂಡರು.
ಇದನ್ನು ಓದಿದ್ದೀರಾ? ‘ಟೀಂ ಇಂಡಿಯಾ’ ಅಧಿಕೃತವಾಗಿ ಭಾರತವನ್ನು ಪ್ರತಿನಿಧಿಸದ ಖಾಸಗಿ ತಂಡ; ಬಿಸಿಸಿಐಗೆ ಬೀಳುವುದೇ ಸರ್ಕಾರಿ ಮೂಗುದಾರ?
”ಆದರೆ, ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡೆ. ಇದು ನಾನು ನಿಜವಾಗಿಯೂ ಪ್ರೀತಿಸುವ ಆಟ, ಅದು ನನ್ನ ಕಣ್ಣ ಮುಂದೆಯೇ ಇದೆ. ಅಷ್ಟು ಸುಲಭವಾಗಿ ಬಿಟ್ಟುಕೊಡಬಾರದು ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ನಿಧಾನವಾಗಿ ಮತ್ತೆ ಮೈದಾನಕ್ಕಿಳಿಯುವ ಶಕ್ತಿಯನ್ನು ಕಂಡುಕೊಂಡೆ,” ಎಂದು ಅವರು ವಿವರಿಸಿದರು.
2022ರಲ್ಲಿ ನಾಯಕತ್ವ ವಹಿಸಿಕೊಂಡಾಗಿನಿಂದಲೂ ವಿಶ್ವಕಪ್ ಗೆಲ್ಲುವುದೇ ತಮ್ಮ ಏಕೈಕ ಗುರಿಯಾಗಿತ್ತು. ಅದಕ್ಕಾಗಿ ಎರಡು-ಮೂರು ತಿಂಗಳಲ್ಲ, ಪೂರ್ಣಾವಧಿ ಶ್ರಮ ಹಾಕಿದ್ದೆ. ಹೀಗಾಗಿ ಸೋಲು ವೈಯಕ್ತಿಕವಾಗಿ ತುಂಬಾ ಕಾಡಿತ್ತು ಎಂದು ಅವರು ಹೇಳಿದರು.
ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿರುವ ಹಾಗೂ ಈ ವರ್ಷದ ಆರಂಭದಲ್ಲಿ ಏಕದಿನ ನಾಯಕತ್ವದಿಂದ ಕೆಳಗಿಳಿದಿರುವ ರೋಹಿತ್ ಶರ್ಮಾ, ಏಕದಿನ ಮಾದರಿಯಲ್ಲಿ ಆಟ ಮುಂದುವರಿಸಿದ್ದಾರೆ. 2027ರ ವಿಶ್ವಕಪ್‌ನಲ್ಲಿ ಆಡುವ ಮೂಲಕ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.
”ಫಲಿತಾಂಶ ಬರದಿದ್ದಾಗ ಬೇಸರ ಸಹಜ. ಆದರೆ ಜೀವನ ಅಲ್ಲಿಗೆ ಮುಗಿಯುವುದಿಲ್ಲ ಎಂಬುದು ನನಗೆ ತಿಳಿದಿತ್ತು. ಸೋಲಿನ ಆಘಾತದಿಂದ ಹೊರಬಂದು, 2024ರ ಟಿ20 ವಿಶ್ವಕಪ್ ಕಡೆಗೆ ಗಮನ ಹರಿಸಿದೆ. ಈಗ ಇದನ್ನು ಹೇಳುವುದು ಸುಲಭ, ಆದರೆ ಆ ಕ್ಷಣ ಅತ್ಯಂತ ಕಠಿಣವಾಗಿತ್ತು,” ಎಂದು ರೋಹಿತ್ ಹೇಳಿದರು. ಅಹಮದಾಬಾದ್ ಸೋಲಿನ ನೋವಿನ ನಡುವೆಯೂ ರೋಹಿತ್ ನೇತೃತ್ವದ ತಂಡ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.





