ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಕ್ರಿಕೆಟ್‌ನ ಅಭಿವೃದ್ಧಿಗೆ ಕಳೆದ ಕೆಲವು ವರ್ಷಗಳಲ್ಲಿ ಮಾಡಿದ ಪ್ರಯತ್ನಗಳು ಶ್ಲಾಘನೀಯ. ಮಹಿಳಾ ಪ್ರೀಮಿಯರ್ ಲೀಗ್ ಸ್ಥಾಪನೆ, ಸಮಾನ ಪಂದ್ಯಭತ್ಯೆ, ಹಾಗೂ ದೇಶದ ಪ್ರಮುಖ ಮಹಿಳಾ ಕ್ರಿಕೆಟಿಗರಿಗೆ ಪುರುಷರ ಮಾದರಿಯಲ್ಲಿ ಕೇಂದ್ರ ಒಪ್ಪಂದ ನೀಡುವ ಮೂಲಕ ಬಿಸಿಸಿಐ ಕ್ರೀಡಾ ಸಮಾನತೆಯ ಹೊಸ ಯುಗವನ್ನು ಆರಂಭಿಸಿತು.
ಇದಕ್ಕೂ ಮೇರೆಗೆ, ಮಹಿಳಾ ತಂಡಕ್ಕೂ ಉನ್ನತ ಮಟ್ಟದ ಮೂಲಸೌಕರ್ಯ, ವಿಶ್ವಮಟ್ಟದ ತರಬೇತಿ ಸೌಲಭ್ಯಗಳು ಹಾಗೂ ವೃತ್ತಿಪರ ಸಹಾಯಕ ಸಿಬ್ಬಂದಿಯನ್ನು ಒದಗಿಸುವ ಮೂಲಕ ಮಂಡಳಿಯು ಮಹಿಳಾ ಕ್ರಿಕೆಟ್‌ಗೆ ಪುರುಷರ ಮಟ್ಟದ ಗೌರವ ನೀಡಿದೆ. ಇದರ ಫಲವೂ ಸ್ಪಷ್ಟವಾಗಿದೆ — ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಪೈಕಿ ಭಾರತದ “ವಿಮೆನ್ ಇನ್ ಬ್ಲೂ” ಈಗ ವಿಶ್ವಕ್ರಿಕೆಟ್‌ನಲ್ಲಿ ಭಾರೀ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದ್ದಾರೆ.
ಇತ್ತೀಚೆಗೆ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಮಹಿಳಾ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಆ ಯಶಸ್ಸು ಅವರ ಆತ್ಮವಿಶ್ವಾಸ ಹಾಗೂ ಬಿಸಿಸಿಐ ರೂಪಿಸಿದ ದೃಢ ವ್ಯವಸ್ಥೆಯ ಫಲವಾಗಿದೆ.
ಆದರೆ, ಈ ಎಲ್ಲ ಸಮಾನತೆಯ ಭಾಷಣಗಳ ನಡುವೆಯೂ ಬಿಸಿಸಿಐಯ ಇತ್ತೀಚಿನ ನಿರ್ಧಾರ ವಿವಾದಕ್ಕೀಡಾಗಿದೆ. ಮಹಿಳಾ ತಂಡದ ಐತಿಹಾಸಿಕ ವಿಶ್ವಕಪ್ ಗೆಲುವಿನ ಹಿನ್ನೆಲೆಯಲ್ಲಿ ಬಿಸಿಸಿಐ ತಂಡ ಹಾಗೂ ಬೆಂಬಲ ಸಿಬ್ಬಂದಿಗೆ ಒಟ್ಟು ರೂ. 51 ಕೋಟಿ ಬಹುಮಾನ ಘೋಷಿಸಿದೆ — ಇದು ಐಸಿಸಿ ನೀಡಿದ ಪ್ರಶಸ್ತಿ ಹಣಕ್ಕಿಂತ 12 ಕೋಟಿ ಹೆಚ್ಚು.
ಇದನ್ನು ಓದಿದ್ದೀರಾ? 2 Grand Slam ಗೆದ್ದಿದ್ದ ಕನ್ನಡಿಗ ರೋಹನ್ ಬೋಪಣ್ಣ ಟೆನಿಸ್‌ಗೆ ವಿದಾಯ
ಆದರೆ, ಇದೇ ವೇಳೆ ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಪುರುಷರ ತಂಡಕ್ಕೆ ಬಿಸಿಸಿಐ ನೀಡಿದ್ದ ಬಹುಮಾನ ಮೊತ್ತ ರೂ. 125 ಕೋಟಿ. ಅಂದರೆ ಮಹಿಳೆಯರಿಗಿಂತ ಎರಡೂವರೆ ಪಟ್ಟು ಹೆಚ್ಚು! ಸಮಾನತೆ ಹೆಸರಿನಲ್ಲಿ ಸಮಾನ ಪ್ರಯತ್ನ ಮಾಡಿದ ಮಹಿಳಾ ಕ್ರಿಕೆಟಿಗರಿಗೆ ಇಂತಹ ತಾರತಮ್ಯ ಮಾಡಿದ ಬಿಸಿಸಿಐ ಕ್ರಮ ಹಲವರ ಮನಸ್ಸಿಗೆ ಪ್ರಶ್ನೆ ಎಬ್ಬಿಸಿದೆ.
ಪುರುಷರ ಕ್ರಿಕೆಟ್ ಹೆಚ್ಚು ಆದಾಯ ತರುತ್ತದೆ ಎಂಬ ವಾದ ಇದ್ದರೂ, ಟೆನಿಸ್‌ನಂತಹ ಕ್ರೀಡೆಗಳಲ್ಲಿ ಗ್ರ್ಯಾಂಡ್ ಸ್ಲ್ಯಾಮ್‌ಗಳ ಆಯೋಜಕರು ಪುರುಷರು ಹಾಗೂ ಮಹಿಳೆಯರಿಗೆ ಸಮಾನ ಬಹುಮಾನ ನೀಡುವುದನ್ನು ಬಿಸಿಸಿಐ ಗಮನಿಸಬೇಕಾಗಿದೆ.
ಮಹಿಳಾ ಕ್ರಿಕೆಟ್‌ನ ಅಭಿವೃದ್ಧಿಗೆ ಬಿಸಿಸಿಐ ಮಾಡಿದ ಕೊಡುಗೆ ಅನನ್ಯವಾದರೂ, ಸಮಾನತೆ ಎಂಬ ಪದಕ್ಕೆ ನಿಜವಾದ ಅರ್ಥ ಸಿಗಬೇಕಾದರೆ ಬಹುಮಾನದಲ್ಲೂ ಸಮಾನತೆ ಅನಿವಾರ್ಯ.





