ಸೈನಾ ನೆಹ್ವಾಲ್ | ‘ಹಿಸ್ಸಾರ್’ನಿಂದ ವಿಶ್ವದ ನಂಬರ್ 1 ಪಟ್ಟ ಪಡೆದ ಛಲಗಾರ್ತಿ

Date:

ಹಿಸ್ಸಾರ್‌ನಿಂದ ವಿಶ್ವದ ನಂಬರ್ 1 ಪಟ್ಟದವರೆಗೆ ಸಾಗಿದ ಸೈನಾ ನೆಹ್ವಾಲ್ ಪಯಣ ಅದ್ಭುತ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು, ಚೀನಿಯರ ಕೋಟೆ ಭೇದಿಸಿ, ಭಾರತೀಯ ಬ್ಯಾಡ್ಮಿಂಟನ್ ಇತಿಹಾಸವನ್ನೇ ಬದಲಿಸಿದ ಈ ‘ಸೂಪರ್ ಸೈನಾ’ ಸಾಧನೆ, ಯುವ ಪೀಳಿಗೆಗೆ ಸದಾ ಹಸಿರಾದ ಸ್ಫೂರ್ತಿಯ ಸೆಲೆ

ಭಾರತೀಯ ಕ್ರೀಡಾ ಇತಿಹಾಸದಲ್ಲಿ ಕೆಲವೇ ಕೆಲವು ಹೆಸರುಗಳು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತವೆ. ಅಂತಹ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಸೈನಾ ನೆಹ್ವಾಲ್. ಕ್ರಿಕೆಟ್‌ ಮೋಹದಲ್ಲಿ ಮುಳುಗಿದ್ದ ಭಾರತೀಯರಿಗೆ ಬ್ಯಾಡ್ಮಿಂಟನ್‌ ರಾಕೆಟ್ ಹಿಡಿಯುವಂತೆ ಪ್ರೇರೇಪಿಸಿದ, ಚೀನಿಯರ ಪ್ರಾಬಲ್ಯವಿದ್ದ ಕೋರ್ಟ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ ಧೀರ ಕುವರಿ ಸೈನಾ. ಹರಿಯಾಣದ ಹಿಸ್ಸಾರ್‌ನಲ್ಲಿ ಹುಟ್ಟಿ, ಹೈದರಾಬಾದ್‌ನಲ್ಲಿ ಬೆಳದು, ವಿಶ್ವದ ಬ್ಯಾಡ್ಮಿಂಟನ್‌ ಅಂಗಳದಲ್ಲಿ ‘ಸೂಪರ್‌ ಸೈನಾ’ ಆಗಿ ಮೆರೆದ ಅವರ ಕ್ರೀಡಾ ಬದುಕು ಛಲ, ಪರಿಶ್ರಮ ಮತ್ತು ತ್ಯಾಗದ ಪ್ರತೀಕ.

ಬಾಲ್ಯ, ಬ್ಯಾಡ್ಮಿಂಟನ್ ರಕ್ತಗತ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೈನಾ ನೆಹ್ವಾಲ್ 1990ರ ಮಾರ್ಚ್ 17ರಂದು ಹರಿಯಾಣದ ಹಿಸ್ಸಾರ್ ಜಿಲ್ಲೆಯಲ್ಲಿ ಹರ್ವೀರ್ ಸಿಂಗ್ ಮತ್ತು ಉಷಾ ರಾಣಿ ದಂಪತಿಗಳ ಮಗಳಾಗಿ ಸೈನಾ ಜನಿಸಿದರು. ಸೈನಾ ಅವರ ರಕ್ತದಲ್ಲೇ ಬ್ಯಾಡ್ಮಿಂಟನ್‌ ಇತ್ತು ಎಂದರೆ ತಪ್ಪಾಗಲಾರದು. ತಂದೆ ಹರ್ವೀರ್‌ ಸಿಂಗ್‌ ಮತ್ತು ತಾಯಿ ಉಷಾ ರಾಣಿ ಇಬ್ಬರು ಹರಿಯಾಣದ ಮಾಜಿ ಬ್ಯಾಡ್ಮಿಂಟನ್‌ ಚಾಂಪಿಯನ್‌ಗಳಾಗಿದ್ದರು. ತಂದೆಯ ಕೆಲಸದ ನಿಮಿತ್ತ ಕುಟುಂಬ ಹೈದರಾಬಾದ್‌ಗೆ ಸ್ಥಳಾಂತರಗೊಂಡಾಗ ಸೈನಾಗೆ ಕೇವಲ ಎಂಟು ವರ್ಷ. ಭಾಷೆ ಬಾರದ ಊರಿನಲ್ಲಿ ಒಂಟಿತನ ಕಳೆಯಲು ಬ್ಯಾಂಡ್ಮಿಂಟನ್ ರಾಕೆಟ್ ಹಿಡಿದ ಪುಟ್ಟ ಬಾಲಕಿ, ಮುಂದೆ ಅದೇ ರಾಕೆಟ್‌ ಮೂಲಕ ಜಗತ್ತನ್ನೇ ಗೆಲ್ಲುತ್ತಾಳೆ ಎಂದು ಅಂದು ಯಾರೂ ಊಹಿಸಿರಲಿಲ್ಲ.

ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು, ತಂದೆಯ ಸ್ಕೂಟರ್ ಮೇಲೆ 25 ಕಿ.ಮೀ ದೂರದ ಸ್ಟೇಡಿಯಂಗೆ ಹೋಗಿ ಅಭ್ಯಾಸ ನಡೆಸುತ್ತಿದ್ದ ಆ ದಿನಗಳೇ ಸೈನಾ ಅವರ ಭವಿಷ್ಯದ ಬುನಾದಿಯಾಗಿದ್ದವು. 1998ರಲ್ಲಿ ತರಬೇತುದಾರ ನಾನಿ ಪ್ರಸಾದ್ ರಾವ್ ಅವರ ಬಳಿ ಅಭ್ಯಾಸ ಆರಂಭಿಸಿದ ಸೈನಾ, ನಂತರ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಎಸ್.ಎಂ. ಆರಿಫ್ ಅವರ ಗರಡಿಯಲ್ಲಿ ಪಳಗಿದರು. ಆದರೆ ಪುಲ್ಲೇಲ ಗೋಪಿಚಂದ್ ಅವರ ಅಕಾಡೆಮಿಗೆ ಸೇರಿದ ನಂತರ ಸೈನಾ ವೃತ್ತಿಜೀವನಕ್ಕೆ ಮಹತ್ತರ ತಿರುವು ಸಿಕ್ಕಿತು.

saina nehwal 9

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ

2006 ಸೈನಾ ಅವರ ವೃತ್ತಿಜೀವನದ ಆರಂಭಿಕ ಮೈಲಿಗಲ್ಲು. ಅಂದು ಅವರು ಫಿಲಿಪೈನ್ಸ್ ಓಪನ್ ಟೂರ್ನಮೆಂಟ್‌ ಗೆಲ್ಲುವ ಮೂಲಕ ಫೋರ್-ಸ್ಟಾರ್ ಬ್ಯಾಡ್ಮಿಂಟನ್‌ ಟೂರ್ನಿ ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ಏಷ್ಯಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಗ ಅವರಿಗೆ ಕೇವಲ 16 ವರ್ಷ. ಅದೇ ವರ್ಷ ನಡೆದ ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್-ಅಪ್ ಆಗುವ ಮೂಲಕ ತಮ್ಮ ಭವಿಷ್ಯದ ಸೂಚನೆ ನೀಡಿದರು. 2008ರಲ್ಲಿ ಪುಣೆಯಲ್ಲಿ ನಡೆದ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಗೆದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದರು.

ಬೀಜಿಂಗ್ ಒಲಿಂಪಿಕ್ಸ್ (2008) ಸೈನಾ ಪಾಲಿಗೆ ಒಂದು ಪ್ರಮುಖ ವೇದಿಕೆಯಾಯಿತು. ಕ್ವಾರ್ಟರ್ ಫೈನಲ್ ತಲುಪಿದರೂ ಪದಕ ಗೆಲ್ಲಲು ವಿಫಲರಾದರು. ಆದರೆ, ವಿಶ್ವದ ಶ್ರೇಷ್ಠ ಆಟಗಾರರಿಗೆ ಸವಾಲೊಡ್ಡುವ ಭಾರತೀಯ ಆಟಗಾರ್ತಿಯೊಬ್ಬಳ ಉದಯವಾಗಿತ್ತು.

ಲಂಡನ್ ಒಲಿಂಪಿಕ್ಸ್ ಮತ್ತು ಐತಿಹಾಸಿಕ ಕಂಚು

​2012ರ ಲಂಡನ್ ಒಲಿಂಪಿಕ್ಸ್ ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಬರೆಯಿತು. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ, ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಕೀರ್ತಿಗೆ ಸೈನಾ ಭಾಜನರಾದರು. ಅಂದು ಅವರು ಚೀನಾದ ಪ್ರಬಲ ಆಟಗಾರ್ತಿ ವಾಂಗ್‌ ಕ್ಸಿನ್‌ ಅವರನ್ನು ಎದುರಿಸಿದ್ದರು. ಪಂದ್ಯದ ವೇಳೆ ಎದುರಾಳಿ ಗಾಯಗೊಂಡು ನಿವೃತ್ತರಾದಾಗ, ಸೈನಾ ಅವರಿಗೆ ಕಂಚಿನ ಪದಕ ಲಭಿಸಿತ್ತು. ಇದು ಕೇವಲ ಅದೃಷ್ಟವಲ್ಲ, ಅಲ್ಲಿಯವರೆಗೆ ಅವರು ತೋರಿದ ಸ್ಥಿರ ಪ್ರದರ್ಶನದ ಫಲವಾಗಿತ್ತು.

ಇದನ್ನು ಓದಿದ್ದೀರಾ? ವಿಶ್ವವಿಜೇತನ ಟ್ರೋಫಿಗಳೆಲ್ಲ ಅಮ್ಮನ ಕಪಾಟಿನಲ್ಲಿ ಭದ್ರ: ಕೊಹ್ಲಿ ಯಶಸ್ಸಿನ ಹಿಂದಿನ ‘ಸರೋಜ’ ವಾತ್ಸಲ್ಯ

ವಿಶ್ವದ ನಂಬರ್ 1 ಪಟ್ಟಕ್ಕೆ ಏರಿಕೆ

ಸೈನಾ ಅವರ ವೃತ್ತಿಜೀವನದ ಮತ್ತೊಂದು ಶಿಖರವೆಂದರೆ 2015ರಲ್ಲಿ ಅವರು ವಿಶ್ವದ ನಂಬರ್ 1 ಶ್ರೇಯಾಂಕ ಏರಿದ್ದರು. ಇಂಡಿಯನ್‌ ಓಪನ್‌ ಸೂಪರ್‌ ಸೀರೀಸ್‌ನಲ್ಲಿ ಕೆರೊಲಿನಾ ಮರಿನ್‌ ಅವರನ್ನು ಸೆಮಿಫೈನಲ್‌ನಲ್ಲಿ ಮಣಿಸುವ ಮೂಲಕ, ಪ್ರಕಾಶ್‌ ಪಡುಕೋಣೆ ಅವರ ನಂತರ ಈ ಸಾಧನೆ ಮಾಡಿದ ಏಕೈಕ ಭಾರತೀಯ ಮತ್ತು ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಚೀನಾದ ಮಹಾಗೋಡೆಯನ್ನು ಭೇದಿಸಿ, ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪತಾಕೆ ಹಾರಿಸಿದ ಆ ಕ್ಷಣ ಕೋಟ್ಯಂತರ ಭಾರತೀಯರಿಗೆ ರೋಮಾಂಚನ ನೀಡಿತ್ತು.

saina nehwal 10

ಸೂಪರ್ ಸೀರೀಸ್‌ಗಳ ಸರಮಾಲೆ

ಸೈನಾ ಕೇವಲ ಒಲಿಂಪಿಕ್ಸ್ ಅಥವಾ ಶ್ರೇಯಾಂಕಗಳಿಗೆ ಸೀಮಿತವಾಗಲಿಲ್ಲ. ಅವರು ಸೂಪರ್ ಸೀರೀಸ್ ಪ್ರಶಸ್ತಿಗಳನ್ನು ಬೇಟೆಯಾಡಿದರು. 2009ರಲ್ಲಿ ಇಂಡೋನೇಷ್ಯಾ ಓಪನ್‌ ಗೆಲ್ಲುವ ಮೂಲಕ ಸೂಪರ್‌ ಸೀರೀಸ್‌ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಖ್ಯಾತಿ ಗಳಿಸಿದರು. 2010ರಲ್ಲಿ ಸಿಂಗಾಪುರ್‌ ಓಪನ್‌, ಇಂಡೋನೇಷ್ಯಾ ಓಪನ್‌ ಮತ್ತು ಹಾಂಗ್ ಕಾಂಗ್ ಓಪನ್‌ ಹೀಗೆ ಸಾಲುಸಾಲು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ದೆಹಲಿಯ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿದರು. ಮುಂದೆ 2018ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿಯೂ ಪಿ ವಿ ಸಿಂಧೂ ಅವರನ್ನು ಫೈನಲ್‌ನಲ್ಲಿ ಮಣಿಸಿ ಚಿನ್ನದ ಪದಲ ಗೆದ್ದರು. ಅದು ಅವರ ಛಲಕ್ಕೆ ಸಾಕ್ಷಿಯಾಗಿತ್ತು.

ಗಾಯಗಳ ಸರಮಾಲೆ, ಗೆಲುವಿನ ಹಾದಿ

ಕ್ರೀಡಾಪಟುವಿನ ಬದುಕಿನಲ್ಲಿ ಗಾಯಗಳು ಸಾಮಾನ್ಯ. ಆದರೆ ಸೈನಾ ಅವರ ವೃತ್ತಿಜೀವನದಲ್ಲಿ ಗಾಯಗಳು ದೊಡ್ಡ ಸವಾಲಾಗಿ ಪರಿಣಮಿಸಿದವು. 2016ರ ರಿಯೋ ಒಲಿಂಪಿಕ್ಸ್‌ ಸಮಯದಲ್ಲಿ ಮೊಣಕಾಲು ನೋವಿನಿಂದ ಬಳಲುತ್ತಿದ್ದ ಅವರು ಮೊದಲ ಸುತ್ತಿನಲ್ಲೇ ನಿರ್ಗಮಿಸಬೇಕಾಯಿತು. ಅನೇಕರು ಸೈನಾ ಯುಗ ಮುಗಿಯಿತು ಎಂದೇ ಭಾವಿಸಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಅವರು ಮತ್ತೆ ಅಂಗಳಕ್ಕಿಳಿದರು. 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ತಾವು ಇನ್ನೂ ಕಣದಿಂದ ಸರಿದಿಲ್ಲ ಎಂಬುದನ್ನು ಸಾಬೀತುಪಡಿಸಿದರು.

ತರಬೇತುದಾರರ ಬದಲಾವಣೆ ಮತ್ತು ವಿವಾದಗಳು

​ಸೈನಾ ಅವರ ವೃತ್ತಿಜೀವನದಲ್ಲಿ ತರಬೇತುದಾರರ ಪಾತ್ರ ಮಹತ್ವದ್ದು. ಗೋಪಿಚಂದ್ ಅವರ ಗರಡಿಯಲ್ಲಿ ಬೆಳೆದ ಸೈನಾ, 2014ರಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಬೆಂಗಳೂರಿನ ಪ್ರಕಾಶ್ ಪಡುಕೋಣೆ ಅಕಾಡೆಮಿಗೆ ಸೇರಿ ವಿಮಲ್ ಕುಮಾರ್ ಅವರ ಬಳಿ ತರಬೇತಿ ಪಡೆದರು. ಈ ಅವಧಿಯಲ್ಲೇ ಅವರು ವಿಶ್ವದ ನಂ.1 ಪಟ್ಟಕ್ಕೇರಿದ್ದು ವಿಶೇಷ. ನಂತರ 2017ರಲ್ಲಿ ಮತ್ತೆ ಗೋಪಿಚಂದ್ ಅವರ ಗರಡಿಗೆ ಮರಳಿದರು. ಈ ಬದಲಾವಣೆಗಳು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು, ಆದರೆ ಸೈನಾ ಮಾತ್ರ ತಮ್ಮ ಆಟದ ಮೇಲೆಯೇ ಹೆಚ್ಚು ಗಮನಹರಿಸಿದರು.

ವೈಯಕ್ತಿಕ ಜೀವನ ಮತ್ತು ವ್ಯಕ್ತಿತ್ವ

ಅಂಗಳದಲ್ಲಿ ಆಕ್ರಮಣಕಾರಿ ಆಟಗಾರ್ತಿಯಾಗಿರುವ ಸೈನಾ, ಹೊರಗೆ ಮೃದು ಸ್ವಭಾವದವರು. 2018ರಲ್ಲಿ ಸಹ ಆಟಗಾರ ಪರುಪಳ್ಳಿ ಕಶ್ಯಪ್ ಅವರನ್ನು ವಿವಾಹವಾದರು. ಬಾಲಿವುಡ್ ಸೇರಿದಂತೆ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡರೂ, ಅವರ ಮೊದಲ ಆದ್ಯತೆ ಯಾವಾಗಲೂ ಬ್ಯಾಡ್ಮಿಂಟನ್ ಆಗಿಯೇ ಉಳಿದಿದೆ. ಅವರ ಜೀವನದ ಆಧಾರದ ಮೇಲೆ ‘ಸೈನಾ’ ಎಂಬ ಬಯೋಪಿಕ್ ಕೂಡ ನಿರ್ಮಾಣವಾಗಿದ್ದು, ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಸೈನಾ ಅವರ ಪಾತ್ರ ನಿರ್ವಹಿಸಿದ್ದಾರೆ.

saina nehwal 12

ಪ್ರಶಸ್ತಿಗಳ ಗರಿ

ದೇಶಕ್ಕೆ ಕೀರ್ತಿ ತಂದ ಸೈನಾ ಅವರಿಗೆ ​ಅರ್ಜುನ ಪ್ರಶಸ್ತಿ (2009), ರಾಜೀವ್ ಗಾಂಧಿ ಖೇಲ್ ರತ್ನ (2010), ಪದ್ಮಶ್ರೀ (2010), ಪದ್ಮಭೂಷಣ (2016) ರಾಷ್ಟ್ರ, ರಾಜ್ಯ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸಂದಿವೆ.

ಸೈನಾ ಎಂಬ ಶಕೆ

​ಇಂದು ಭಾರತದಲ್ಲಿ ಪಿ.ವಿ. ಸಿಂಧು, ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್ ಅವರಂತಹ ಪ್ರತಿಭೆಗಳು ವಿಶ್ವಮಟ್ಟದಲ್ಲಿ ಮಿಂಚುತ್ತಿದ್ದಾರೆ. ಆದರೆ, ಈ ಹಾದಿಯನ್ನು ಮೊದಲು ಸುಗಮಗೊಳಿಸಿದವರು ಸೈನಾ ನೆಹ್ವಾಲ್. ಬ್ಯಾಡ್ಮಿಂಟನ್ ಎಂದರೆ ಕೇವಲ ಏಷ್ಯನ್ನರ ಸೊತ್ತು ಎಂಬು ಭಾವನೆಯನ್ನು ಸುಳ್ಳಾಗಿಸಿ, ಭಾರತೀಯರೂ ಕೂಡ ವಿಶ್ವ ಚಾಂಪಿಯನ್‌ಗಳಾಗಬಲ್ಲರು ಎಂಬ ಆತ್ಮವಿಶ್ವಾಸವನ್ನು ತುಂಬಿದ ಕೀರ್ತಿ ಸೈನಾಗೆ ಸಲ್ಲಬೇಕು.

​ತಮ್ಮ 33ನೇ ವಯಸ್ಸಿನಲ್ಲೂ ಫಿಟ್ನೆಸ್ ಮತ್ತು ಫಾರ್ಮ್‌ಗಾಗಿ ಹೋರಾಡುತ್ತಿರುವ ಸೈನಾ, ಇಂದಿನ ಯುವ ಪೀಳಿಗೆಗೆ ಒಂದು ಜೀವಂತ ಪಾಠಶಾಲೆ. ಸೋಲು-ಗೆಲುವುಗಳಾಚೆಗೆ, ಕ್ರೀಡೆಯ ಮೇಲಿನ ಅವರ ಬದ್ಧತೆ ಮತ್ತು ದೇಶಕ್ಕಾಗಿ ಪದಕ ಗೆಲ್ಲಬೇಕೆಂಬ ಹಸಿವು ಅವರನ್ನು ‘ದಿಗ್ಗಜ’ರ ಸಾಲಿನಲ್ಲಿ ನಿಲ್ಲಿಸುತ್ತದೆ. ಸೈನಾ ನೆಹ್ವಾಲ್ ಕೇವಲ ಒಬ್ಬ ಆಟಗಾರ್ತಿಯಲ್ಲ, ಅವರು ಭಾರತೀಯ ಮಹಿಳಾ ಕ್ರೀಡಾ ಲೋಕದ ಒಂದು ಕ್ರಾಂತಿಕಾರಿ ಅಧ್ಯಾಯ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...