ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಬುಧವಾರ ವಿಶಾಖಪಟ್ಟಣದಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಭಾರತ ತಂಡ 50 ರನ್‌ಗಳ ಸೋಲು ಕಂಡಿದೆ. ಆದರೆ, ಈ ಸೋಲಿನ ನಡುವೆಯೂ ಮಧ್ಯಮ ಕ್ರಮಾಂಕದ ಬ್ಯಾಟರ್ ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಇತಿಹಾಸದ ಪುಟ ಸೇರಿದೆ. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ದುಬೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ‘ಮೂರನೇ ವೇಗದ ಅರ್ಧಶತಕ’ ಬಾರಿಸಿದ ಕೀರ್ತಿಗೆ ಭಾಜನರಾದರು.
ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಭಾರತಕ್ಕೆ ದುಬೆ ಆಸರೆಯಾದರು. ಇಶ್ ಸೋಧಿ ಅವರ ಒಂದೇ ಓವರ್‌ನಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಸೇರಿ 26 ರನ್ ಚಚ್ಚಿದ ಅವರು, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು.
ಕೇವಲ 15 ಎಸೆತಗಳಲ್ಲಿ ಫಿಫ್ಟಿ ಬಾರಿಸುವ ಮೂಲಕ, ಯುವರಾಜ್ ಸಿಂಗ್ (12 ಎಸೆತ) ಮತ್ತು ಅಭಿಷೇಕ್ ಶರ್ಮಾ (14 ಎಸೆತ) ಅವರ ನಂತರದ ಸ್ಥಾನವನ್ನು ದುಬೆ ಅಲಂಕರಿಸಿದರು.
ಒಟ್ಟು 23 ಎಸೆತಗಳನ್ನು ಎದುರಿಸಿದ ಅವರು 3 ಬೌಂಡರಿ ಹಾಗೂ ಬರೋಬ್ಬರಿ 7 ಸಿಕ್ಸರ್‌ಗಳ ನೆರವಿನಿಂದ 65 ರನ್ ಕಲೆಹಾಕಿದರು. ದುರಾದೃಷ್ಟವಶಾತ್ ನಾನ್-ಸ್ಟ್ರೈಕರ್ ತುದಿಯಲ್ಲಿ ರನ್ ಔಟ್ ಆಗುವ ಮೂಲಕ ಅವರ ಅಬ್ಬರಕ್ಕೆ ಬ್ರೇಕ್ ಬಿತ್ತು. ದುಬೆ ಅವರ ವಿರೋಚಿತ ಹೋರಾಟದ ಹೊರತಾಗಿಯೂ, ನ್ಯೂಜಿಲೆಂಡ್ ನೀಡಿದ್ದ ಬೃಹತ್ ಗುರಿಯನ್ನು ಮುಟ್ಟುವಲ್ಲಿ ಟೀಂ ಇಂಡಿಯಾ ವಿಫಲವಾಯಿತು.
ಇದನ್ನು ಓದಿದ್ದೀರಾ? ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿ: ಕಿವೀಸ್ ಸದೆಬಡಿದ ಭಾರತಕ್ಕೆ ಟಿ20 ಸರಣಿ ಕಿರೀಟ
ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ, ಟಿಮ್ ಸೀಫರ್ಟ್ (62) ಮತ್ತು ಡೆವೊನ್ ಕಾನ್ವೆ (44) ಅವರ ಸ್ಫೋಟಕ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 215/7 ರನ್ ಕಲೆಹಾಕಿತು.
216 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತ, ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಿಂಕು ಸಿಂಗ್ (39) ಮತ್ತು ಶಿವಂ ದುಬೆ ಮಾತ್ರ ದಿಟ್ಟ ಹೋರಾಟ ಪ್ರದರ್ಶಿಸಿದರು. ಉಳಿದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಭಾರತ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು. ಈ ಸೋಲಿನ ಹೊರತಾಗಿಯೂ 5 ಪಂದ್ಯಗಳ ಸರಣಿಯಲ್ಲಿ ಭಾರತ ಇನ್ನೂ 3-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 215/7 (ಟಿಮ್ ಸೀಫರ್ಟ್ 62, ದೀಪಕ್ ಚಹಾರ್ 2/33).
ಭಾರತ: 18.4 ಓವರ್‌ಗಳಲ್ಲಿ 165/10 (ಶಿವಂ ದುಬೆ 65, ಮಿಚೆಲ್ ಸ್ಯಾಂಟ್ನರ್ 3/26).





