ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್, ಶನಿವಾರ ಪಾಕ್ ನಟಿ ಸನಾ ಜಾವೇದ್ ಅವರೊಂದಿಗಿನ ವಿವಾಹವನ್ನು ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಘೋಷಿಸಿದ್ದಾರೆ. ಆ ಮೂಲಕ ಭಾರತೀಯ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಅವರೊಂದಿಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದನ್ನು ಖಚಿತಪಡಿಸಿದ್ದಾರೆ.
ಶೋಯೆಬ್ ಮಲಿಕ್ ಅವರು, ಸನಾ ಅವರೊಂದಿಗಿನ ಮದುವೆಯ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕ ಇದನ್ನು ಖಚಿತಪಡಿಸಿದ್ದಾರೆ. ಮಲಿಕ್ ಅವರ ಮ್ಯಾನೇಜರ್ ಕೂಡ ಸನಾ ಜಾವೇದ್ ಅವರೊಂದಿಗಿನ ವಿವಾಹವಾದ ಸುದ್ದಿಯನ್ನು ಖಚಿತಪಡಿಸಿದ್ದಾರೆ.
– Alhamdullilah ♥️
“And We created you in pairs” وَخَلَقْنَاكُمْ أَزْوَاجًا pic.twitter.com/nPzKYYvTcV
— Shoaib Malik 🇵🇰 (@realshoaibmalik) January 20, 2024
ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಝಾ ಹಾಗೂ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲಿಕ್ ವಿಚ್ಛೇದನ ಪಡೆದಿದ್ದಾರೆ ಎಂಬ ಗಾಳಿ ಸುದ್ದಿ ಕಳೆದ ಕೆಲ ವರ್ಷದಿಂದಲೂ ವ್ಯಾಪಕವಾಗಿ ಹರಿದಾಡುತ್ತಿದ್ದವು. ಈ ಗಾಸಿಪ್ಗಳ ನಡುವೆಯೇ ಕಳೆದ ವರ್ಷ ಜೊತೆಯಾಗಿಯೇ ಇಬ್ಬರೂ ದುಬೈನಲ್ಲಿ ತಮ್ಮ ಪ್ರೀತಿಯ ಮಗನ ಹುಟ್ಟುಹಬ್ಬ ಆಚರಿಸಿ ನಾವು ಜೊತೆಯಾಗಿದ್ದೇವೆ ಎಂಬ ಸಂದೇಶ ನೀಡಿದ್ದರು. ಇದರ ಮಧ್ಯೆ ಕೆಲ ದಿನಗಳ ಹಿಂದೆ ಸಾನಿಯಾ ಮಿರ್ಝಾ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬದುಕಿನಲ್ಲಿರುವ ಕಷ್ಟಗಳ ಬಗ್ಗೆ ಪೋಸ್ಟ್ ಮಾಡಿದ್ದರು.

“ಮದುವೆಯೂ ಕಷ್ಟ ವಿಚ್ಛೇದನವೂ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಬೊಜ್ಜುತನವೂ ಕಷ್ಟ, ಫಿಟ್ ಆಗಿ ಇರೋದು ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಸಾಲ ಹೊಂದಿರುವುದು ಕೂಡ ಕಷ್ಟ ಅರ್ಥಿಕವಾಗಿ ಸುಸ್ಥಿರವಾಗಿರುವುದು ಕೂಡ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಮಾತನಾಡಿದರೂ ಕಷ್ಟ ಮಾತನಾಡದೇ ಇದ್ದರೂ ಕಷ್ಟ, ನಿಮ್ಮ ಕಷ್ಟ ಏನು ಎಂಬುದನ್ನು ಆಯ್ಕೆ ಮಾಡಿ, ಜೀವನ ಎಂದಿಗೂ ಸುಲಭವಾಗಿರುವುದಿಲ್ಲ, ಅದು ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ ನಾವು ಬುದ್ಧಿವಂತಿಕೆಯಿಂದ ನಮ್ಮ ಕಷ್ಟ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು” ಎಂಬಂತಹ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಶೋಯೆಬ್ ಮಲಿಕ್, ಶನಿವಾರ ಪಾಕ್ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.
ಸಾನಿಯಾ ಮಿರ್ಝಾ ಮತ್ತು ಶೋಯೆಬ್ ಮಲಿಕ್ 2010ರಲ್ಲಿ ಮದುವೆಯಾಗಿದ್ದರು. ಇಝಾನ್ ಎಂಬ ಗಂಡು ಇದೆ. ಅಕ್ಟೋಬರ್ 2018ರಲ್ಲಿ ಮಗುವಿನ ಜನನವಾಗಿತ್ತು.
ಶೋಯೆಬ್ ಈಗ ಕೈ ಹಿಡಿದಿರುವ ಪಾಕಿಸ್ತಾನಿ ನಟಿ ಸನಾ, ಈ ಹಿಂದೆ ಗಾಯಕ ಉಮೈರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದರು. ಇಬ್ಬರೂ 2020ರಲ್ಲಿ ಮದುವೆಯಾಗಿದ್ದರು. ಅವರ ವಿವಾಹ ವಿಚ್ಚೇದನೆಯ ಹಿಂದಿನ ಕಾರಣ ತಿಳಿದಿಲ್ಲ.





