ಭಾರತ ಏಕದಿನ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯದಲ್ಲಿ ಪಕ್ಕೆಲುಬಿನ ಗಾಯದಿಂದ ಆಂತರಿಕ ರಕ್ತಸ್ರಾವವಾಗಿ ಸಿಡ್ನಿಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಾಗಿದ್ದಾರೆ.
ಮೂರನೇ ಏಕದಿನ ಪಂದ್ಯದ ವೇಳೆ ಆಸೀಸ್ ಬ್ಯಾಟರ್ ಅಲೆಕ್ಸ್ ಕ್ಯಾರಿಯ ವಿಕೆಟ್ ಪಡೆಯಲು ಓಡುವ ಸಂದರ್ಭದಲ್ಲಿ ಅವರ ಎಡಗಡೆ ಪಕ್ಕೆಲುಬಿಗೆ ಗಾಯವಾಗಿತ್ತು. ಪಂದ್ಯದ ನಂತರ ಡ್ರೆಸ್ಸಿಂಗ್ ರೂಂಗೆ ಮರಳಿದ ತಕ್ಷಣ ಅವರ ಆರೋಗ್ಯ ಪರಿಸ್ಥಿತಿ ಏರಿಳಿತಗೊಂಡಿದ್ದರಿಂದ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.
“ಶ್ರೇಯಸ್ ಕಳೆದ ಎರಡು ದಿನಗಳಿಂದ ಐಸಿಯುನಲ್ಲಿದ್ದಾರೆ. ಅವರಿಗೆ ಆಂತರಿಕ ರಕ್ತಸ್ರಾವ ಕಂಡುಬಂದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚೇತರಿಕೆಯನ್ನು ಅವಲಂಬಿಸಿ ಎರಡರಿಂದ ಏಳು ದಿನಗಳವರೆಗೆ ಅವರು ವೈದ್ಯರ ಗಮನದಲ್ಲಿರುತ್ತಾರೆ” ಎಂದು ಹೆಸರು ಬಹಿರಂಗಗೊಳಿಸದ ಮೂಲವೊಂದು ತಿಳಿಸಿದೆ.
ಇದನ್ನು ಓದಿದ್ದೀರಾ? ICC Women’s World Cup: ನ್ಯೂಜಿಲೆಂಡ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ
ಬಿಸಿಸಿಐ ವೈದ್ಯಕೀಯ ತಂಡವು ಶ್ರೇಯಸ್ ಅವರ ಆರೋಗ್ಯದಲ್ಲಿ ಏರಿಳಿತ ಕಂಡುಬಂದ ತಕ್ಷಣ ಕ್ರಮ ಕೈಗೊಂಡಿತು. “ತಂಡದ ವೈದ್ಯ ಮತ್ತು ಫಿಸಿಯೋ ಯಾವುದೇ ಅಪಾಯವನ್ನು ತೆಗೆದುಕೊಳ್ಳದೆ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಈಗ ಪರಿಸ್ಥಿತಿ ಸ್ಥಿರವಾಗಿದೆ, ಆದರೆ ಇದು ಗಂಭೀರವಾಗಬಹುದಿತ್ತು. ಶ್ರೇಯಸ್ ಗಟ್ಟಿಗನಾಗಿದ್ದು, ಶೀಘ್ರವೇ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ” ಎಂದು ಮೂಲವು ಹೇಳಿದೆ.
31 ವರ್ಷದ ಶ್ರೇಯಸ್‌ಗೆ ಆಂತರಿಕ ರಕ್ತಸ್ರಾವದಿಂದಾಗಿ ಚೇತರಿಕೆಗೆ ಹೆಚ್ಚಿನ ಸಮಯ ಬೇಕಾಗಬಹುದು. ಪ್ರಸ್ತುತ, ಅವರು ಕ್ರಿಕೆಟ್‌ಗೆ ಮರಳುವ ಸಮಯವನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅವರು ಕನಿಷ್ಠ ಒಂದು ವಾರ ಸಿಡ್ನಿಯ ಆಸ್ಪತ್ರೆಯಲ್ಲಿರುವ ಸಾಧ್ಯತೆಯಿದೆ.





