ಸ್ಮೃತಿಯ ಪ್ರಭಾವದಿಂದ ಹಲವಾರು ಬಾಲಕಿಯರು ಕ್ರಿಕೆಟ್ ಬ್ಯಾಟ್ ಹಿಡಿಯಲು ಪ್ರೇರಿತರಾಗಿದ್ದಾರೆ. ಸಮಾಜದ ಕಟ್ಟುಪಾಡುಗಳನ್ನು ಮೀರಿ, ಕೇವಲ ಪ್ರತಿಭೆಯಿಂದಲೇ ಅಗ್ರಸ್ಥಾನ ತಲುಪಿದ ಸ್ಮೃತಿ, ಇಂದು ಮಹಿಳಾ ಶಕ್ತಿಯ ಜೀವಂತ ಪ್ರತೀಕ. ಮೈದಾನದಲ್ಲಿ ಬ್ಯಾಟ್ ಬೀಸುವಾಗ ಆಕೆ ಕೇವಲ ರನ್ ಬಾರಿಸುತ್ತಿಲ್ಲ; ಪ್ರತಿ ಹೆಣ್ಣುಮಗುವಿನ ಕನಸಿಗೆ ಹಾದಿ ತೋರುತ್ತಿದ್ದಾರೆ
ಸ್ಮೃತಿ ಮಂಧಾನ, ಭಾರತೀಯ ಮಹಿಳಾ ಕ್ರಿಕೆಟ್‌ನ ಸ್ಟಾರ್, ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. 2025ರ ಮಹಿಳಾ ವಿಶ್ವಕಪ್‌ನಲ್ಲಿ ಆಕೆಯ ಭರ್ಜರಿ ಪ್ರದರ್ಶನ, 828 ರೇಟಿಂಗ್ ಅಂಕಗಳೊಂದಿಗೆ ಆಕೆಯನ್ನು ವಿಶ್ವದ ನಂ.1 ಬ್ಯಾಟರ್ ಆಗಿ ಮಾಡಿದೆ. ನ್ಯೂಜಿಲೆಂಡ್ ವಿರುದ್ಧ ಸಿಡಿಸಿದ 109 ರನ್‌ಗಳ ಶತಕ ಮತ್ತು ಬಾಂಗ್ಲಾದೇಶ ವಿರುದ್ಧ 34 ರನ್‌ಗಳ ಅಜೇಯ ಇನಿಂಗ್ಸ್ ಈ ಸಾಧನೆಗೆ ಕಾರಣವಾಯಿತು. ಈ ಫಾರ್ಮ್‌ನಿಂದ ಆಕೆ, ಆಸ್ಟ್ರೇಲಿಯಾದ ಆಶ್ ಗಾರ್ಡ್ನರ್ (731 ಅಂಕ)ಗಿಂತ 100ಕ್ಕೂ ಹೆಚ್ಚು ಅಂಕಗಳ ಮುನ್ನಡೆ ಪಡೆದಿದ್ದಾರೆ. 28 ವರ್ಷದ ಸ್ಮೃತಿ, 2019ರಲ್ಲಿ ಮೊದಲ ಬಾರಿಗೆ ಈ ಗೌರವ ಪಡೆದಿದ್ದರು. ಆರು ವರ್ಷಗಳ ನಂತರ 2025ರಲ್ಲಿ ಮತ್ತೆ ಶಿಖರಕ್ಕೇರಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆಕೆಯ ಅದ್ಭುತ ಆಟಕ್ಕೆ ಐಸಿಸಿ ವುಮೆನ್ಸ್ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿ ದೊರೆತಿತ್ತು. ಆಕೆಯ ಸ್ಟ್ರೋಕ್‌ಪ್ಲೇ, ಸ್ಥಿರತೆ, ಮತ್ತು ಒತ್ತಡದ ಸಂದರ್ಭದಲ್ಲಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯವು ನಿಜಕ್ಕೂ ಸಾಧನೆಯೇ ಸರಿ. ಮಂಧಾನರ ಈ ಸಾಧನೆ ಕೇವಲ ವೈಯಕ್ತಿಕ ಗೆಲುವಲ್ಲ; ಅದು ಭಾರತೀಯ ಮಹಿಳಾ ಕ್ರಿಕೆಟ್‌ನ ಬೆಳವಣಿಗೆಯ ಪ್ರತೀಕವೂ ಆಗಿದೆ. ಈ ಅಗ್ರಸ್ಥಾನವು ಯುವತಿಯರಿಗೆ ಪ್ರೇರಣೆಯಾಗಿದ್ದು, “ಹೆಣ್ಣುಮಕ್ಕಳು ಕ್ರಿಕೆಟ್‌ನಲ್ಲಿ ವಿಶ್ವಮಟ್ಟದಲ್ಲಿ ಸಾಧಿಸಬಹುದು” ಎಂಬ ಸಂದೇಶವನ್ನು ನೀಡಿದೆ. ಪರಿಶ್ರಮದಿಂದ ಯಾವ ಶಿಖರವನ್ನೂ ಮುಟ್ಟಬಹುದು,” ಎಂಬ ಆಕೆಯ ಛಲ, ಭಾರತದ ಹೆಮ್ಮೆಯನ್ನು ವಿಶ್ವದೆದುರು ಎತ್ತಿಹಿಡಿದಿದೆ. ಸ್ಮೃತಿಯವರ ಬ್ಯಾಟಿಂಗ್ ಶೈಲಿ, ನಿರಂತರತೆ ಹಾಗೂ ಆತ್ಮವಿಶ್ವಾಸವು ಭಾರತವನ್ನು ವಿಶ್ವದ ಕ್ರಿಕೆಟ್ ನಕ್ಷೆಯಲ್ಲಿ ಮತ್ತೆ ಪ್ರಕಾಶಮಾನಗೊಳಿಸಿದೆ.
ಬಾಲ್ಯದಿಂದ ಕನಸಿನ ಆರಂಭ
ಸ್ಮೃತಿ ಮಂಧಾನ 1996ರ ಜುಲೈ 18ರಂದು ಮುಂಬೈನ ಸಾಮಾನ್ಯ ಕುಟುಂಬದಲ್ಲಿ ಜನಿಸಿದಳು. ತಂದೆ ಶ್ರೀನಿವಾಸ್ ಮಂಧಾನ ಕೆಮಿಕಲ್ ಸರಬರಾಜು ವ್ಯವಹಾರದಲ್ಲಿದ್ದರು ಮತ್ತು ತಾಯಿ ಸ್ಮಿತಾ ಮಂಧಾನ ಗೃಹಿಣಿ. ಆಕೆ ಬೆಳೆದ ಕುಟುಂಬ ಮಧ್ಯಮ ವರ್ಗದಾದರೂ ಕನಸುಗಳು ಮಾತ್ರ ದೊಡ್ಡದಾಗಿದ್ದವು. ತಂದೆಯ ವೃತ್ತಿಯ ಕಾರಣದಿಂದಾಗಿ ಮಂಧಾನ ಕುಟುಂಬವು ಸಾಂಗ್ಲಿಯ ಮಾಧವನಗರಕ್ಕೆ ವಾಸ ಬದಲಿಸಿದಾಗ, ಸ್ಮೃತಿಯ ಕ್ರಿಕೆಟ್ ಪ್ರಪಂಚಕ್ಕೆ ಮೊದಲ ಹೆಜ್ಜೆ ಇಟ್ಟರು. ತಂದೆ ಜಿಲ್ಲಾ ಮಟ್ಟದ ಕ್ರಿಕೆಟಿಗರಾಗಿದ್ದರೆ, ಅಣ್ಣ ಶ್ರವಣ್ ಮಹಾರಾಷ್ಟ್ರದ ಅಂಡರ್–16 ತಂಡದಲ್ಲಿ ಆಡುತ್ತಿದ್ದ. ಮನೆಯ ಪರಿಸರದಲ್ಲಿಯೇ ಕ್ರಿಕೆಟ್‌ನ ಸೊಗಡಿದ್ದರೂ ಈ ಚಿಕ್ಕ ಹುಡುಗಿ ಮುಂದೊಂದು ದಿನ ಭಾರತದ ಕ್ರಿಕೆಟ್ ಇತಿಹಾಸವನ್ನು ಬದಲಿಸುತ್ತಾರು ಎಂದು ಯಾರೂ ಊಹಿಸಿರಲಿಲ್ಲ. ತಾಯಿ ಸ್ಮಿತಾ ಎಂದಿಗೂ ಹೆಣ್ಣುಮಕ್ಕಳ ಕನಸುಗಳನ್ನು ತಡೆಯದವರಾಗಿದ್ದರು. “ನಿನ್ನ ಇಷ್ಟವಾದ ಹಾದಿಯಲ್ಲಿ ಸಾಗು, ಆದರೆ ಅದರಲ್ಲಿ ಶ್ರೇಷ್ಠತೆ ತೋರು” ಎನ್ನುವ ಅವರ ತಾಯಿಯ ಮಾತು ಸ್ಮೃತಿಯ ಜೀವನದ ದಿಕ್ಕು ಬದಲಿಸಿತು.
ಒಂಬತ್ತನೇ ವಯಸ್ಸಿನಲ್ಲೇ ಸ್ಮೃತಿಯ ಕ್ರಿಕೆಟ್ ಪ್ರತಿಭೆ ಎಲ್ಲರ ಗಮನ ಸೆಳೆಯಿತು. ಆಕೆಯನ್ನು ಮಹಾರಾಷ್ಟ್ರದ ಅಂಡರ್–15 ತಂಡಕ್ಕೆ ಆಯ್ಕೆ ಮಾಡಲಾಯಿತು. ಅಷ್ಟೇ ಅಲ್ಲ, ಕೇವಲ 11ರ ಹರೆಯದಲ್ಲಿ ಅಂಡರ್–19 ತಂಡಕ್ಕೂ ಆಯ್ಕೆಯಾದಳು. ಇದು ಯಾವುದೇ ಯುವ ಆಟಗಾರ್ತಿಗೆ ದೊಡ್ಡ ಸಾಧನೆ. ಬೆಳಿಗ್ಗೆ ಶಾಲೆ, ಸಂಜೆ ಅಭ್ಯಾಸ. ಇದೇ ಸ್ಮೃತಿಯ ದಿನಚರಿಯಾಗಿತ್ತು. ಸತತಶ್ರಮದ ಫಲವಾಗಿ 2013ರಲ್ಲಿ 16 ವರ್ಷದ ಸ್ಮೃತಿ ಪಂಜಾಬ್ ವಿರುದ್ಧ ನಡೆದ ಅಂತರರಾಜ್ಯ ಏಕದಿನ ಪಂದ್ಯದಲ್ಲಿ 224 ರನ್ ಬಾರಿಸಿದರು. 150 ಚೆಂಡುಗಳಲ್ಲಿ ಬಂದ ಈ ದ್ವಿಶತಕ ಮಹಿಳಾ ದೇಶಿ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ದಾಖಲೆಯಾಗಿತ್ತು. ಆ ದಿನದಿಂದ ಭಾರತೀಯ ಕ್ರಿಕೆಟ್ ಲೋಕದಲ್ಲಿ ಸ್ಮೃತಿ ಎಂಬ ಹೆಸರು ಹೊಳೆಯತೊಡಗಿತು. ಮಾಧ್ಯಮಗಳು ಆಕೆಯನ್ನು “ಮಹಿಳಾ ಸಚಿನ್” ಎಂದು ಕರೆಯತೊಡಗಿದವು. ಆದರೆ ಆಕೆ ನಗುಮುಖದಿಂದ “ನಾನು ಸ್ಮೃತಿ ಆಗಲು ಬಂದಿದ್ದೇನೆ” ಎಂದಿದ್ದರು.

ಆ ವರ್ಷದಲ್ಲೇ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಸ್ಮೃತಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದರು. ಕೇವಲ 17ನೇ ವಯಸ್ಸಿನಲ್ಲಿ ಟೀಂ ಇಂಡಿಯಾದ ಜರ್ಸಿ ಧರಿಸು ತೊಟ್ಟು ಮೈದಾನಕ್ಕಿಳಿದರು. ಕ್ರಿಕೆಟ್ ತಜ್ಞರು ಆಕೆಯ ಬ್ಯಾಟಿಂಗ್ ಶೈಲಿಯನ್ನು ಸೌಂದರ್ಯ ಮತ್ತು ಶಕ್ತಿ ಎಂಬ ಎರಡು ಪದಗಳಲ್ಲಿ ವರ್ಣಿಸಿದರು. ಎಡಗೈ ಬ್ಯಾಟರ್ ಆಗಿರುವ ಸ್ಮೃತಿ, ತನ್ನ ಶಾಟ್ ಆಯ್ಕೆಯಲ್ಲಿ ನಿಖರತೆ ಮತ್ತು ಸ್ಥೈರ್ಯವನ್ನು ತೋರಿಸುತ್ತಾರು. 2014ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದಾಗ, ಸ್ಮೃತಿಯ ಆಟದಲ್ಲಿ ಕಂಡ ತಾಳ್ಮೆ ಮತ್ತು ತಂತ್ರಜ್ಞಾನ ಎಲ್ಲರ ಮೆಚ್ಚುಗೆ ಪಡೆದಿತು. ಆಕೆ ಕೇವಲ ರನ್‌ಗಳನ್ನು ಮಾತ್ರ ಬಾರಿಸುತ್ತಿರಲಿಲ್ಲ; ಹೊಸ ಪೀಳಿಗೆಯ ಹೆಣ್ಣುಮಕ್ಕಳಿಗೆ “ಕ್ರಿಕೆಟ್ ಹುಡುಗರಷ್ಟೇ ನಮ್ಮದು ಕೂಡ” ಎಂಬ ಸಂದೇಶ ನೀಡುತ್ತಿದ್ದರು.
ಐಸಿಸಿಯಲ್ಲಿ ಸ್ಥಾನ ಪಡೆದ ಮೊದಲ ಆಟಗಾರ್ತಿ
2018–19 ಅವಧಿ ಸ್ಮೃತಿಯ ವೃತ್ತಿ ಜೀವನ ಸುವರ್ಣ ಯುಗವೆಂದೇ ಹೇಳಬಹುದು. ಆಕೆಯ ಪ್ರದರ್ಶನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಲಿಗಲ್ಲಾಗಿತ್ತು. ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗಳಲ್ಲಿ ಸ್ಮೃತಿಯ ಹೆಸರು ಸೇರಿತು. 2019ರಲ್ಲಿ ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದಾಗ, ಅದು ಭಾರತದ ಮಹಿಳಾ ಕ್ರಿಕೆಟ್‌ಗೆ ಹೊಸ ಅಧ್ಯಾಯ. ಆದರೆ ಯಶಸ್ಸಿನ ದಾರಿಯಲ್ಲಿ ಸವಾಲುಗಳು ಕೂಡ ಇದ್ದವು. ಗಾಯಗಳು, ವಿಶ್ರಾಂತಿ ಅವಧಿ, ಫಾರ್ಮ್‌ನಲ್ಲಿ ಹಿನ್ನಡೆ – ಇವೆಲ್ಲವನ್ನು ಎದುರಿಸಿದರೂ ಸ್ಮೃತಿ ತನ್ನ ಶ್ರಮವನ್ನು ಕಡಿಮೆ ಮಾಡಲಿಲ್ಲ. “ಪ್ರತಿ ಬಾರಿ ಬಿದ್ದಾಗ ಮತ್ತೆ ಎದ್ದುನಿಲ್ಲುವುದು ನನ್ನ ಗುರಿ” ಎಂದು ಆಕೆ ಹೇಳಿದ ಮಾತು ಎಲ್ಲರಿಗೂ ಸ್ಪೂರ್ತಿ ನೀಡಿತ್ತು.
2025ರಲ್ಲಿ ಸ್ಮೃತಿಯ ಹೆಸರು ಮತ್ತೆ ವಿಶ್ವದ ಅಗ್ರಸ್ಥಾನದಲ್ಲಿ ಹೊಳೆಯಿತು. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ತ್ರಿಕೋನ ಸರಣಿಯಲ್ಲಿನ ಆಕೆಯ ಭರ್ಜರಿ ಶತಕಗಳು ಆಕೆಯನ್ನು 727 ಅಂಕಗಳೊಂದಿಗೆ ಐಸಿಸಿ ಶ್ರೇಯಾಂಕದ ಪಟ್ಟಿಗೆ ಸೇರಿಸಿದವು. ಇಂಗ್ಲೆಂಡಿನ ನಟಾಲಿ ಸ್ಕಿವರ್-ಬ್ರಂಟ್ ಮತ್ತು ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ ಹತ್ತಿರದ ಸ್ಪರ್ಧಿಗಳಾದರೂ, ಸ್ಮೃತಿ ತಮ್ಮ ಸ್ಥೈರ್ಯ ಮತ್ತು ನಿರಂತರ ಪ್ರದರ್ಶನದಿಂದ ಅಗ್ರಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಟಿ20 ಶ್ರೇಯಾಂಕದಲ್ಲಿಯೂ ಆಕೆ ಟಾಪ್–10ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿಯಾಗಿ ಹೆಸರು ಮಾಡಿದ್ದರು.
ಇದನ್ನು ಓದಿದ್ದೀರಾ? ICC Women’s World Cup: ನ್ಯೂಜಿಲೆಂಡ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ
ಅವರ ಸಾಧನೆಗಳ ಪಟ್ಟಿಯು ದೀರ್ಘವಾಗಿದೆ. 2018 ಮತ್ತು 2021ರಲ್ಲಿ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗ ಪ್ರಶಸ್ತಿ, 2022 ಮತ್ತು 2025ರಲ್ಲಿ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿ, 2018ರಲ್ಲಿ ಬಿಸಿಸಿಐ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಗೌರವ — ಇವು ಸ್ಮೃತಿಯ ಶ್ರಮದ ಸಾಕ್ಷಿಗಳು. 2025ರ ಜನವರಿಯಲ್ಲಿ 4000 ಏಕದಿನ ರನ್‌ಗಳ ಮೈಲಿಗಲ್ಲು ತಲುಪಿದ ಸ್ಮೃತಿ, ಭಾರತದಿಂದ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಮಹಿಳಾ ಕ್ರಿಕೆಟಿಗರೂ ಆಗಿದ್ದಾರೆ. ಇಷ್ಟು ಯಶಸ್ಸಿನ ನಡುವೆ ಆಕೆಯ ವಿನಯ ಮತ್ತು ಸರಳತೆ ಎಂದೂ ಮಾಸಿ ಹೋಗಿಲ್ಲ. “ನಾನು ನನ್ನ ಸಾಧನೆಗಳ ಬಗ್ಗೆ ಮಾತನಾಡುವುದಕ್ಕಿಂತ, ಅದನ್ನು ಮೈದಾನದಲ್ಲಿ ತೋರಿಸುತ್ತೇನೆ,” ಎನ್ನುವ ಸ್ಮೃತಿಯ ನಿಲುವು ಅವರ ಸರಳತೆಗೆ ಸಾಕ್ಷಿ.

ಕ್ರಿಕೆಟ್‌ನ ಹೊರಗೂ ವಿಶಿಷ್ಟವಾಗಿರುವ ಮಂಧಾನ
ಮೈದಾನದ ಹೊರಗಿನ ಸ್ಮೃತಿ ಬೇರೆಯ ಲೋಕದವರಂತೆ ಕಾಣುತ್ತಾರೆ. ಅಡುಗೆಯು ಆಕೆಯ ಪ್ರಿಯ ಹವ್ಯಾಸ. ವಿಶೇಷವಾಗಿ ಪಂಜಾಬಿ ಶೈಲಿಯ ಪನ್ನೀರ್ ಟಿಕ್ಕಾ ಮಸಾಲಾ ಮತ್ತು ಚೋಕಾ-ರೋಟಿ ಆಕೆಯ ಮನಪಸಂದ. ಅಡುಗೆ ಬಗ್ಗೆ ಮಾತನಾಡುವಾಗ ಆಕೆಯ ಕಣ್ಣು ಹೊಳೆಯುತ್ತದೆ. “ಅಡುಗೆ ನನಗೆ ಶಾಂತಿ ಕೊಡುತ್ತದೆ, ಪಿಚ್ನಲ್ಲೂ ಅದು ಸಹನೆ ಕಲಿಸುತ್ತದೆ,” ಎಂದು ಆಕೆ ನಗುತ್ತಾ ಹೇಳುತ್ತಾರೆ. ಅಷ್ಟೇ ಅಲ್ಲ, ಸ್ಮೃತಿಗೆ ಕಂಪ್ಯೂಟರ್ ಗೇಮ್‌ಗಳಲ್ಲಿಯೂ ಆಸಕ್ತಿ ಇದೆ. ಕ್ರಿಕೆಟ್‌ನ ತಂತ್ರಶಾಸ್ತ್ರ, ತ್ವರಿತ ನಿರ್ಧಾರಗಳು — ಇವುಗಳಲ್ಲಿ ಆಕೆಗೆ ಗೇಮ್‌ಗಳ ಪ್ರೇರಣೆ ಸಿಕ್ಕಂತೆ. ಪ್ರವಾಸ ಪ್ರಿಯೆಯಾದ ಸ್ಮೃತಿ, ಸ್ವಿಟ್ಜರ್‌ಲ್ಯಾಂಡ್‌ನ ಹಿಮಪರ್ವತಗಳು ಮತ್ತು ಆಸ್ಟ್ರೇಲಿಯಾದ ಪ್ರಕೃತಿಯ ಸೌಂದರ್ಯ’ ಅಚ್ಚುಮೆಚ್ಚಿನ ಸ್ಥಳಗಳಾಗಿವೆ. “ಪ್ರಕೃತಿಯ ಮಧ್ಯೆ ನಾನೇನಾದರೂ ಮರೆತುಹೊಗುತ್ತೇನೆ; ಆದರೆ ನನ್ನೊಳಗಿನ ಶಕ್ತಿ ಮತ್ತೆ ಹುಟ್ಟುತ್ತದೆ,” ಎಂಬುದು ಆಕೆಯ ಮನದಾಳದ ಮಾತು.
ಸ್ಮೃತಿಯ ಜೀವನದ ಅತ್ಯಂತ ಬಲವಾದ ಆಧಾರ — ಆಕೆಯ ಕುಟುಂಬ. ತಂದೆ ತರಬೇತಿಯನ್ನು ನೋಡಿಕೊಂಡರೆ, ತಾಯಿ ಆಹಾರಕ್ರಮದಿಂದ ಹಿಡಿದು ಶಿಸ್ತಿನವರೆಗೂ ಕಾಳಜಿ ವಹಿಸುತ್ತಿದ್ದರು. ಅಣ್ಣ ಶ್ರವಣ್ ಕ್ರಿಕೆಟ್ ತಂತ್ರಗಳಲ್ಲಿ ಆಕೆಗೆ ಸಲಹೆಗಾರನಂತೆ. “ನನ್ನ ಪೋಷಕರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ, ನಾನು ಆ ನಂಬಿಕೆಗೆ ತಕ್ಕಂತೆ ಬದುಕುತ್ತಿದ್ದೇನೆ,” ಎನ್ನುತ್ತಾರೆ ಸ್ಮೃತಿ. ಈ ಕುಟುಂಬದ ಬೆಂಬಲವೇ ಆಕೆಯನ್ನು ಪ್ರತಿಯೊಂದು ಹಿನ್ನಡೆಯಿಂದ ಎದ್ದುಕೊಳ್ಳುವ ಶಕ್ತಿ ನೀಡಿದೆ.
ಇಂದು ಸ್ಮೃತಿ ಕೇವಲ ಕ್ರಿಕೆಟಿಗರಲ್ಲ, ಅದು ಒಂದು ಬ್ರ್ಯಾಂಡ್. ₹33 ಕೋಟಿ ರೂ. ಆಸ್ತಿ ಹೊಂದಿರುವ ಸ್ಮೃತಿ, ಬಿಸಿಸಿಐ ಒಪ್ಪಂದದಡಿ ವರ್ಷಕ್ಕೆ ₹50 ಲಕ್ಷ ರೂ. ಸಂಬಳ ಪಡೆಯುತ್ತಾರೆ. ನೈಕ್, ಗಾರ್ನಿಯರ್, ಹೀರೋ ಮೋಟೋಕಾರ್ಪ್ ಮುಂತಾದ ಅನೇಕ ಬ್ರ್ಯಾಂಡ್‌ಗಳ ಅಂಬಾಸಿಡರ್ ಆಗಿರುವ ಆಕೆ, ಕ್ರಿಕೆಟ್ ಮೈದಾನದ ಹೊರಗೂ ಜನಪ್ರಿಯ. ಇನ್‌ಸ್ಟಾಗ್ರಾಂನಲ್ಲಿ ಕೋಟ್ಯಾಂತರ ಅನುಯಾಯಿಗಳನ್ನು ಹೊಂದಿರುವ ಸ್ಮೃತಿ, ಯುವತಿಯರಿಗೆ ಫ್ಯಾಷನ್ ಮತ್ತು ಫಿಟ್ನೆಸ್ ಐಕಾನ್ ಆಗಿದ್ದಾರೆ. ಆದರೆ ಆಕೆಯ ಕಣ್ಣುಗಳಲ್ಲಿ ಇನ್ನೂ ಅದೇ ಸರಳತೆ — ಸಾಂಗ್ಲಿಯ ಪಿಚ್‌ನಲ್ಲಿ ಆಟವಾಡುತ್ತಿದ್ದ ಆ ಹುಡುಗಿಯ ನಗು ಮಾಸಿ ಹೋಗಿಲ್ಲ.
ಸ್ಮೃತಿಯ ಪ್ರಭಾವದಿಂದ ಹಲವಾರು ಬಾಲಕಿಯರು ಕ್ರಿಕೆಟ್ ಬ್ಯಾಟ್ ಹಿಡಿಯಲು ಪ್ರೇರಿತರಾಗಿದ್ದಾರೆ. ಸಮಾಜದ ಕಟ್ಟುಪಾಡುಗಳನ್ನು ಮೀರಿ, ಕೇವಲ ಪ್ರತಿಭೆಯಿಂದಲೇ ಅಗ್ರಸ್ಥಾನ ತಲುಪಿದ ಸ್ಮೃತಿ, ಇಂದು ಮಹಿಳಾ ಶಕ್ತಿಯ ಜೀವಂತ ಪ್ರತೀಕ. ಮೈದಾನದಲ್ಲಿ ಬ್ಯಾಟ್ ಬೀಸುವಾಗ ಆಕೆ ಕೇವಲ ರನ್ ಬಾರಿಸುತ್ತಿಲ್ಲ; ಪ್ರತಿಯೊಬ್ಬ ಹೆಣ್ಣುಮಗುವಿನ ಕನಸಿಗೆ ಹಾದಿ ತೋರುತ್ತಿದ್ದಾರೆ. ಅವರ ಪ್ರತಿಯೊಂದು ಶತಕ, ಪ್ರತಿಯೊಂದು ರನ್, ಪ್ರತಿಯೊಂದು ಗೆಲುವು — ಭಾರತಕ್ಕೆ ಹೆಮ್ಮೆಯ ಸನ್ನಿವೇಶ. ಕ್ರಿಕೆಟ್‌ನ ಪವಿತ್ರ ಮಣ್ಣಿನಲ್ಲಿ ಸ್ಮೃತಿ ಬರೆದ ಕಥೆ, ಪರಿಶ್ರಮ, ಸಹನೆ ಮತ್ತು ಪ್ರೇರಣೆಯ ಮಹಾಕಾವ್ಯವಾಗಿದೆ.
ಇದನ್ನೂ ಓದಿ ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದು
ಇಂದು ಸ್ಮೃತಿ ಮಂಧಾನ ವಿಶ್ವದ ಅಗ್ರಸ್ಥಾನದಲ್ಲಿ ನಿಂತಿದ್ದರೂ, ಆಕೆಯ ದೃಷ್ಟಿ ಮುಂದಿನ ಪೀಳಿಗೆಯತ್ತ. “ನಾನು ಮೊದಲ ಸ್ಥಾನಕ್ಕೇರುತ್ತೇನೆ ಎನ್ನುವುದಕ್ಕಿಂತ, ನನ್ನ ನಂತರ ಇನ್ನೂ ಸಾವಿರಾರು ಹೆಣ್ಣುಮಕ್ಕಳು ಈ ಸ್ಥಾನಕ್ಕೇರುವ ದಿನ ನೋಡಬೇಕೆಂದು ಬಯಸುತ್ತೇನೆ,” ಎನ್ನುವ ಆಕೆಯ ದೃಷ್ಟಿ, ವ್ಯಕ್ತಿತ್ವದ ಮೆರಗು. ಭವಿಷ್ಯದಲ್ಲಿ ಮಹಿಳಾ ಕ್ರಿಕೆಟ್ ಅಕಾಡೆಮಿಯನ್ನು ಆರಂಭಿಸಿ, ಬಡ ಪ್ರತಿಭಾವಂತ ಬಾಲಕಿಯರಿಗೆ ಉಚಿತ ತರಬೇತಿ ನೀಡುವ ಕನಸು ಆಕೆಯ ಮುಂದಿನ ಗುರಿಯಾಗಿದೆ.





