2025ನೇ ಇಸವಿ ಭಾರತೀಯ ಕ್ರೀಡಾ ವಲಯಕ್ಕೆ ಪಾಠಗಳನ್ನು ಮತ್ತು ಪ್ರಶಸ್ತಿಗಳನ್ನು ಸಮಾನವಾಗಿ ನೀಡಿದೆ. ಫುಟ್‌ಬಾಲ್‌ನಲ್ಲಿ ಆಮೂಲಾಗ್ರ ಬದಲಾವಣೆಯ ಅಗತ್ಯವಿದ್ದರೆ, ಚೆಸ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ನಮ್ಮ ಯುವಶಕ್ತಿ ಜಗತ್ತನ್ನು ಆಳಲು ಸಜ್ಜಾಗಿದೆ. 2026ರ ವಿಶ್ವಕಪ್ (ಹಾಕಿ) ಮತ್ತು ಚೆಸ್ ಕ್ಯಾಂಡಿಡೇಟ್ಸ್ ಟೂರ್ನಿಗಳ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ
ಕಾಲಚಕ್ರ ಉರುಳಿದಂತೆ ಮತ್ತೊಂದು ವರ್ಷ ಹಿಂದೆ ಸರಿಯುವ ಹೊತ್ತಿಗೆ ಬಂದು ನಿಂತಿದೆ. 2025ನೇ ಇಸವಿಯು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಮಿಶ್ರ ಭಾವನೆಗಳ ಮೂಟೆಯನ್ನು ಹೊತ್ತು ತಂದ ವರ್ಷವೆಂದರೆ ತಪ್ಪಾಗಲಾರದು. ಕ್ರಿಕೆಟ್‌ನ ಆರ್ಭಟದ ಆಚೆಗೆ ಕಣ್ಣು ಹಾಯಿಸಿದರೆ, ಭಾರತದ ಇತರೆ ಕ್ರೀಡಾ ಕ್ಷೇತ್ರಗಳಲ್ಲಿ ಈ ವರ್ಷ ಕಂಡದ್ದು ಅನಿಶ್ಚಿತತೆಯ ಕಾರ್ಮೋಡ ಮತ್ತು ಅದರ ನಡುವೆಯೂ ಅಲ್ಲಲ್ಲಿ ಇಣುಕಿದ ಆಶಾವಾದದ ಬೆಳ್ಳಿ-ಕಿರಣಗಳು. ಫುಟ್‌ಬಾಲ್‌ನಲ್ಲಿನ ಐತಿಹಾಸಿಕ ಕುಸಿತವು ಅಭಿಮಾನಿಗಳ ಎದೆಯಲ್ಲಿ ಅಳುಕು ಹುಟ್ಟಿಸಿದರೆ, ಚೆಸ್ ಮಣೆ ಮತ್ತು ಬ್ಯಾಡ್ಮಿಂಟನ್ ಅಂಗಳದಲ್ಲಿ ಯುವ ಪ್ರತಿಭೆಗಳು ತೋರಿದ ಅಪ್ರತಿಮ ಸಾಧನೆ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿತು. ಟೆನಿಸ್ ಅಂಗಳದ ದಿಗ್ಗಜ, ಕನ್ನಡಿಗ ರೋಹನ್ ಬೋಪಣ್ಣ ಅವರ ನಿವೃತ್ತಿಯು ಒಂದು ಯುಗದ ಅಂತ್ಯವನ್ನು ಸೂಚಿಸಿದರೆ, ಚೆಸ್ ಅಂಗಳದಲ್ಲಿ ಪುಟ್ಟ ಪೋರ ಸರ್ವಜ್ಞ ಸಿಂಗ್ ಕುಶ್ವಾಹನ ಉದಯ ಹೊಸ ಯುಗದ ಆರಂಭಕ್ಕೆ ಮುನ್ನುಡಿ ಬರೆಯಿತು. ಹಾಗೆಯೇ ಭಾರತೀಯರು ಹೆಚ್ಚು ಆರಾಧಿಸುವ ಕ್ರಿಕೆಟ್‌ನಲ್ಲೂ ಗೆಲುವು ಸೋಲುಗಳ ಮಿಶ್ರಣ ದೊರಕಿದೆ. 2025ರ ಈ ಕ್ರೀಡಾ ಪಯಣದ ಸಮಗ್ರ ನೋಟ ಇಲ್ಲಿದೆ.
ಫುಟ್‌ಬಾಲ್: ಪಾತಾಳಕ್ಕೆ ಕುಸಿದ ಶ್ರೇಯಾಂಕ, ಮಹಿಳೆಯರ ಐತಿಹಾಸಿಕ ಜಿಗಿತ
ಭಾರತೀಯ ಫುಟ್‌ಬಾಲ್‌ಗೆ 2025ನ್ನು ‘ದುಸ್ವಪ್ನಗಳ ವರ್ಷ’ ಎಂದೇ ಕರೆಯಬಹುದು. ಒಂದು ಕಾಲದಲ್ಲಿ ಏಷ್ಯಾದ ದೈತ್ಯ ಶಕ್ತಿಯಾಗಿ ಹೊರಹೊಮ್ಮುವ ಕನಸು ಕಂಡಿದ್ದ ಭಾರತದ ಪುರುಷರ ತಂಡ, ಈ ವರ್ಷ ಅನುಭವಿಸಿದ ಸತತ ಸೋಲುಗಳು ಅಭಿಮಾನಿಗಳನ್ನು ಕಂಗೆಡಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಗಾರಿಕೆಯ ಕೊರತೆ ಮತ್ತು ನಿರ್ವಹಣಾ ವೈಫಲ್ಯಗಳು ಎದ್ದುಕಂಡ ಪರಿಣಾಮ, ಭಾರತ ತಂಡವು ಫಿಫಾ ಶ್ರೇಯಾಂಕದಲ್ಲಿ ಬರೋಬ್ಬರಿ 142ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಇದು ಇತ್ತೀಚಿನ ದಶಕಗಳಲ್ಲಿ ಭಾರತ ಕಂಡ ಅತ್ಯಂತ ಕಳಪೆ ಸಾಧನೆಗಳಲ್ಲಿ ಒಂದಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಫುಟ್‌ಬಾಲ್‌ನ ಜೀವನಾಡಿ ಎಂದೇ ಬಿಂಬಿತವಾಗಿರುವ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಮೇಲೂ 2025-26ರ ಸಾಲಿನಲ್ಲಿ ಕರಿನೆರಳು ಆವರಿಸಿತ್ತು. ಆಡಳಿತಾತ್ಮಕ ಗೊಂದಲಗಳು ಮತ್ತು ಲೀಗ್‌ನ ಗುಣಮಟ್ಟದ ಚರ್ಚೆಗಳು ಋತುವಿನುದ್ದಕ್ಕೂ ಕೇಳಿಬಂದವು. ಆದರೆ, ಈ ನಿರಾಸೆಯ ನಡುವೆಯೂ 2024-25ರ ಸಾಲಿನ ಐಎಸ್‌ಎಲ್ ಫೈನಲ್ ಪಂದ್ಯವು ರೋಚಕತೆಗೆ ಸಾಕ್ಷಿಯಾಯಿತು. ಏಪ್ರಿಲ್‌ನಲ್ಲಿ ನಡೆದ ಫೈನಲ್ ಕಾದಾಟದಲ್ಲಿ ಬಲಿಷ್ಠ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡವು ಬೆಂಗಳೂರು ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ವಿರುದ್ಧ ಸೆಣಸಾಡಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಅಂತಿಮವಾಗಿ ಮೋಹನ್ ಬಾಗನ್ 2-1 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಬೆಂಗಳೂರು ಎಫ್‌ಸಿ ಸೋತರೂ, ಫೈನಲ್‌ವರೆಗಿನ ಅವರ ಹೋರಾಟ ಪ್ರಶಂಸಾರ್ಹಾವಾಗಿತ್ತು.

ಪುರುಷರ ಸೀನಿಯರ್ ತಂಡದ ವೈಫಲ್ಯದ ನಡುವೆಯೂ, ಕಿರಿಯರ ತಂಡಗಳು ಮತ್ತು ಮಹಿಳಾ ತಂಡ ತೋರಿದ ‘ಚೆರ್ರಿ ಆನ್ ದಿ ಕೇಕ್’ ಅಂತಿತ್ತು. ಪುರುಷರ ತಂಡವು ಸಿಎಎಫ್‌ಎ ನೇಷನ್ಸ್ ಕಪ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದು ತುಸು ಸಮಾಧಾನ ತಂದಿತು. ಇನ್ನೂ 19 ವರಷದೊಳಗಿನ ಪುರುಷರ ತಂಡವು ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿತು. ಆದರೆ, ಈ ವರ್ಷದ ನಿಜವಾದ ಹೀರೋಗಳೆಂದರೆ ಭಾರತದ ಸೀನಿಯರ್ ಮಹಿಳಾ ಫುಟ್‌ಬಾಲ್ ತಂಡ. ಪುರುಷರ ತಮಡದ ಸೋಲಿನ ಸರಮಾಲೆಯ ನಡುವೆ, ಮಹಿಳಾ ತಂಡವು 2026ರ ಎಫ್‌ಎಸಿ ಏಷ್ಯನ್ ಕಪ್ ಟೂರ್ನಿಗೆ ಚೊಚ್ಚಲ ಬಾರಿಗೆ ನೇರ ಅರ್ಹತೆ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿತು. ಭಾರತೀಯ ಮಹಿಳಾ ಫುಟ್‌ಬಾಲ್‌ನ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಇದಾಗಿದೆ.
ಹಾಕಿ: ಸ್ಟಿಕ್ ಮೋಡಿ, ವಿದಾಯದ ವೇದನೆ
ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಭಾರತದ ಪ್ರದರ್ಶನ ಈ ವರ್ಷ ಸ್ಥಿರವಾಗಿತ್ತು ಎಂದು ಹೇಳಬಹುದು. ನಾಯಕ ಹರ್ಮನ್‌ಪ್ರೀತ್ ಅವರ ಸಾರಥ್ಯದಲ್ಲಿ ಭಾರತದ ಪುರುಷರ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಗೆಲುವು ಕೇವಲ ಒಂದು ಟ್ರೋಫಿಯಷ್ಟೇ ಅಲ್ಲ. 2026ರ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆಯನ್ನು ತಂದುಕೊಟ್ಟಿತು ಎಂಬುದು ಮಹತ್ವದ ಸಂಗತಿ. ಭಾರತದ ಆತಿಥ್ಯದಲ್ಲೇ ನಡೆದ ಎಫ್‌ಐಎಚ್ ಜೂನಿಯರ್ ಪುರುಷರ ವಿಶ್ವಕಪ್‌ನಲ್ಲಿ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿತ ಭಾರತ ತಂಡ, ಸೆಮಿಫೈನಲ್‌ನಲ್ಲಿ ಎಡವಿದರೂ, ಕಂಚಿನ ಪದಕದ ಪಂದ್ಯದಲ್ಲಿ ತಿರುಗಿಬಿದ್ದು ಪದಕ ಗೆದ್ದುಕೊಂಡಿತು. ಇದು ಕಿರಿಯರ ತಂಡದ ಬದ್ಧತೆಗೆ ಸಾಕ್ಷಿಯಾಯಿತು. ಆದರೆ, ಈ ವರ್ಷ ಹಾಕಿಯಲ್ಲಿ ಎರಡೂ ಮಹತ್ವದ ನಿರ್ಗಮನಗಳು ಸಂಭವಿಸಿದವು. ಜೂನ್ ತಿಂಗಳಲ್ಲಿ ಅನುಭವಿ ಆಟಗಾರ ಲಲಿತ್‌ಕುಮಾರ್ ಉಪಾಧ್ಯಾಯ ಮತ್ತು ಏಪ್ರಿಲ್‌ನಲ್ಲಿ ಮಹಿಳಾ ತಂಡದ ಆಧಾರಸ್ತಂಭವಾಗಿದ್ದ ವಂದನಾ ಕಟಾರಿಯಾ ಅವರು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದರು. ಇವರಿಬ್ಬರ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ತುಂಬುವುದು ಕಿರಿಯರಿಗೆ ದೊಡ್ಡ ಸವಾಲಾಗಲಿದೆ.

ಟೆನಿಸ್: ಕನ್ನಡಿಗನ ‘ಸರ್ವಿಸ್’ ಅಂತ್ಯ, ಹಾಲ್ ಆಫ್ ಫೇಮ್ ಗರಿ
ಭಾರತೀಯ ಟೆನಿಸ್ ಲೋಕಕ್ಕೆ 2025 ಒಂದು ಭಾವುಕ ವರ್ಷ. ಕರ್ನಾಟಕದ ರೋಹನ್ ಬೋಪಣ್ಣ ಅವರು ನವೆಂಬರ್‌ನಲ್ಲಿ ತಮ್ಮ 22 ವರ್ಷಗಳ ಸುದೀರ್ಘ ವೃತ್ತಿಪರ ಟೆನಿಸ್ ಜೀವನಕ್ಕೆ ವಿದಾಯ ಹೇಳಿದರು. ಡಬಲ್ಸ್ ವಿಭಾಗದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರರಿಗೆ ಸವಾಲೊಡ್ಡಿದ್ದ ಬೋಪಣ್ಣ, ತಮ್ಮದೇ ಆದ ಛಾಪು ಮೂಡಿಸಿದ್ದರು. ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ್ದ ಈ ‘ಇಂಡೋ-ಪಾಕ್ ಎಕ್ಸ್‌ಪ್ರೆಸ್’ ತಾರೆ(ಐಸಾಮ್ ಅಲ್ ಹಕ್ ಖುರೇಷಿ ಜೊತೆಗಿನ ಪಾಲುದಾರಿಕೆ ಸ್ಮರಿಸಬಹುದು), ಅಂಗಳದಿಂದ ನಿರ್ಗಮಿಸಿದ್ದು ಟೆನಿಸ್ ಪ್ರೇಮಿಗಳಿಗೆ ನಿರಾಸೆ ತಂದಿತು.
ಇದೇ ವೇಳೆ, ಹಳೆತಲೆಮಾರಿನ ದಿಗ್ಗಜರಾದ ವಿಜಯ್ ಅಮೃತರಾಜ್ ಮತ್ತು ಲಿಯಾಂಡರ್ ಪೇಸ್ ಅವರಿಗೆ ಜಾಗತಿಕ ಮನ್ನಣೆ ದೊರೆಯಿತು. ಅಂತಾರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳ್ಳುವ ಮೂಲಕ ಈ ಇಬ್ಬರು ಭಾರತೀಯ ಟೆನಿಸ್ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿದರು.

ಇದನ್ನು ಓದಿದ್ದೀರಾ? ಮೈದಾನದಲ್ಲಿ ಮಿಂಚುವ ‘ಮಂಧಾನ-ಜೆಮಿಮಾ’ ಜೋಡಿ: ಭಾರತೀಯ ಮಹಿಳಾ ಕ್ರಿಕೆಟ್‌ನ ಭರವಸೆಯ ಬೆಳಕು
ಜಾಗತಿಕ ಟೆನಿಸ್ ರಂಗದಲ್ಲಿ ಹಳೆಯ ಪೀಳಿಗೆ ಮರೆಯಾಗಿ ಹೊಸ ಪೀಳಿಗೆಯ ಆರ್ಬಟ ಮುಂದುವರಿಯಿತು. ಇಟಲಿಯ ಯಾನಿಕ್ ಸಿನ್ನರ್ ಮತ್ತು ಸ್ಪೇನ್‌ನ ಯುವ ಸಂಚಲನ ಕಾರ್ಲೋಸ್ ಅಲ್ಕರಾಜ್ ಅವರು ಪುರುಷರ ಟೆನಿಸ್‌ನ ನೂತನ ಶಕ್ತಿಕೇಂದ್ರಗಳಾಗಿ ಅವತರಿಸಿದರು. 2025ರಲ್ಲಿ ಇವರಿಬ್ಬರೂ ತಲಾ ಎರಡೂ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಹಂಚಿಕೊಳ್ಳುವ ಮೂಲಕ ಫೆಡರರ್-ನಡಾಲ್-ಜೊಕೊವಿಕ್ ಯುಗದ ನಂತರದ ಜಗತ್ತನ್ನು ಆಳಲು ಸಜ್ಜಾಗಿದ್ದಾರೆ ಎಂಬುದನ್ನು ಸಾರಿದರು.
ಬ್ಯಾಡ್ಮಿಂಟನ್: ಕನ್ನಡಿಗ ಆಯುಷ್ ಶೆಟ್ಟಿ ಭರವಸೆಯ ಬೆಳಕು
ಬ್ಯಾಡ್ಮಿಂಟನ್ ಅಂಗಳದಲ್ಲಿ ಈ ವರ್ಷ ಮಿಶ್ರ ಫಲಿತಾಂಶಗಳು ಕಂಡುಬಂದವು. ಭಾರತದ ಭರವಸೆಯ ಆಟಗಾರ ಲಕ್ಷ್ಯಸೇನ್ ಅವರು ಅಸ್ಟ್ರೇಲಿಯಾ ಓಪನ್ ವಿಶೇಷವಾಗಿ ಕರ್ನಾಟಕಕ್ಕೆ ಹೆಮ್ಮೆ ತಂದ ವಿಷಯವೆಂದರೆ, ರಾಜ್ಯದ ಯುವ ಪ್ರತಿಭೆ ಆಯುಷ್ ಶೆಟ್ಟಿ ಅವರ ಸಾಧನೆ. ಅಮೆರಿಕ ಓಪನ್ ಸೂಪರ್ 300 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಆಯುಷ್, ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಆಗಮನವನ್ನು ಸಾರಿದರು. ಇನ್ನು ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡೆತ್ತುಗಳಾದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಪ್ಯಾರಿಸ್‌ನಲ್ಲಿ ನಡೆದ ಪ್ರತಿಷ್ಠಿತ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಚಿನ್ನದ ನಿರೀಕ್ಷೆಯಲ್ಲಿದ್ದರೂ, ವಿಶ್ವದ ವೇದಿಕೆಯಲ್ಲಿ ಪದಕ ಗೆಲ್ಲುವುದು ಸುಲಭದ ಮಾತಲ್ಲ ಎಂಬುದನ್ನು ಸಾತ್ವಿಕ್- ಚಿರಾಗ್ ಸಾಧನೆ ತೋರಿತು.

ಕುಸ್ತಿ: ಅಖಾಡಕ್ಕೆ ಮರಳಿದ ವಿನೇಶ್
ಕುಸ್ತಿ ಅಂಗಳದಲ್ಲಿ ಕ್ರೀಡೆಗಿಂತ ಹೆಚ್ಚಾಗಿ ಹೋರಾಟದ ಸುದ್ದಿಗಳೇ ಸದ್ದು ಮಾಡಿದ್ದವು. ಕಳೆದ ವರ್ಷ ನಿವೃತ್ತಿ ಘೋಷಿಸಿ ಸಂಚಲನ ಮೂಡಿಸಿದ್ದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್, 2025ರಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದು, ಮತ್ತೆ ಸ್ಪರ್ಧಾತ್ಮಕ ಕುಸ್ತಿಗೆ ಮರಳುವುದಾಗಿ ಘೋಷಿಸಿದರು. ಇದು ಅವರ ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದೆ
ಚೆಸ್: ಬುದ್ಧಿವಂತರ ಅಖಾಡದಲ್ಲಿ ಭಾರತದ ಪಾರಮ್ಯ
2025ನ್ನು ನಿಸ್ಸಂಶಯವಾಗಿ ‘ಭಾರತೀಯ ಚೆಸ್‌ನ ಸುವರ್ಣ ವರ್ಷ’ ಎನ್ನಬಹುದು. ವಿಶ್ವನಾಥನ್ ಆನಂದ್ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿರುವ ಯುವಪಡೆ, ಜಗತ್ತಿನ ಎದುರು ಭಾರತದ ಬುದ್ಧಿಮತ್ತೆಯನ್ನು ಪ್ರದರ್ಶಿಸಿತು. ದಿವ್ಯಾ ದೇಶಮುಖ್ ಅವರು ದೇಶದ 88ನೇ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದರು. ಕೇವಲ ಅಷ್ಟೇ ಅಲ್ಲ, ಮಹಿಳಾ ವಿಭಾಗದಲ್ಲಿ ಭಾರತದ ಪ್ರಾಬಲ್ಯ ಎಷ್ಟಿತ್ತೆಂದರೆ, 2026ರ ಮಾರ್ಚ್–ಏಪ್ರಿಲ್‌ನಲ್ಲಿ ಸೈಪ್ರಸ್‌ನಲ್ಲಿ ನಡೆಯಲಿರುವ ಮಹಿಳಾ ಕ್ಯಾಂಡಿಡೇಟ್ಸ್ ಟೂರ್ನಿಗೆ ಭಾರತದ ಮೂವರು ಆಟಗಾರ್ತಿಯರು ಅರ್ಹತೆ ಪಡೆದಿದ್ದಾರೆ. ದಿವ್ಯಾ ಮತ್ತು ಹಂಪಿ ಅವರ ಜೊತೆಗೆ, ವೈಶಾಲಿ ರಮೇಶಬಾಬು ಅವರು ಸಮರಖಂಡದಲ್ಲಿ ನಡೆದ ಮಹಿಳಾ ಫಿಡೆ ಗ್ರ್ಯಾಂಡ್ ಸ್ವಿಸ್ ಟೂರ್ನಿಯನ್ನು ಸತತ ಎರಡನೇ ಬಾರಿಗೆ ಗೆಲ್ಲುವ ಮೂಲಕ ಅರ್ಹತೆ ಸಂಪಾದಿಸಿದರು.
ಪುರುಷರ (ಓಪನ್) ವಿಭಾಗದಲ್ಲಿ ಆರ್. ಪ್ರಜ್ಞಾನಂದ ಏಕಾಂಗಿ ಹೋರಾಟ ನಡೆಸಿದರು. ಫಿಡೆ ಸರ್ಕೀಟ್ ಟೂರ್ನಿಗಳಲ್ಲಿ (ಟಾಟಾ ಸ್ಟೀಲ್ ಮಾಸ್ಟರ್ಸ್, ಸೂಪರ್‌ಬೆಟ್, ಉಝ್ ಚೆಸ್ ಕಪ್, ಲಂಡನ್ ಕ್ಲಾಸಿಕ್) ಅದ್ಭುತ ಸ್ಥಿರತೆ ಪ್ರದರ್ಶಿಸಿ ವಿಜೇತರಾಗುವ ಮೂಲಕ, ಮುಂದಿನ ವರ್ಷದ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದ ಭಾರತದ ಏಕಮಾತ್ರ ಆಟಗಾರ ಎನಿಸಿಕೊಂಡರು. ದುರದೃಷ್ಟವಶಾತ್, ವಿಶ್ವ ಚಾಂಪಿಯನ್ ಗುಕೇಶ್ ಅವರಿಗೆ ಈ ವರ್ಷ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.
ನವೆಂಬರ್‌ನಲ್ಲಿ ಪಣಜಿಯಲ್ಲಿ ನಡೆದ ಓಪನ್ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ತವರಿನ ಲಾಭ ಪಡೆಯಲಾಗಲಿಲ್ಲ. ಭಾರತದ ಸವಾಲು ಕ್ವಾರ್ಟರ್‌ಫೈನಲ್‌ನಲ್ಲೇ ಅಂತ್ಯಗೊಂಡಿದ್ದು ನಿರಾಸೆ ಮೂಡಿಸಿತು.

ವಿಶೇಷ ದಾಖಲೆಗಳು
ಚೆಸ್‌ನಲ್ಲಿ ಅಚ್ಚರಿಯ ಬೆಳವಣಿಗೆಯೆಂದರೆ ಮಧ್ಯಪ್ರದೇಶದ ಬಾಲಕ ಸರ್ವಜ್ಞ ಸಿಂಗ್ ಕುಶ್ವಾಹ. ಕೇವಲ ಮೂರು ವರ್ಷ, ಏಳು ತಿಂಗಳಿದ್ದಾಗಲೇ ಫಿಡೆ ರೇಟಿಂಗ್ ಪಡೆಯುವ ಮೂಲಕ, ಈ ಸಾಧನೆ ಮಾಡಿದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರನಾದನು. ಇದು ಚೆಸ್ ಜಗತ್ತನ್ನೇ ಹುಬ್ಬೇರಿಸುವಂತೆ ಮಾಡಿತು.
ಕರ್ನಾಟಕದ ಮಟ್ಟಿಗೆ ಮತ್ತೊಂದು ಹೆಮ್ಮೆಯ ವಿಷಯವೆಂದರೆ, ದಕ್ಷಿಣ ಕನ್ನಡ ಜಿಲ್ಲೆಯ ಇಶಾ ಶರ್ಮಾ ಅವರು ನವೆಂಬರ್‌ನಲ್ಲಿ ‘ವಿಮನ್ ಗ್ರ್ಯಾಂಡ್‌ಮಾಸ್ಟರ್’ (WGM) ಗೌರವಕ್ಕೆ ಪಾತ್ರರಾದರು. ಈ ಮೂಲಕ ಕರ್ನಾಟಕದ ಮೊದಲ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಎಂಬ ಇತಿಹಾಸ ನಿರ್ಮಿಸಿದರು.
ಕ್ರಿಕೆಟ್: ಚಾಂಪಿಯನ್ಸ್ ಟ್ರೋಫಿ ಸಂಭ್ರಮ, ಟೆಸ್ಟ್‌ನಲ್ಲಿ ಹೊಸ ಶಕೆ
ಭಾರತೀಯ ಕ್ರಿಕೆಟ್‌ಗೆ 2025 ‘ಸುವರ್ಣ ವರ್ಷ’ವಾಗಿ ದಾಖಲಾಯಿತು. ವರ್ಷದ ಆರಂಭದಲ್ಲೇ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಅಜೇಯವಾಗುಳಿದು, ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿತು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ ಶತಕ ಟೂರ್ನಿಯ ಹೈಲೈಟ್ ಆಗಿತ್ತು.
ಮಹಿಳಾ ಕ್ರಿಕೆಟ್‌ನಲ್ಲೂ ಐತಿಹಾಸಿಕ ಸಾಧನೆ ಮೂಡಿಬಂತು. ಭಾರತದ ಮಹಿಳಾ ತಂಡವು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ, ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸ್ಮೃತಿ ಮಂದಾನ ವರ್ಷದ ಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಶ್ರಫಲಿತಾಂಶ ವ್ಯಕ್ತವಾಯಿತು. ರೋಹಿತ್ ಮತ್ತು ಕೊಹ್ಲಿ ಟೆಸ್ಟ್‌ಗೆ ವಿದಾಯ ಹೇಳಿದ ಬಳಿಕ, ಶುಭಮನ್ ಗಿಲ್ ನಾಯಕತ್ವ ವಹಿಸಿಕೊಂಡರು. ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಸಮಬಲಗೊಳಿಸಿಕೊಂಡರೂ, ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 0–2 ಅಂತರದ ಸೋಲು ಆಘಾತ ತಂದಿತು. ಇತ್ತ ಟಿ20 ಮಾದರಿಯ ಏಷ್ಯಾ ಕಪ್‌ನಲ್ಲಿ ತಿಲಕ್ ವರ್ಮಾ ಉತ್ತಮ ಪ್ರದರ್ಶನದಿಂದ ಭಾರತ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಗೆದ್ದರೆ, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೊನೆಗೂ ಕಪ್ ಗೆದ್ದು ಅಭಿಮಾನಿಗಳ ಬಹುಕಾಲದ ಕನಸನ್ನು ನನಸಾಗಿಸಿತು. ಹಾಗೆಯೇ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನಪ್ಪಿನ್ನಪಿದ್ದು ಬೆಂಗಳೂರಿನ ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತ ಕಪ್ಪುಚುಕ್ಕೆಯಾಗಿ ಉಳಿಯಿತು.
ಒಟ್ಟಾರೆಯಾಗಿ, 2025ನೇ ಇಸವಿ ಭಾರತೀಯ ಕ್ರೀಡಾ ವಲಯಕ್ಕೆ ಪಾಠಗಳನ್ನು ಮತ್ತು ಪ್ರಶಸ್ತಿಗಳನ್ನು ಸಮಾನವಾಗಿ ನೀಡಿದೆ. ಫುಟ್‌ಬಾಲ್‌ನಲ್ಲಿ ಆಮೂಲಾಗ್ರ ಬದಲಾವಣೆಯ ಅಗತ್ಯವಿದ್ದರೆ, ಚೆಸ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ನಮ್ಮ ಯುವಶಕ್ತಿ ಜಗತ್ತನ್ನು ಆಳಲು ಸಜ್ಜಾಗಿದೆ. 2026ರ ವಿಶ್ವಕಪ್ (ಹಾಕಿ) ಮತ್ತು ಚೆಸ್ ಕ್ಯಾಂಡಿಡೇಟ್ಸ್ ಟೂರ್ನಿಗಳ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಸೋಲು-ಗೆಲುವುಗಳ ಲೆಕ್ಕಾಚಾರ ಏನೇ ಇರಲಿ, ಕ್ರೀಡಾಂಗಣದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸಲು ನಮ್ಮ ಕ್ರೀಡಾಪಟುಗಳು ನಡೆಸುತ್ತಿರುವ ಅವಿರತ ಹೋರಾಟಕ್ಕೆ 2025 ಸಾಕ್ಷಿಯಾಯಿತು.





