ಮುಂಬರುವ ಐಪಿಎಲ್ 2026ರ ಜೆರ್ಸಿ ಬಿಡುಗಡೆಯ ಪ್ರೋಮೋ ವಿಡಿಯೊದಲ್ಲಿ ತಮ್ಮ ಒಡೆತನದ ‘ಜೈಲರ್’, ‘ಜೈಲರ್-2’ ಮತ್ತು ‘ಕೂಲಿ’ ಚಿತ್ರಗಳ ಸಂಗೀತ ಹಾಗೂ ಸಂಭಾಷಣೆಯನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ಆರೋಪಿಸಿ ಸನ್ ಟಿವಿ ನೆಟ್‌ವರ್ಕ್, ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್ ಹೂಡಿರುವ ಈ ಸಿವಿಲ್ ದಾವೆಯಲ್ಲಿ ಸಿಎಸ್‌ಕೆ ಕ್ರಿಕೆಟ್ ಲಿಮಿಟೆಡ್ (CSKL) ಹಾಗೂ ಅದರ ಪ್ರಮುಖ ಅಧಿಕಾರಿಗಳಾದ ಸಿಇಒ ಕಾಶಿ ವಿಶ್ವನಾಥನ್, ಹಣಕಾಸು ಮುಖ್ಯಸ್ಥ ಅವಿನಾಶ್ ಶ್ರೀಧರನ್ ಮತ್ತು ಕಂಟೆಂಟ್ ಮುಖ್ಯಸ್ಥ ರಾಧಾಕೃಷ್ಣನ್ ಶ್ರೀನಿವಾಸನ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಸೂಕ್ತ ಪರವಾನಗಿ ಪಡೆಯದೆ, ತಮ್ಮ ಕೃತಿಸ್ವಾಮ್ಯ (ಕಾಪಿರೈಟ್) ಹೊಂದಿರುವ ಸಂಗೀತವನ್ನು ಸಿಎಸ್‌ಕೆ ಬಳಸಿಕೊಂಡಿದೆ ಎಂಬುದು ಸನ್ ಟಿವಿಯ ಪ್ರಮುಖ ಆರೋಪವಾಗಿದೆ.
ಮಾರ್ಚ್ 1ರಂದು ಸಿಎಸ್‌ಕೆ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಾದ ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್), ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ 2026ರ ಐಪಿಎಲ್ ಜೆರ್ಸಿ ಬಿಡುಗಡೆಯ ಪ್ರೋಮೋವನ್ನು ಹಂಚಿಕೊಂಡಿತ್ತು. ಈ ವಿಡಿಯೊದಲ್ಲಿ ಎಂ.ಎಸ್. ಧೋನಿ ಆಗಮನದ ದೃಶ್ಯಗಳಿಗೆ ಸನ್ ಪಿಕ್ಚರ್ಸ್ ನಿರ್ಮಾಣದ, ಅನಿರುದ್ಧ್ ರವಿಚಂದರ್ ಸಂಗೀತವಿರುವ ರಜನಿಕಾಂತ್ ಅಭಿನಯದ ‘ಜೈಲರ್’, ‘ಜೈಲರ್-2’ ಹಾಗೂ ‘ಕೂಲಿ’ ಚಿತ್ರಗಳ ಹಾಡುಗಳು, ಹಿನ್ನೆಲೆ ಸಂಗೀತ ಮತ್ತು ಡೈಲಾಗ್ಸ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಆನ್‌ಲೈನ್‌ನಲ್ಲಿ ಸುಮಾರು ₹2,399 ಬೆಲೆ ಹೊಂದಿರುವ ಈ ಜೆರ್ಸಿಯ ಪ್ರಚಾರದ ತೂಕವನ್ನು ಹೆಚ್ಚಿಸಲು ಮತ್ತು ವಾಣಿಜ್ಯ ಲಾಭಕ್ಕಾಗಿ ಸಿಎಸ್‌ಕೆ ಈ ಕೃತಿಸ್ವಾಮ್ಯ ಉಲ್ಲಂಘನೆ ಮಾಡಿದೆ ಎಂದು ಸನ್ ಟಿವಿ ದೂರಿನಲ್ಲಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ನೆತನ್ಯಾಹು ಬದುಕಿದ್ದಾರಾ? ಇರಾನ್ ರಣಕಹಳೆಗೆ ತತ್ತರಿಸಿದ ಇಸ್ರೇಲ್
ಈ ಕೃತಿಸ್ವಾಮ್ಯ ಉಲ್ಲಂಘನೆಯ ಹಿನ್ನೆಲೆಯಲ್ಲಿ, ಸಿಎಸ್‌ಕೆ ಯಾವುದೇ ಮಾಧ್ಯಮಗಳಲ್ಲಿ ತಮ್ಮ ಚಿತ್ರದ ಹಾಡುಗಳು, ಸಂಭಾಷಣೆ ಅಥವಾ ಹಿನ್ನೆಲೆ ಸಂಗೀತವನ್ನು ಬಳಸದಂತೆ ಶಾಶ್ವತ ತಡೆಯಾಜ್ಞೆ ನೀಡಬೇಕು ಎಂದು ಸನ್ ಟಿವಿ ಮನವಿ ಮಾಡಿದೆ. ಜೊತೆಗೆ ₹1 ಕೋಟಿ ನಷ್ಟಪರಿಹಾರ ನೀಡಬೇಕು ಹಾಗೂ ಈ ಪ್ರಚಾರ ಅಭಿಯಾನದಿಂದ ಗಳಿಸಿದ ಆದಾಯವನ್ನು ನ್ಯಾಯಾಲಯಕ್ಕೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದೆ.
ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರು ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದ್ದಾರೆ. ಅಲ್ಲದೆ, ಆಕ್ಷೇಪಿತ ಹಾಡುಗಳನ್ನು ಐಪಿಎಲ್ ಪ್ರೋಮೋ ವಿಡಿಯೊಗಳಿಂದ ಈಗಾಗಲೇ ಕೈಬಿಡಲಾಗಿದೆ ಎಂಬ ಹೇಳಿಕೆಯನ್ನು ದೃಢೀಕರಿಸಿ ಅಧಿಕೃತ ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಾಲಯವು ಸಿಎಸ್‌ಕೆಗೆ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸನ್ ಟಿವಿ ಪರ ಹಿರಿಯ ವಕೀಲ ಜೆ. ರವೀಂದ್ರನ್ ವಾದ ಮಂಡಿಸಿ, ಆಕ್ಷೇಪಣಾ ಇ-ಮೇಲ್ ಕಳುಹಿಸಿದ ಬಳಿಕ ಸಿಎಸ್‌ಕೆ ಹಾಡುಗಳ ಬಳಕೆಯನ್ನು ನಿಲ್ಲಿಸಿದೆಯಾದರೂ, ಮುಂದಿನ ದಿನಗಳಲ್ಲಿ ಈ ರೀತಿಯ ಉಲ್ಲಂಘನೆ ಆಗದಂತೆ ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸಿಎಸ್‌ಕೆ ಪರ ಹಾಜರಾಗಿದ್ದ ಹಿರಿಯ ವಕೀಲ ಪಿ.ಎಸ್. ರಾಮನ್ ಅವರು, ಪ್ರೋಮೋ ವಿಡಿಯೊಗಳಿಂದ ಹಾಡುಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ ಮತ್ತು ಸೂಕ್ತ ಪರವಾನಗಿ ಇಲ್ಲದೆ ಈ ಹಾಡುಗಳನ್ನು ಭವಿಷ್ಯದಲ್ಲಿ ಮರುಬಳಕೆ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.





