ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಟೂರ್ನಿಯ ಸೂಪರ್-8 ಹಂತದ (ಗುಂಪು 1) 48ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಅಕ್ಷರಶಃ ಅಬ್ಬರಿಸಿದ್ದಾರೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 256 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿದೆ.
ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಗರಿಷ್ಠ ಮೊತ್ತವಾಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ ಅವರ ನಿರ್ಧಾರವನ್ನು ಭಾರತದ ಬ್ಯಾಟರ್‌ಗಳು ಸಂಪೂರ್ಣವಾಗಿ ತಲೆಕೆಳಗಾಗುವಂತೆ ಮಾಡಿದರು.
ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಬಿರುಸಿನ ಆರಂಭ ಒದಗಿಸಿದರು. ಸಂಜು ಸ್ಯಾಮ್ಸನ್ ಕೇವಲ 15 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ 24 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಆರಂಭಿಕನಾಗಿ ಕಣಕ್ಕಿಳಿದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಅಭಿಷೇಕ್ ಕೇವಲ 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಒಳಗೊಂಡ 55 ರನ್‌ಗಳನ್ನು ಚಚ್ಚಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಇದನ್ನು ಓದಿದ್ದೀರಾ? ‘ಚಿನ್ನಸ್ವಾಮಿ’ಯಲ್ಲಿ ಐಪಿಎಲ್ ಪಂದ್ಯಗಳು ಇನ್ನೂ ಅತಂತ್ರ: ಬೇಷರತ್ ಅನುಮತಿಗೆ ಆರ್‌ಸಿಬಿ ಪಟ್ಟು
ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದ ಇಶಾನ್ ಕಿಶನ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಜಿಂಬಾಬ್ವೆ ಬೌಲರ್‌ಗಳನ್ನು ದಂಡಿಸುವಲ್ಲಿ ಹಿಂದೆ ಬೀಳಲಿಲ್ಲ. ಇಶಾನ್ ಕಿಶನ್ 24 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 38 ರನ್‌ಗಳ ಅತ್ಯಮೂಲ್ಯ ಕಾಣಿಕೆ ನೀಡಿದರು. ಕ್ರೀಸ್‌ಗೆ ಬರುತ್ತಿದ್ದಂತೆಯೇ ಬಿರುಸಿನ ಆಟವಾಡಿದ ಸೂರ್ಯಕುಮಾರ್ ಯಾದವ್ ಕೇವಲ 13 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 33 ರನ್ ಗಳಿಸಿ ರನ್‌ರೇಟ್ ಹೆಚ್ಚಿಸುವಲ್ಲಿ ಯಶಸ್ವಿಯಾದರು.
ಇನಿಂಗ್ಸ್‌ನ ಕೊನೆಯ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಅವರ ಸ್ಫೋಟಕ ಜುಗಲ್‌ಬಂದಿ ಭಾರತದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಕೇವಲ 23 ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ ಅಜೇಯ 50 ರನ್ ಚಚ್ಚಿದರೆ, ಅವರಿಗೆ ಅತ್ಯುತ್ತಮ ಸಾಥ್ ನೀಡಿದ ತಿಲಕ್ ವರ್ಮಾ ಕೇವಲ 16 ಎಸೆತಗಳಲ್ಲಿ ಅಜೇಯ 44 ರನ್ ಸಿಡಿಸಿ ಜಿಂಬಾಬ್ವೆ ಪಾಳಯದಲ್ಲಿ ನಡುಕ ಹುಟ್ಟಿಸಿದರು.





