ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹೊರಗುಳಿದ ಬೆನ್ನಲ್ಲೇ, ಐಸಿಸಿ ಧೋರಣೆ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕ್ ತಂಡವೂ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಸೋಮವಾರ, ಪಾಕ್ ಪ್ರಧಾನಿ ಜೊತೆ ನಖ್ವಿ ಸಭೆಯನ್ನೂ ನಡೆಸಿದ್ದಾರೆ. ಆದಾಗ್ಯೂ, ಯಾವುದೇ ನಿರ್ಧಾರವನ್ನು ಇನ್ನೂ ಘೋಷಿಸಿಲ್ಲ. ಆದರೆ, ಟೂರ್ನಿಯಿಂದ ಪಾಕಿಸ್ತಾನ ತಂಡ ಹೊರಗುಳಿಯುವ ಚರ್ಚೆಗಳ ನಡುವೆಯೇ ಪಿಸಿಬಿ ವಿರುದ್ಧ ವಿಶ್ವಕಪ್ ಆಯೋಜಕರು ಮೊಕದ್ದಮೆ ಹೂಡುವ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ವಿಶ್ವಕಪ್‌ನಲ್ಲಿ ಭಾಗಿಯಾಗಲು ಪಿಸಿಬಿ ತನ್ನ ತಂಡವನ್ನು ಈಗಾಗಲೇ ಘೋಷಿಸಿತ್ತು. ಆದರೂ, ಬಾಂಗ್ಲಾ ಹೊರಗಿಳಿದ ಬಳಿಕ, ಪಿಸಿಬಿ ಅಸಮಾಧಾನ ವ್ಯಕ್ತಪಡಿಸಿದ್ದು, ಟೂರ್ನಿಯಿಂದ ಹೊರಹೋಗುವ ಸಾಧ್ಯತೆಗಳನ್ನು ಚರ್ಚಿಸುತ್ತಿದೆ. ಈ ನಡುವೆ, ವಿಶ್ವಕಪ್‌ನಲ್ಲಿ ಭಾಗವಹಿಸುವ ಇತರ ದೇಶದಗಳ ಕ್ರಿಕೆಟ್ ಮಂಡಳಿಗಳಂತೆ ಪಿಸಿಬಿ ಕೂಡ ಭಾಗವಿಸುವಿಕೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಾರ್ಯಕ್ರಮಗಳಿಗೆ ಪಿಸಿಬಿ ತನ್ನ ಬದ್ಧತೆಯನ್ನು ತೊರಿಸಬೇಕೆಂದು ಹೇಳಲಾಗುತ್ತಿದೆ.
ಒಂದು ವೇಳೆ, ತನ್ನ ಬದ್ದತೆಯಲ್ಲಿನ ಯಾವುದೇ ಉಲ್ಲಂಘನೆ ಮಾಡಿದರೆ, ಐಸಿಸಿಯಿಂದ ನಿರ್ಬಂಧಗಳನ್ನು ಹೇರಲಾಗುತ್ತದೆ. ಇದಲ್ಲದೆ, ಪಾಕಿಸ್ತಾನವು ಭಾರತದ ವಿರುದ್ಧದ ಪಂದ್ಯವನ್ನು ಕಳೆದುಕೊಂಡರೆ, ಆತಿಥೇಯ ಪ್ರಸಾರಕರು ಗಣನೀಯ ಪರಿಹಾರವನ್ನು ಪಡೆಯಲು PCB ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ.
RevSportz ವರದಿಯ ಪ್ರಕಾರ, ಜಾಹೀರಾತು ಸ್ಲಾಟ್‌ಗಳು, ಬ್ರಾಂಡ್ ಪ್ರೋಗ್ರಾಮಿಂಗ್ ಹಾಗೂ ಪ್ರಾಯೋಜಕತ್ವದ ಮೂಲಕ ಸರಿಸುಮಾರು 3.8 ಕೋಟಿ ಡಾಲರ್ ಆದಾಯವು ಈ ನಿರ್ದಿಷ್ಟ ಪಂದ್ಯದ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ. ಅಂತಿಮವಾಗಿ, ಭಾರತದ ಪಂದ್ಯವನ್ನು ಬಿಟ್ಟುಬಿಡಲು ಪಾಕ್ ತಂಡ ನಿರ್ಧರಿಸಿದರೆ PCB ತೀವ್ರ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಇದೆಲ್ಲದರ ನಡುವೆ, ಸೋಮವಾರ ಪಾಕ್ ಪ್ರಧಾನಿಯೊಂದಿಗೆ ಸಭೆ ನಡೆಸಿರುವ ಪಿಸಿಬಿ ಅಧ್ಯಕ್ಷ ನಖ್ವಿ, “ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಸಭೆ ನಡೆದಿದೆ. ಐಸಿಸಿ ವಿಷಯದ ಬಗ್ಗೆ ಅವರಿಗೆ ವಿವರಿಸಲಾಗಿದೆ. ಎಲ್ಲ ಆಯ್ಕೆಗಳ ಕುರಿತು ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುವಂತೆ ಅವರು ಸೂಚಿಸಿದ್ದಾರೆ. ಶುಕ್ರವಾರ ಅಥವಾ ಮುಂದಿನ ಸೋಮವಾರ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು” ಎಂದು ಟ್ವೀಟ್ ಮಾಡಿದ್ದಾರೆ.




