ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಟೂರ್ನಿಯ ‘ಎ’ ಗುಂಪಿನ 36ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಟಾಸ್ ಗೆದ್ದಿರುವ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ಈ ಮುಖಾಮುಖಿ ನಡೆಯುತ್ತಿದೆ. ಈಗಾಗಲೇ ಆಡಿರುವ ಸತತ ಮೂರು ಪಂದ್ಯಗಳಲ್ಲಿ (ಪಾಕಿಸ್ತಾನ, ಅಮೆರಿಕ ಮತ್ತು ನಮೀಬಿಯಾ ವಿರುದ್ಧ) ಭರ್ಜರಿ ಜಯ ದಾಖಲಿಸಿರುವ ಭಾರತ ತಂಡ, ‘ಎ’ ಗುಂಪಿನಿಂದ ಅಜೇಯವಾಗಿ ‘ಸೂಪರ್-8’ ಹಂತಕ್ಕೆ ಲಗ್ಗೆಯಿಟ್ಟಿದೆ. ಗುಂಪು ಹಂತದ ಈ ಅಂತಿಮ ಪಂದ್ಯದಲ್ಲೂ ಗೆಲುವಿನ ಲಯ ಕಾಯ್ದುಕೊಂಡು, ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಮುಂದಿನ ಹಂತಕ್ಕೆ ಹೆಜ್ಜೆಹಾಕುವುದು ಟೀಮ್ ಇಂಡಿಯಾದ ಪ್ರಮುಖ ಗುರಿಯಾಗಿದೆ.
ಮತ್ತೊಂದೆಡೆ, ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್ ತಂಡಕ್ಕೆ ಇದು ಪ್ರತಿಷ್ಠೆಯ ಕಣವಾಗಿದೆ. ಬಲಿಷ್ಠ ಭಾರತೀಯ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವುದು ಡಚ್ ಬೌಲರ್‌ಗಳಿಗೆ ದೊಡ್ಡ ಸವಾಲಾಗಲಿದೆ. ಬ್ಯಾಟಿಂಗ್‌ಗೆ ಉತ್ತಮ ನೆರವು ನೀಡುವ ಅಹಮದಾಬಾದ್ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ತಂಡವು ಬೃಹತ್ ಮೊತ್ತ ಕಲೆಹಾಕಿ ಎದುರಾಳಿಗಳ ಮೇಲೆ ಆರಂಭದಿಂದಲೇ ಒತ್ತಡ ಹೇರುವ ರಣತಂತ್ರ ರೂಪಿಸಿದೆ.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ | ಭಾರತದ ವಿರುದ್ಧ ಸೋತರೂ ವಿಶಿಷ್ಟ ದಾಖಲೆ ನಿರ್ಮಿಸಿದ ಪಾಕ್ ತಂಡ
ಇತ್ತಂಡಗಳ 11ರ ಬಳಗ
ಭಾರತ:
ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬೂಮ್ರಾ ಮತ್ತು ವರುಣ್ ಚಕ್ರವರ್ತಿ.
ನೆದರ್ಲೆಂಡ್ಸ್:
ಮೈಕೆಲ್ ಲೆವಿಟ್, ಮ್ಯಾಕ್ಸ್ ಒ’ಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ಸ್ಕಾಟ್ ಎಡ್ವರ್ಡ್ಸ್ (ನಾಯಕ ಮತ್ತು ವಿಕೆಟ್ ಕೀಪರ್), ಝಾಕ್ ಲಯನ್-ಕ್ಯಾಚೆಟ್, ಲೋಗನ್ ವಾನ್ ಬೀಕ್, ಆರ್ಯನ್ ದತ್, ರೋಲೊಫ್ ವಾನ್ ಡೆರ್ ಮೆರ್ವೆ, ಪಾಲ್ ವಾನ್ ಮೀಕೆರೆನ್ ಮತ್ತು ಫ್ರೆಡ್ ಕ್ಲಾಸೆನ್.
ಪಂದ್ಯದ ಸಮಯ ಮತ್ತು ನೇರ ಪ್ರಸಾರ
ಪಂದ್ಯ ಆರಂಭ: ಸಂಜೆ 7:00 ಗಂಟೆಗೆ (ಭಾರತೀಯ ಕಾಲಮಾನ)
ನೇರ ಪ್ರಸಾರ (ಟಿವಿ): ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಲೈವ್ ಸ್ಟ್ರೀಮಿಂಗ್ (ಡಿಜಿಟಲ್): ಜಿಯೋ ಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್





