ಮಂಗಳವಾರ ಸಂಭವಿಸಿದ ಚಂದ್ರಗ್ರಹಣದ ಪರಿಣಾಮವಾಗಿ ಭಾರತ ಕ್ರಿಕೆಟ್ ತಂಡದ ಅಭ್ಯಾಸ ಆರಂಭವು ಸುಮಾರು 90 ನಿಮಿಷಗಳಷ್ಟು ವಿಳಂಬಗೊಂಡಿತು ಎಂದು ಮಾಧ್ಯಮಗಳು ವರದಿ ಮಾಡಿದೆ.
ಮೂಲಗಳ ಪ್ರಕಾರ, ತಂಡದ ಅಭ್ಯಾಸವನ್ನು ಮೂಲತಃ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಿಗದಿಪಡಿಸಲಾಗಿತ್ತು. ಆದರೆ ಚಂದ್ರಗ್ರಹಣ ಮಧ್ಯಾಹ್ನ 3.20ಕ್ಕೆ ಪ್ರಾರಂಭವಾಗಿ ಸಂಜೆ 6.47ರವರೆಗೆ ಮುಂದುವರಿದಿದ್ದ ಕಾರಣ ಅಭ್ಯಾಸದ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕಾಯಿತು. ಇದರ ಪರಿಣಾಮವಾಗಿ ನಿಗದಿತ ಸಮಯಕ್ಕೆ ಅಭ್ಯಾಸ ಆರಂಭಿಸಲು ಸಾಧ್ಯವಾಗಲಿಲ್ಲ ಎಂದು ಮೂಲವೊಂದು ತಿಳಿಸಿದೆ.
ಇದನ್ನು ಓದಿದ್ದೀರಾ? ‘ನಾವು ಸಿಲುಕಿದ್ದ ಸ್ಥಳದ ಬಳಿಯೇ ಸ್ಫೋಟ’: ದುಬೈನಲ್ಲಿ ಸಿಲುಕಿರುವ ಪಿ.ವಿ ಸಿಂಧು
ಭಾರತ ತಂಡ ಅಭ್ಯಾಸ ಪ್ರಾರಂಭಿಸುವ ಹೊತ್ತಿಗೆ ಸಮರ್ಪಕ ಬೆಳಕು ದೊರಕುವಂತೆ ಮಾಡುವ ಉದ್ದೇಶದಿಂದ ಸ್ಟೇಡಿಯಂನಲ್ಲಿ ಫ್ಲಡ್ ಲೈಟ್ ಗಳನ್ನು ಸಂಜೆ ಸುಮಾರು 5.30ರ ವೇಳೆಗೆ ಸ್ವಿಚ್ಡ್ ಆನ್ ಮಾಡಲಾಗಿತ್ತು. ಆದರೆ ಅಭ್ಯಾಸದ ಅವಧಿಯನ್ನು ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದರಿಂದ, ಫ್ಲಡ್ ಲೈಟ್‌ಗಳನ್ನು ಸ್ವಲ್ಪ ಸಮಯದ ನಂತರ ಮತ್ತೆ ಸ್ವಿಚ್ಡ್ ಆಫ್ ಮಾಡಲಾಯಿತು.
ನಂತರ ಪರಿಷ್ಕೃತ ವೇಳಾಪಟ್ಟಿಯಂತೆ ಸಂಜೆ ಸುಮಾರು 7 ಗಂಟೆಯ ವೇಳೆಗೆ ಫ್ಲಡ್ ಲೈಟ್‌ಗಳನ್ನು ಮತ್ತೆ ಸ್ವಿಚ್ಡ್ ಆನ್ ಮಾಡಲಾಯಿತು. ಇದಾದ ಬಳಿಕ ಸಂಜೆ ಸುಮಾರು 7.30ರ ವೇಳೆಗೆ ಭಾರತ ತಂಡ ತನ್ನ ಅಭ್ಯಾಸವನ್ನು ಆರಂಭಿಸಿತು.





