ಟೀಂ ಇಂಡಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಮತ್ತೊಂದು ಸೋಲು ಅನುಭವಿಸಿದರೂ, ಈ ಪಂದ್ಯದಲ್ಲಿ 18 ಓವರ್ ಗಳನ್ನು ಸ್ಪಿನ್ನರ್‌ಗಳಿಂದ ಬೌಲಿಂಗ್ ಮಾಡಿಸುವ ಮೂಲಕ ವಿಶ್ವಕಪ್ ಟಿ20 ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. 20 ಓವರ್ ಗಳ ಪೈಕಿ 18 ಓವರ್ ಗಳನ್ನು ಸ್ಪಿನ್ನರ್ ಗಳಿಂದ ಬೌಲಿಂಗ್ ಮಾಡಿಸುವ ಮೂಲಕ ಗರಿಷ್ಠ ಸ್ಪಿನ್ ಬೌಲಿಂಗ್ ದಾಖಲೆಯನ್ನು ಸರಿಗಟ್ಟಿದೆ.
ಸಲ್ಮಾನ್ ಅಲಿ ಅಘಾ ನೇತೃತ್ವದ ಪಾಕಿಸ್ತಾನ ತಂಡವು 2012ರ ಟಿ20 ವಿಶ್ವಕಪ್ ಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಸರಿಸಿದ್ದ ತಂತ್ರವನ್ನು ಮತ್ತೆ ಅನುಸರಿಸಿತು. ಕೊಲಂಬೋದಲ್ಲಿ ಭಾನುವಾರ ಪಾಕಿಸ್ತಾನವು ಭಾರತ ವಿರುದ್ಧ ಮತ್ತೆ 18 ಸ್ಪಿನ್ ಓವರ್ ಗಳನ್ನು ಬೌಲಿಂಗ್ ಮಾಡಿಸಿದೆ. ಹೀಗೆ ಎರಡು ಬಾರಿ 18 ಸ್ಪಿನ್ ಓವರ್ ಗಳನ್ನು ಮಾಡಿಸಿದ ಹೆಗ್ಗಳಿಕೆ ಪಾಕಿಸ್ತಾನ ತಂಡಕ್ಕೆ ಸೇರಿದೆ.
ಇದನ್ನು ಓದಿದ್ದೀರಾ? ಸೋತರೂ ಕ್ರೀಡಾಭಿಮಾನಿಗಳ ಮನಗೆದ್ದ ಗುರ್ಬಾಜ್: ಆಫ್ರಿಕಾ ಪಡೆಗೆ ನಡುಕ ಹುಟ್ಟಿಸಿದ ಅಫ್ಘಾನ್ ಆಟಗಾರ
ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಕೂಡಾ 2016ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 16 ಓವರ್ ಗಳನ್ನು ಸ್ಪಿನ್ನರ್ ಗಳಿಂದ ಬೌಲಿಂಗ್ ಮಾಡಿಸಿತ್ತು. ಪಾಕಿಸ್ತಾನ 2026ರ ಟೂರ್ನಿಯಲ್ಲಿ ಯುಎಇ ವಿರುದ್ಧ 16 ಓವರ್ ಗಳನ್ನು ಸ್ಪಿನ್ನರ್ ಗಳಿಂದ ಬೌಲಿಂಗ್ ಮಾಡಿಸಿತ್ತು. ಅಂತೆಯೇ ಜಿಂಬಾಬ್ವೆ ತಂಡ 2010ರಲ್ಲಿ ಪೋರ್ಟ್ ಆಪ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 18 ಓವರ್ ಗಳನ್ನು ಸ್ಪಿನ್ನರ್ ಗಳಿಂದ ಮಾಡಿಸಿತ್ತು. 2023ರಲ್ಲಿ ನ್ಯೂಜಿಲೆಂಡ್ ತಂಡ ಭಾರತ ವಿರುದ್ಧ 17 ಸ್ಪಿನ್ ಓವರ್ ಮಾಡಿಸಿತ್ತು.
ಕೊಲಂಬೊ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ, ಬೌಲರ್ ಗಳಿಗೆ ನೆರವು ನೀಡುವ ಪಿಚ್ ನಲ್ಲಿ ಇಶಾನ್ ಕಿಶನ್ 40 ಎಸೆತಗಳಲ್ಲಿ 77, ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 32 ಮತ್ತು ಶಿವಂ ದುಬೆ 17 ಎಸೆತಗಳಲ್ಲಿ 27 ರನ್‌ಗಳ ಮೂಲಕ ಮೂಲಕ 7 ವಿಕೆಟ್ಗೆ 175 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು. ಎದುರಾಳಿ ತಂಡವನ್ನು 18 ಓವರ್‌ಗಳಲ್ಲಿ 114 ರನ್‌ಗಳಿಗೆ ಕಟ್ಟಿಹಾಕಿದ ಭಾರತ 61 ರನ್‌ಗಳ ಅಂರದಿಂದ ಗೆಲುವು ಸಾಧಿಸಿತು.





