ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿರುವ ಟೀಂ ಇಂಡಿಯಾ ತಂಡಕ್ಕೆ ಸ್ವದೇಶಕ್ಕೆ ಆಗಮಿಸುವುದಕ್ಕೆ ಬೆರಿಲ್ ಚಂಡಮಾರುತ ಅಡ್ಡಿಯಾಗಿದೆ. ಜೂನ್ 20ರಿಂದ ಆರಂಭಗೊಂಡಿರುವ ಬೆರಿಲ್ ಚಂಡಮಾರುತ ಕಳೆದ 2 ದಿನಗಳಿಂದ ತೀವ್ರಗೊಂಡಿದೆ.
ಚಂಡ ಮಾರುತದಿಂದ ಬರ್‌ಬಡೋಸ್ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿದೆ. ಕರ್ಫ್ಯು ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಟೀಂ ಇಂಡಿಯಾದ ಯಾರೊಬ್ಬರನ್ನು ಹೊಟೆಲ್ ಕೊಠಡಿಯಿಂದ ಹೊರಗೆ ಹೋಗಲು ಬಿಡುತ್ತಿಲ್ಲ. ಚಂಡಮಾರುತವು ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಆಟಗಾರರಿಗೆ ಹೊರಗೆ ಕಾಲಿಡದಂತೆ ಸೂಚನೆ ನಿಡಲಾಗಿದೆ. ಚಂಡಮಾರುತದ ಅಬ್ಬರ ಕಡಿಮೆಯಾದ ನಂತರವಷ್ಟೆ ರೋಹಿತ್ ಶರ್ಮಾ ನೇತೃತ್ವದ ತಂಡ ತವರಿಗೆ ಮರಳಲಿದೆ.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ ಫೈನಲ್ | ರೋಚಕ ಹಣಾಹಣಿಯಲ್ಲಿ ಟೀಮ್ ಇಂಡಿಯಾ ‘ಚಾಂಪಿಯನ್’
ಮಾಧ್ಯಮಗಳ ವರದಿಯ ಪ್ರಕಾರ ಬೆರಿಲ್ ಚಂಡಮಾರುತವು ಗಂಟೆಗೆ 130 ಕಿ.ಮೀ ವೇಗದಲ್ಲಿ ಬೀಸುವ ಸಂಭವವಿದೆ. ಮಳೆ ತೀವ್ರ ಹೆಚ್ಚಾಗಿದ್ದು ಸ್ಥಳೀಯ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಬರ್‌ಬಡೋಸ್ ಪ್ರದೇಶವಲ್ಲದೆ ಸೆಂಟ್ ಲೂಸಿಯಾ, ಸೇಂಟ್ ವಿನ್‌ಸೆಂಟ್ ಹಾಗೂ ಗ್ರೆನಡೈನ್ ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತಿದೆ.
ಬೆರಿಲ್ ಚಂಡಮಾರುತ ಪೋರ್ಟೊ ರಿಕೊದ ಆಗ್ನೇಯ ಮತ್ತು ವೆನೆಜುವೆಲಾದ ಉತ್ತರ ದ್ವೀಪಗಳ ಮೇಲೆ ಮಾರಣಾಂತಿಕ ಗಾಳಿ ಮತ್ತು ಚಂಡಮಾರುತ ಅಪ್ಪಳಿಸಲಿದೆ. ಬೆರಿಲ್ ಚಂಡಮಾರುತ ಬಾರ್ಬಡೋಸ್‌ನ ಪೂರ್ವ-ಆಗ್ನೇಯದ 355 ಮೈಲುಗಳಷ್ಟು ದೂರದಲ್ಲಿದ್ದು ಮುಂಬರುವ ಗಂಟೆಗಳಲ್ಲಿ ಪರಿಸ್ಥಿತಿಯು ತೀವ್ರವಾಗಬಹುದು.
ಬೆರಿಲ್ ಚಂಡಮಾರುತ ಮೆಕ್ಸಿಕೊ ಅಥವಾ ಅಮೆರಿಕದ ಕೆಲವು ಸ್ಥಳಗಳಿಗೆ ತಲುಪುವ ಮುನ್ನ ಕೆರೆಬಿಯನ್ ದ್ವೀಪದ ಜಮೈಕಾ, ಹೈಟಿ ಹಾಗೂ ಡೊಮಿನಿಕನ್ ಪ್ರದೇಶಗಳಲ್ಲಿ ಹಾನಿ ಉಂಟುಮಾಡಲಿದೆ ಎನ್ನಲಾಗಿದೆ.





