ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ 148 ವರ್ಷಗಳಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯೊಂದನ್ನು ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ನಿರ್ಮಿಸಿದ್ದಾರೆ.
ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡವು 2-0 ಅಂತರದಿಂದ ಸಂಪೂರ್ಣ ಸರಣಿ ಕೈವಶ ಮಾಡಿದ ಬೆನ್ನಲ್ಲೇ ಸೋಲಿಲ್ಲದ ಸರದಾರನಾಗಿ ಟೆಸ್ಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ತೆಂಬಾ ಬವುಮಾ ಪಾಲಾಗಿದೆ. ಅಂದರೆ ತೆಂಬಾ ಬವುಮಾ ನಾಯಕನಾದ ಮೇಲೆ ದಕ್ಷಿಣ ಆಫ್ರಿಕಾ ತಂಡ ಈವರೆಗೆ ಒಂದೇ ಒಂದು ಟೆಸ್ಟ್ ಪಂದ್ಯ ಸೋತಿಲ್ಲ.
ಹೀಗೆ ಸತತ ಗೆಲುವುಗಳ ಮೂಲಕ ಟೆಸ್ಟ್ ಇತಿಹಾಸದಲ್ಲೇ ಸೋಲಿಲ್ಲದೇ ಅತ್ಯಧಿಕ ಪಂದ್ಯಗಳನ್ನು ಗೆದ್ದ ನಾಯಕನೆಂಬ ವಿಶ್ವ ದಾಖಲೆ ತೆಂಬಾ ಬವುಮಾ ಪಾಲಾಗಿದೆ. ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ಇಂಗ್ಲೆಂಡ್ ತಂಡದ ಮೈಕ್ ಬ್ರಿಯಾರ್ಲಿ ಹೆಸರಿನಲ್ಲಿತ್ತು.
ಇದನ್ನು ಓದಿದ್ದೀರಾ? ಪೂರ್ವಜರ ನಾಡಿನಲ್ಲಿ ‘ಫ್ರೀಡಂ ಬೇಬಿ’ಯ ಐತಿಹಾಸಿಕ ಶತಕ: ಹರಿಣಗಳ ನಾಡಿನ ‘ಸೆನುರಾನ್ ಮುತ್ತುಸ್ವಾಮಿ’ ಹಿನ್ನಲೆಯೇ ರೋಚಕ
1977 – 1979 ರ ನಡುವೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ ಮೈಕ್ ಬ್ರಿಯಾರ್ಲಿ ಮೊದಲ 15 ಪಂದ್ಯಗಳಲ್ಲಿ 10 ಗೆಲುವು ದಾಖಲಿಸಿದ್ದರು. ಇನ್ನುಳಿದ ಐದು ಪಂದ್ಯಗಳು ಡ್ರಾ ಆಗಿತ್ತು. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಸೋಲಿಲ್ಲದೆ 10 ಪಂದ್ಯಗಳನ್ನು ಗೆದ್ದ ಏಕೈಕ ನಾಯಕ ಎನಿಸಿಕೊಂಡಿದ್ದರು.
ಇದೀಗ ಈ ದಾಖಲೆಯನ್ನು ತೆಂಬಾ ಬವುಮಾ ಅಳಿಸಿ ಹಾಕಿದ್ದಾರೆ. 12 ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿರುವ ತೆಂಬಾ ಬವುಮಾ ಒಟ್ಟು 11 ಪಂದ್ಯಗಳಲ್ಲಿ ಗೆಲುವಿವನ್ನು ದಾಖಲಿಸಿದ್ದಾರೆ. ಇನ್ನು ಒಂದು ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಸೋಲಿಲ್ಲದೆ ಹತ್ತಕ್ಕಿಂತ ಅಧಿಕ ಪಂದ್ಯಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಬ ವಿಶ್ವ ದಾಖಲೆಯನ್ನು ತೆಂಬಾ ಬವುಮಾ ತಮ್ಮದಾಗಿಸಿಕೊಂಡಿದ್ದಾರೆ.





