ತವರಿನಲ್ಲೇ ಭಾರತ ತಂಡವನ್ನು 2-0 ಅಂತದಲ್ಲಿ ಸೋಲಿಸುವ ಮೂಲಕ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಸರಣಿಯನ್ನ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಇದರೊಂದಿಗೆ 27 ವರ್ಷಗಳ ಬಳಿಕ ಟೆಸ್ಟ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಆಫ್ರಿಕಾ ತಂಡ 25 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿದೆ. ಅದಲ್ಲದೆ ಇದೇ ಮೊದಲ ಬಾರಿಗೆ 66 ವರ್ಷಗಳಲ್ಲಿ ಟೀಂ ಇಂಡಿಯಾ 7 ಟೆಸ್ಟ್ ಪಂದ್ಯಗಳಲ್ಲಿ 5ರಲ್ಲಿ ಸೋತಿದೆ.
ಇನ್ನೂ ಟೀಂ ಇಂಡಿಯಾದ ಕಳಪೆ ಪ್ರದರ್ಶನವನ್ನು ನೋಡಿದರೆ 30 ವರ್ಷಗಳಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿಯಲ್ಲಿ ಯಾರೊಬ್ಬರು ವೈಯಕ್ತಿಕವಾಗಿ ಶತಕ ದಾಖಲಿಸಿಲ್ಲ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ದೊಡ್ಡ ಸೋಲಾಗಿದೆ. ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ಗೂ ಮುನ್ನ ಭಾರತ ದೀರ್ಘ ಕಾಲದವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಪಟ್ಟ ಕಾಯ್ದುಕೊಂಡಿತ್ತು. ಅಲ್ಲದೇ ಬಲಿಷ್ಠ ಟೀಂ ಇಂಡಿಯಾವನ್ನ ಸೋಲಿಸುವುದು ಸುಲಭದ ಮಾತಾಗಿರಲಿಲ್ಲ. ಆದರೆ ಈ ವರ್ಷ ಅತ್ಯಂತ ಹೀನಾಯ ಸೋಲುಗಳನ್ನು ಕಂಡಿರುವ ತಂಡ ಮೊದ ಬಾರಿಗೆ ಹಲವು ಕೆಟ್ಟ ದಾಖಲೆಗಳನ್ನು ಹೆಗಲಿಗೇರಿಸಿಕೊಂಡಿದೆ.
ಇದನ್ನು ಓದಿದ್ದೀರಾ? ದೀಪಿಕಾ ಟಿ ಸಿ | ಅಂಧತ್ವದ ಗೆರೆಗಳನ್ನು ಮೀರಿ ಕ್ರಿಕೆಟ್‌ನಲ್ಲಿ ಬೆಳಗುತ್ತಿರುವ ನಕ್ಷತ್ರ
- 25 ವರ್ಷಗಳಲ್ಲಿ ಮೊದಲ ಬಾರಿ ಟೀಂ ಇಂಡಿಯಾ 2 ಆವೃತ್ತಿಗಳಲ್ಲಿ 5 ಟೆಸ್ಟ್ ಸೋಲು
- 66 ವರ್ಷಗಳಲ್ಲಿ ಮೊದಲ ಬಾರಿ ಭಾರತ 7 ಪಂದ್ಯಗಳಲ್ಲಿ 5 ಟೆಸ್ಟ್ ಪಂದ್ಯ ಸೋತಿದೆ
- 30 ವರ್ಷಗಳಲ್ಲಿ ಮೊದಲ ಬಾರಿ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಯಾರೋಬ್ಬರೂ ಶತಕ ಬಾರಿಸಿಲ್ಲ
ಬವುಮಾ ಉತ್ತಮ ಸಾಧನೆ
2000ರಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧವೇ ಮೊದಲ ಬಾರಿಗೆ ತವರಿನಲ್ಲಿ ಸಂಪೂರ್ಣ ಸರಣಿ ಸೋತಿತ್ತು. ಅದಾಗಿ 24 ವರ್ಷದ ಬಳಿಕ ಅಂದರೆ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ತವರಿಲ್ಲಿ 3-0 ಅಂತರದಲ್ಲಿ ಮುಖಭಂಗಕ್ಕೀಡಾಗಿತ್ತು. ಕಳೆದ ತಿಂಗಳಷ್ಟೇ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರು ಕಳೆದ ವರ್ಷ ನ್ಯೂಜಿಲೆಂಡ್ ತಂಡ ಭಾರತದಲ್ಲಿ ಸಾಧಿಸಿದ್ದನ್ನೇ ಈಗ ನಾವು ಮತ್ತೆ ಸಾಧಿಸುವುದಾಗಿ ಸವಾಲು ಹಾಕಿದ್ದರು. ಆಗ ಎಲ್ಲರೂ ಈ ಮಾತಿಗೆ ನಕ್ಕಿದ್ದರು. ಆದರೆ ಇದೀಗ ಅವರು ತಾವು ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ. ತಮ್ಮ ತಂಡವೇಕೆ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಭಾರೀ ವೈಫಲ್ಯ ಅನುಭವಿಸುತ್ತಿದ್ದ ತೆಂಬಾ ಬವುಮಾ ಮತ್ತೊಂದು ಕಡೆ ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಆಸ್ಟ್ರೇಲಿಯಾ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟ ಅಲಂಕರಿಸಿದರು. ಇದೀಗ ಭಾರತದಲ್ಲಿ ಟೆಸ್ಟ್ ಸರಣಿ 2-0 ಸರಣಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್ ಸರಣಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನಡೆಯುತ್ತಿರುವ ಬವುಮಾ ಈವರೆಗೆ ನಾಯಕನಾಗಿ ಆಡಿದ 12 ಪಂದ್ಯಗಳಲ್ಲಿ 11 ಪಂದ್ಯ ಗೆದ್ದಿದ್ದಾರೆ. 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.





