ಕೇವಲ 14 ವರ್ಷ ವಯಸ್ಸಿನಲ್ಲೇ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿಗೆ ದೇಶದ ಅತ್ಯುನ್ನತ ಮಕ್ಕಳ ಪ್ರಶಸ್ತಿಯಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಲಾಗಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.
ವೈಭವ್ ಸೂರ್ಯವಂಶಿ ತಮ್ಮ ವೃತ್ತಿಜೀವನದ ಆರಂಭದ ಹಂತದಲ್ಲೇ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಕಿರಿಯನೆಂಬ ದಾಖಲೆಯಿಂದ ಹಿಡಿದು, ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲೂ ವೈಭವ್ ಆರ್ಭಟ ಜೋರಿತ್ತು. ಸಿಕ್ಕ ಅವಕಾಶಗಳನ್ನು ಎರಡು ಕೈಗಳಿಂದ ಬಾಚಿಕೊಂಡಿರುವ ವೈಭವ್ಗೆ ಇದೀಗ ಭಾರತ ಸರ್ಕಾರದಿಂದಲೂ ಮನ್ನಣೆ ಸಿಕ್ಕಿದೆ.
ಇದನ್ನು ಓದಿದ್ದೀರಾ? ಸೋಲಿನ ಆಘಾತದಿಂದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದ ರೋಹಿತ್ ಶರ್ಮಾ
ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ತಂಡದ ಪರ ಕಣಕ್ಕಿಳಿದಿರುವ ವೈಭವ್ ಮೊದಲ ಪಂದ್ಯದಲ್ಲೇ 190 ರನ್ಗಳ ಸ್ಫೋಟಕ ಇನಿಂಗ್ಸ್ ಆಡಿದ್ದರು. ಹೀಗಾಗಿ ಇಂದು ನಡೆದ ಎರಡನೇ ಪಂದ್ಯದಲ್ಲೂ ವೈಭವ್ ಆರ್ಭಟ ನೋಡಲು ಎಲ್ಲರೂ ಕಾದಿದ್ದರು. ಆದರೆ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳುವ ಪ್ರಯುಕ್ತ ಈ ಪಂದ್ಯದಲ್ಲಿ ವೈಭವ್ ಆಡಿರಲಿಲ್ಲ.
ಪ್ರತಿ ವರ್ಷವೂ ದೇಶಾದ್ಯಂತ ಅನೇಕ ಯುವಕರು ಮತ್ತು ಮಕ್ಕಳಿಗೆ ಅವರು ಮಾಡಿದ ಸಾಧನೆಗಳಿಗಾಗಿ, ಕ್ರೀಡೆ, ಸಂಗೀತ ಅಥವಾ ವಿಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಗೌರವಿಸಲಾಗುತ್ತದೆ.
ಅದರಂತೆ ಬಿಹಾರದ ಸಮಷ್ಟಿಪುರದ ವೈಭವ್ ಅವರಿಗೆ ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.





