ಸುಮಾರು 100 ಗ್ರಾಂ ತೂಕ ಹೆಚ್ಚಾದ ಕಾರಣ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ಬಳಿಕ ಜಂಟಿ ಬೆಳ್ಳಿ ಪದಕವನ್ನು ಕೋರಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿರುವ ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕವಾಗಿದ್ದ ಕಾರಣ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ವಿನೇಶ್ ಅರ್ಜಿ ಸಲ್ಲಿಸಿದ್ದರು.
ತನಗೆ ಫೈನಲ್ ಪಂದ್ಯವನ್ನು ಆಡಲು ಅನುಮತಿ ನೀಡಬೇಕೆಂದು ವಿನೇಶ್ ಮನವಿ ಮಾಡಿದ್ದಾರೆ. ಆದರೆ ವಿನೇಶ್ ಅವರ ಮನವಿಯ ಮೇರೆಗೆ ಫೈನಲ್ ಪಂದ್ಯವನ್ನು ತಡಮಾಡಲಾಗದು ಎಂದು ಸಿಎಎಸ್ ಹೇಳಿತ್ತು. ಅದಾದ ಬಳಿಕ ತನಗೆ ಜಂಟಿ ಬೆಳ್ಳಿ ಪದಕವನ್ನಾದರೂ ನೀಡಬೇಕೆಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವನ್ನು ವಿನೇಶ್ ಕೋರಿದ್ದರು.
ಇದನ್ನು ಓದಿದ್ದೀರಾ? ವಿನೇಶ್ ಫೋಗಟ್ ಅನರ್ಹ | ಆಗಸ್ಟ್ 11ಕ್ಕೂ ಮುನ್ನ ತೀರ್ಪು ಪ್ರಕಟ: ಸಿಎಎಸ್
ಈ ಬೆನ್ನಲ್ಲೇ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ವಿನೇಶ್ ಫೋಗಟ್ ಅನರ್ಹತೆಯ ವಿರುದ್ಧದ ಅರ್ಜಿಯ ಬಗ್ಗೆ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಮುಗಿಯುವ ಮೊದಲು ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ ಆಗಸ್ಟ್ 11ರಂದು ತೀರ್ಪನ್ನು ಆಗಸ್ಟ್ 13ರಂದು ಪ್ರಕಟಿಸಲಾಗುವುದು ಎಂದು ಹೇಳಿತ್ತು.




