ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 2025-26ನೇ ಸಾಲಿನ ಹಿರಿಯ ಪುರುಷರ ಮತ್ತು ಮಹಿಳಾ ತಂಡದ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ್ದು, ಮಹತ್ವದ ಬದಲಾವಣೆಗಳನ್ನು ಮಾಡಿದೆ. ಪುರುಷರ ವಿಭಾಗದಲ್ಲಿ ಅತ್ಯುನ್ನತ ‘ಎ+’ (A+) ಶ್ರೇಣಿಯನ್ನು ರದ್ದುಗೊಳಿಸಲಾಗಿದ್ದು, ಪರಿಷ್ಕೃತ ಪಟ್ಟಿಯಲ್ಲಿ ‘ಎ’ ಶ್ರೇಣಿಯೇ ಅಗ್ರ ಶ್ರೇಣಿಯಾಗಿರಲಿದೆ.
ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ‘ಬಿ’ ಶ್ರೇಣಿಗೆ ಕುಸಿತ ಕಂಡಿದ್ದರೆ, ಯುವ ನಾಯಕ ಶುಭಮನ್ ಗಿಲ್ ಅವರಿಗೆ ಬಡ್ತಿ ನೀಡಲಾಗಿದೆ. ಇದೇ ವೇಳೆ, ಮಹಿಳಾ ತಂಡದ ಗುತ್ತಿಗೆಯಲ್ಲೂ ಪ್ರಮುಖ ಆಟಗಾರ್ತಿಯರು ಸ್ಥಾನ ಉಳಿಸಿಕೊಂಡಿದ್ದಾರೆ.
ಬಿಸಿಸಿಐನ ಪರಿಷ್ಕೃತ ಗುತ್ತಿಗೆ ಪಟ್ಟಿಯಲ್ಲಿ ಕೇವಲ ಮೂವರು ಆಟಗಾರರಿಗೆ ಮಾತ್ರ ಅತ್ಯುನ್ನತ ‘ಎ’ ಶ್ರೇಣಿ ಲಭಿಸಿದೆ. ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ, ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನು ಓದಿದ್ದೀರಾ? ಚುಟುಕು ಕ್ರಿಕೆಟ್ ಮಹಾಸಮರ: ಇಂದಿನಿಂದ ಟಿ20 ವಿಶ್ವಕಪ್ ಹಬ್ಬ
ಮಾಜಿ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ‘ಬಿ’ ಶ್ರೇಣಿಗೆ ಇಳಿಸಲಾಗಿದೆ. ಟೆಸ್ಟ್ ಮತ್ತು ಟಿ20 ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಈ ಇಬ್ಬರು ದಿಗ್ಗಜರು, ಪ್ರಸ್ತುತ ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿರುವುದರಿಂದ ಅವರನ್ನು ಎರಡನೇ ಹಂತದ ಪಟ್ಟಿಗೆ ಸೇರಿಸಲಾಗಿದೆ.
ವಾಷಿಂಗ್ಟನ್ ಸುಂದರ್: ಇವರಿಗೆ ‘ಸಿ’ ಶ್ರೇಣಿಯಿಂದ ‘ಬಿ’ ಶ್ರೇಣಿಗೆ ಬಡ್ತಿ ನೀಡಲಾಗಿದೆ.
ಶ್ರೇಯಸ್ ಅಯ್ಯರ್: ಮರಳಿ ‘ಬಿ’ ಶ್ರೇಣಿಯ ಗುತ್ತಿಗೆ ಪಡೆಯುವಲ್ಲಿ ಅಯ್ಯರ್ ಯಶಸ್ವಿಯಾಗಿದ್ದಾರೆ.
ಮಹಿಳಾ ತಂಡದ ಗುತ್ತಿಗೆ ಪಟ್ಟಿ ಪ್ರಕಟ
ಬಿಸಿಸಿಐ ಹಿರಿಯ ಮಹಿಳಾ ಕ್ರಿಕೆಟ್ ತಂಡದ 2025-26ನೇ ಸಾಲಿನ ಗುತ್ತಿಗೆ ಪಟ್ಟಿಯನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದೆ. ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ಸೇರಿದಂತೆ ನಾಲ್ವರು ಆಟಗಾರ್ತಿಯರು ಅತ್ಯುನ್ನತ ‘ಎ’ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದಾರೆ.
ಶ್ರೇಣಿವಾರು ಪಟ್ಟಿ ಇಂತಿದೆ:
‘ಎ’ ಶ್ರೇಣಿ: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ
‘ಬಿ’ ಶ್ರೇಣಿ: ರೇಣುಕಾ ಸಿಂಗ್, ಶಫಾಲಿ ವರ್ಮಾ, ರಿಚಾ ಘೋಷ್, ಸ್ನೇಹ್ ರಾಣಾ
‘ಸಿ’ ಶ್ರೇಣಿ: ರಾಧಾ ಯಾದವ್, ಅಮನ್‌ಜೋತ್ ಕೌರ್, ಪ್ರತಿಕಾ ರಾವಲ್, ಕ್ರಾಂತಿ ಗೌಡ್, ಉಮಾ ಚೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಾಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ, ತೇಜಲ್ ಹಸಬ್ನಿಸ್





