ನಿನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯವು ಕೇವಲ ಭಾರತದ ರೋಚಕ ಗೆಲುವಿಗಷ್ಟೇ ಸಾಕ್ಷಿಯಾಗಲಿಲ್ಲ, ಬದಲಾಗಿ ಟೀಮ್ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟಿನಿಂದ ಹೊಸ ದಾಖಲೆಗಳು ನಿರ್ಮಾಣವಾದ ಐತಿಹಾಸಿಕ ಕ್ಷಣಕ್ಕೂ ವೇದಿಕೆಯಾಯಿತು.
ಸಚಿನ್ ದಾಖಲೆ ಅಳಿಸಿ ಹಾಕಿದ ಕೊಹ್ಲಿ
ಆಧುನಿಕ ಕ್ರಿಕೆಟ್‌ನ ದಂತಕತೆ ವಿರಾಟ್ ಕೊಹ್ಲಿ ತಮ್ಮ ಮುಕುಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ 93 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟುವ ಮೂಲಕ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 28,000 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದೀರ್ಘಕಾಲದ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಸಚಿನ್ ಈ ಮೈಲಿಗಲ್ಲು ತಲುಪಲು ತೆಗೆದುಕೊಂಡಿದ್ದ ಇನಿಂಗ್ಸ್‌ಗಳಿಗಿಂತ ಕಡಿಮೆ ಇನಿಂಗ್ಸ್‌ಗಳಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದು ವಿಶೇಷ.
ಇದನ್ನು ಓದಿದ್ದೀರಾ? ಟಿ20 ಆರ್ಭಟದಲ್ಲಿ ಮಂಕಾಗುತ್ತಿರುವ ‘ಏಕದಿನ’ದ ಅಸ್ತಿತ್ವ: ಕ್ರಿಕೆಟ್ ಜಗತ್ತಿನ ಮುಂದಿದೆ ಯಕ್ಷಪ್ರಶ್ನೆ
ಅಷ್ಟೇ ಅಲ್ಲದೆ, ಭಾರತದ ಪರ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಭಾರತದ ಪರ ಅತಿ ಹೆಚ್ಚು ಏಕದಿನ ಪಂದ್ಯ ಆಡಿದ 5ನೇ ಆಟಗಾರ ಎಂಬ ಕೀರ್ತಿಗೂ ಅವರು ಭಾಜನರಾಗಿದ್ದಾರೆ.
’ಯೂನಿವರ್ಸ್ ಬಾಸ್’ ದಾಖಲೆ ಮುರಿದ ಹಿಟ್‌ಮ್ಯಾನ್
ಇತ್ತ ನಾಯಕ ರೋಹಿತ್ ಶರ್ಮಾ ಕೂಡ ದಾಖಲೆಗಳ ಪುಟದಲ್ಲಿ ತಮ್ಮ ಹೆಸರು ಬರೆಸಿದ್ದಾರೆ. ಸ್ಪೋಟಕ ಬ್ಯಾಟಿಂಗ್‌ಗೆ ಹೆಸರಾದ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದ್ದ ಅತೀ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ರೋಹಿತ್ ಶರ್ಮಾ ಮುರಿದಿದ್ದಾರೆ. ಗೇಲ್ ಹೆಸರಿನಲ್ಲಿ 328 ಸಿಕ್ಸರ್‌ಗಳಿದ್ದವು, ರೋಹಿತ್ 329 ಸಿಕ್ಸರ್‌ಗಳೊಂದಿಗೆ ದಾಖಲೆ ಮುರಿದಿದ್ದಾರೆ. ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಅಬ್ಬರಿಸಿದ ರೋಹಿತ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರಭುತ್ವವನ್ನು ಮರುಸ್ಥಾಪಿಸಿದ್ದಾರೆ.
ಹರ್ಷಿತ್ ರಾಣಾ ಆಲ್ ರೌಂಡ್ ಆಟ
ದಿಗ್ಗಜರ ದಾಖಲೆಗಳ ಆರ್ಭಟದ ನಡುವೆಯೂ ಯುವ ಆಟಗಾರ ಹರ್ಷಿತ್ ರಾಣಾ ಅವರ ಪ್ರದರ್ಶನ ಎದ್ದು ಕಂಡಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ರಾಣಾ, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 4 ವಿಕೆಟ್‌ಗಳ ಅಂತರದಿಂದ ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿತು.





