ಭಾನುವಾರ ಫೆ.15 ರಂದು ನಡೆಯಲಿರುವ ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರೊಂದಿಗೆ ಹಸ್ತಲಾಘವ (ಹ್ಯಾಂಡ್‌ಶೇಕ್) ಮಾಡುವರೇ ಇಲ್ಲವೇ ಎಂಬ ಪ್ರಶ್ನೆಗೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದು, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಕೊಲಂಬೊದಲ್ಲಿ ನಡೆಯಲಿರುವ ಈ ಪಂದ್ಯದ ಟಾಸ್ ವೇಳೆ ಅಥವಾ ಪಂದ್ಯದ ನಂತರ ಉಭಯ ತಂಡಗಳ ನಾಯಕರು ಕೈ ಕುಲುಕುವರೇ ಎಂಬ ಪ್ರಶ್ನೆಗೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಸೂರ್ಯಕುಮಾರ್, “ಹಸ್ತಲಾಘವದ ವಿಚಾರವನ್ನು ನಾಳೆಗೆ ಬಿಡಿ. ಇಂದು ರಾತ್ರಿ ಚೆನ್ನಾಗಿ ನಿದ್ದೆ ಮಾಡಿ, ಏನಾಗುತ್ತದೆ ಎಂದು ಕಾದು ನೋಡಿ,” ಎಂದು ಉತ್ತರಿಸುವ ಮೂಲಕ 24 ಗಂಟೆಗಳ ಗಡುವಿನ ಗುಟ್ಟನ್ನು ಕಾಯ್ದುಕೊಂಡಿದ್ದಾರೆ.
ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾ ಕಪ್‌ಗೂ ಮುನ್ನ ನಡೆದ ಪಹಲ್ಗಾಮ್ ಘಟನೆ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ನಂತರ, ಭಾರತ ಮತ್ತು ಪಾಕಿಸ್ತಾನ ಆಟಗಾರರು ಮೈದಾನದಲ್ಲಿ ಹಸ್ತಲಾಘವ ಮಾಡುವುದನ್ನು ನಿಲ್ಲಿಸಿದ್ದಾರೆ. ಏಷ್ಯಾ ಕಪ್‌ನ ಲೀಗ್ ಹಂತದ ಮೊದಲ ಪಂದ್ಯದ ಟಾಸ್ ವೇಳೆ ಭಾರತ ಈ ನಡೆ ಅನುಸರಿಸಿದ ನಂತರ, ಇದು ಅಲಿಖಿತ ನಿಯಮದಂತೆ ಮುಂದುವರಿದುಕೊಂಡು ಬಂದಿದೆ. ಹೀಗಾಗಿ ಭಾನುವಾರದ ಪಂದ್ಯದಲ್ಲೂ ಈ ಸಂಪ್ರದಾಯ ಮುಂದುವರಿಯಲಿದೆಯೇ ಎಂಬ ಚರ್ಚೆ ಜೋರಾಗಿದೆ.
ಇದನ್ನು ಓದಿದ್ದೀರಾ? ಬ್ಯಾಟ್ ಬೀಸಿದ ‘ಫಿನಿಶರ್’ಗೆ ಕ್ಲೀನ್ ಬೌಲ್ಡ್ ಆದ ಸಂಸದೆ
ಇತ್ತ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಕೂಡ ಹಸ್ತಲಾಘವದ ಬಗ್ಗೆ ನೇರ ಉತ್ತರ ನೀಡಲು ನಿರಾಕರಿಸಿದ್ದಾರೆ. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾಳೆ ಏನಾಗುತ್ತದೆ ನೋಡೋಣ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯ ಏನೇ ಇರಲಿ, ಕ್ರಿಕೆಟ್ ಅನ್ನು ಕ್ರೀಡಾ ಸ್ಫೂರ್ತಿಯಿಂದ ಆಡಬೇಕು ಎನ್ನುವುದು ಮುಖ್ಯ. ಅಂತಿಮ ನಿರ್ಧಾರ ಅವರಿಗೆ ಬಿಟ್ಟಿದ್ದು” ಎಂದು ಹೇಳಿದ್ದಾರೆ. ಅಲ್ಲದೆ, ವಿಶ್ವಕಪ್‌ಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಉತ್ತಮ ದಾಖಲೆ ಹೊಂದಿಲ್ಲದಿರುವುದನ್ನು ಒಪ್ಪಿಕೊಂಡಿದ್ದಾರೆ.
ಇದೇ ವೇಳೆ ಭಾರತದ ಆಡುವ ಹನ್ನೊಂದರ ಬಳಗದ ಬಗ್ಗೆ ಮಹತ್ವದ ಸುಳಿವು ನೀಡಿರುವ ಸೂರ್ಯಕುಮಾರ್ ಯಾದವ್, ಸ್ಟಾರ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಚೇತರಿಸಿಕೊಂಡಿದ್ದು, ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ‘ಬಹಿಷ್ಕಾರದ ನಾಟಕ’ದ ನಂತರ ನಡೆಯುತ್ತಿರುವ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ವರದಿಯಂತೆ ಶೇ. 60ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಒಟ್ಟಿನಲ್ಲಿ ಮೈದಾನದ ಹೊರಗಿನ ವಿವಾದಗಳು ಮತ್ತು ಹಸ್ತಲಾಘವದ ಕುತೂಹಲದ ನಡುವೆ ಭಾನುವಾರದ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ.





