ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2026ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಜಯಭೇರಿ ಮುಂದುವರಿದಿದೆ. ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆರ್‌ಸಿಬಿ ಆಟಗಾರ್ತಿ ಗೌತಮಿ ನಾಯ್ಕ್ ಅವರಿಗೆ, ಟೀಮ್ ಇಂಡಿಯಾದ ತಾರಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಿಶೇಷ ಸಂದೇಶವೊಂದನ್ನು ಕಳುಹಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸೋಮವಾರ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗೌತಮಿ ನಾಯ್ಕ್ (73 ರನ್, 55 ಎಸೆತ) ತಮ್ಮ ಚೊಚ್ಚಲ ಡಬ್ಲ್ಯುಪಿಎಲ್ ಅರ್ಧಶತಕ ದಾಖಲಿಸಿದರು. ಈ ಇನಿಂಗ್ಸ್ ನೆರವಿನಿಂದ ಆರ್‌ಸಿಬಿ ಸತತ ಐದನೇ ಜಯ ದಾಖಲಿಸಿ ಅಜೇಯ ಓಟ ಮುಂದುವರಿಸಿದೆ. ಈ ಸಂಭ್ರಮದ ನಡುವೆಯೇ ಗೌತಮಿ ಅವರಿಗೆ ತಮ್ಮ ಆರಾಧ್ಯ ದೈವ (ಐಕಾನ್) ಹಾರ್ದಿಕ್ ಪಾಂಡ್ಯ ಅವರಿಂದ ಬಂದ ಸಂದೇಶವು ಭಾವುಕರನ್ನಾಗಿಸಿದೆ.
ಹಾರ್ದಿಕ್ ನನ್ನ ಸ್ಫೂರ್ತಿ
ಆರ್‌ಸಿಬಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಗೌತಮಿ, “ನನ್ನ ಕ್ರಿಕೆಟ್ ಐಕಾನ್ ಹಾರ್ದಿಕ್ ಪಾಂಡ್ಯ. ನಾನು ಅವರಂತೆಯೇ ಆಡಲು ಬಯಸುತ್ತೇನೆ. ಒತ್ತಡದ ಸನ್ನಿವೇಶಗಳಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದನ್ನು ನಾನು ಯಾವಾಗಲೂ ಗಮನಿಸುತ್ತೇನೆ. ಅವರಂತೆಯೇ ಶಾಂತಚಿತ್ತದಿಂದ ಆಡುವುದು ನನ್ನ ಸ್ವಭಾವ ಕೂಡ. ನನ್ನ ಆಟದಲ್ಲಿ ನಾನು ಅವರನ್ನು ಕಾಣುತ್ತೇನೆ,” ಎಂದು ಹೇಳಿಕೊಂಡಿದ್ದರು.
ಹಾರ್ದಿಕ್ ಪಾಂಡ್ಯ ಸಂದೇಶವೇನು?
ಗೌತಮಿ ಅವರ ಈ ಮಾತುಗಳಿಗೆ ಸ್ಪಂದಿಸಿರುವ ಹಾರ್ದಿಕ್ ಪಾಂಡ್ಯ, ವಿಡಿಯೊ ಸಂದೇಶದ ಮೂಲಕ ಶುಭಕೋರಿದ್ದಾರೆ. “ಹಾಯ್ ಗೌತಮಿ, ಹಾರ್ದಿಕ್ ಮಾತನಾಡುತ್ತಿದ್ದೇನೆ. ನಾನು ನಿಮ್ಮ ಕ್ರಿಕೆಟ್ ಐಕಾನ್ ಎಂಬುದು ನನಗೆ ತಿಳಿಯಿತು. ಮೊದಲನೆಯದಾಗಿ, ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗುತ್ತಿರುವುದು ನನಗೆ ಹೆಮ್ಮೆಯ ವಿಷಯ. ನಿಮ್ಮ ಮೊದಲ ಅರ್ಧಶತಕಕ್ಕೆ ಅಭಿನಂದನೆಗಳು. ಆಟವನ್ನು ಆನಂದಿಸಿ. ಮುಂದಿನ ದಿನಗಳಲ್ಲಿ ನಿಮ್ಮ ಫ್ರಾಂಚೈಸಿ ಹಾಗೂ ದೇಶಕ್ಕಾಗಿ ನೀವು ಇನ್ನಷ್ಟು ಉತ್ತಮ ಪ್ರದರ್ಶನ ನೀಡುವಂತಾಗಲಿ. ಶಿಸ್ತಿನಿಂದಿರಿ, ಆಟವನ್ನು ಪ್ರೀತಿಸಿ,” ಎಂದು ಹಾರ್ದಿಕ್ ಹಾರೈಸಿದ್ದಾರೆ.

ಇದನ್ನು ಓದಿದ್ದೀರಾ? ಚರ್ಚೆಗೆ ಗ್ರಾಸವಾಗಿರುವ ಕ್ರಿಕೆಟಿಗ ಶುಭಮನ್ ಗಿಲ್ ಕೊಂಡೊಯ್ದ ವಾಟರ್ ಫಿಲ್ಟರ್
ಗೌತಮಿ ಭಾವುಕ ಪ್ರತಿಕ್ರಿಯೆ
ಹಾರ್ದಿಕ್ ಅವರ ಸಂದೇಶವನ್ನು ಕಂಡು ಗೌತಮಿ ಅಕ್ಷರಶಃ ಭಾವುಕರಾದರು. “ಇದು ನನ್ನ ಜೀವನದ ಬಹುದೊಡ್ಡ ಕ್ಷಣ. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನನ್ನ ಐಕಾನ್ ಆಗಿರುವ ಹಾರ್ದಿಕ್ ಅವರಿಂದಲೇ ಸಂದೇಶ ಬಂದಿರುವುದು ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಿದ್ದೇನೆ ಎಂಬ ಭಾವನೆ ಮೂಡಿಸುತ್ತಿದೆ. ಆಟಗಾರನಾಗಿ ಹಾಗೂ ಒಬ್ಬ ವ್ಯಕ್ತಿಯಾಗಿ ನನಗೆ ಅವರು ಇಷ್ಟ. ಅವರನ್ನು ಭೇಟಿಯಾಗಲು ನಾನು ಬಯಸುತ್ತೇನೆ,” ಎಂದು ಗೌತಮಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಂಬರುವ ಟಿ20 ವಿಶ್ವಕಪ್ 2026ರಲ್ಲಿ ಭಾರತ ತಂಡಕ್ಕೆ ಹಾರ್ದಿಕ್ ಯಶಸ್ಸು ತಂದುಕೊಡಲಿ ಎಂದು ಅವರು ಹಾರೈಸಿದ್ದಾರೆ.
ಆರ್‌ಸಿಬಿ ಅಜೇಯ ಓಟ
ವಡೋದರಾದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆರ್‌ಸಿಬಿ 61 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.





