- ನಾಯಕ ರೋಹಿತ್ ಶರ್ಮಾ ಜೊತೆಗೆ 229 ರನ್ ಜೊತೆಯಾಟ
- ವಿಂಡೀಸ್ ವಿರುದ್ಧ ಟೀಮ್ ಇಂಡಿಯಾಕ್ಕೆ 162 ರನ್ಗಳ ಮುನ್ನಡೆ
ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್, ಮೊದಲ ಪಂದ್ಯದಲ್ಲೇ ಶತಕ ಗಳಿಸುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆಯುವಲ್ಲಿ ‘ಯಶಸ್ವಿ’ಯಾಗಿದ್ದಾರೆ.
ಡೊಮಿನಿಕಾದ ವಿಂಡ್ಸರ್ ಪಾರ್ಕ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿದ್ದ ಯಶಸ್ವಿ ಜೈಸ್ವಾಲ್, ಅಜೇಯ ಶತಕ ದಾಖಲಿಸುವ ಮೂಲಕ ತಮ್ಮ ಬ್ಯಾಟಿಂಗ್ ವೈಭವ ಮೆರೆದಿದ್ದಾರೆ. ಅಲ್ಲದೇ ಟೆಸ್ಟ್ ಕ್ರಿಕೆಟ್ ನಲ್ಲಿ ಆಡಿದ ಪದಾರ್ಪಣಾ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ 17ನೇ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ಜೊತೆಗೆ ವೆಸ್ಟ್ ಇಂಡೀಸ್ನಲ್ಲಿ ಚೊಚ್ಚಲ ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ತಮ್ಮ ಹೆಸರಿನಲ್ಲಿ ಬರೆಸಿಕೊಂಡರು.
ಎರಡನೇ ದಿನದಾಟದ ಮುಕ್ತಾಯಕ್ಕೆ 143 ರನ್ ಗಳಿಸಿ ಔಟಾಗದೆ ಉಳಿದಿರುವ ಎಡಗೈ ಬ್ಯಾಟರ್ ಜೈಸ್ವಾಲ್, ವಿರಾಟ್ ಕೊಹ್ಲಿಯೊಂದಿಗೆ ಮುರಿಯದ ಮೂರನೇ ವಿಕೆಟ್ಗೆ 72 ರನ್ಗಳ ಜೊತೆಯಾಟ ನಡೆಸಿದ್ದಾರೆ.
ಮುಂಬೈ ಮೂಲದ ಆಟಗಾರನಾದ ಯಶಸ್ವಿ ಜೈಸ್ವಾಲ್, ಬಡ ಕುಟುಂಬದಿಂದ ಬಂದ ಕ್ರಿಕೆಟಿಗ. ಮುಂಬೈನ ಗಲ್ಲಿಗಳಲ್ಲಿ ಪಾನಿಪೂರಿ ಮಾರಿ ಬದುಕು ಕಟ್ಟಿಕೊಂಡಿದ್ದ ಸಾಹಸಿಗ ಕೂಡ. ಜೈಸ್ವಾಲ್ ದೇಸಿ ಕ್ರಿಕೆಟ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದು, ಮುಂಬೈ ತಂಡವನ್ನು ರಣಜಿ ಟೂರ್ನಿಯಲ್ಲಿ ಪ್ರತಿನಿಧಿಸಿದ್ದರು.
21 ವರ್ಷದ ಆಟಗಾರನನ್ನು ಭಾರತ ‘ಎ’ ಪರ ಬಾಂಗ್ಲಾದೇಶ ಸರಣಿಗೂ ಆಯ್ಕೆ ಮಾಡಲಾಗಿತ್ತು. ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಮೀಸಲು ಆಟಗಾರರಾಗಿ ಆಯ್ಕೆ ಆಗಿದ್ದ ಯಶಸ್ವಿ ಜೈಸ್ವಾಲ್, ಪ್ರಥಮ ದರ್ಜೆಯಲ್ಲಿ 15 ಪಂದ್ಯವನ್ನಾಡಿ, 80.21 ಸರಾಸರಿಯಲ್ಲಿ 1,845 ರನ್ ಬಾರಿಸಿದ್ದು, ಇದರಲ್ಲಿ 9 ಶತಕ ಸೇರಿವೆ ಎಂಬುದು ಗಮನಾರ್ಹ.
162 ರನ್ಗಳ ಮುನ್ನಡೆ ಕಾಯ್ದುಕೊಂಡ ಟೀಮ್ ಇಂಡಿಯಾ
ಡೊಮಿನಿಕಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 2 ವಿಕೆಟ್ಗಳನ್ನು ಕಳೆದುಕೊಂಡು 312 ರನ್ ಗಳಿಸಿದೆ. ಆ ಮೂಲಕ 162 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.
143 ರನ್ ಗಳಿಸಿ ಔಟಾಗದೆ ಉಳಿದಿರುವ ಜೈಸ್ವಾಲ್, 36 ರನ್ ಗಳಿಸಿ ವಿರಾಟ್ ಕೊಹ್ಲಿ ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಜೋಡಿಯು ಮುರಿಯದ ಮೂರನೇ ವಿಕೆಟ್ಗೆ 72 ರನ್ಗಳ ಜೊತೆಯಾಟ ನಡೆಸಿದ್ದಾರೆ.
ಜೈಸ್ವಾಲ್ ಜೊತೆಗೂಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 229 ರನ್ ಕಲೆಹಾಕಿದ್ದ ನಾಯಕ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 10ನೇ ಶತಕ ಪೂರೈಸಿಕೊಂಡರು. 221 ಎಸೆತಗಳನ್ನು ಎದುರಿಸಿದ ರೋಹಿತ್ 103 ರನ್ ಗಳಿಸಿ, ಅಥನಾಝೆಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶುಭಮನ್ ಗಿಲ್ ಆಟ ಕೇವಲ 6 ರನ್ ಗಳಿಸಿದ್ದಾಗ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಟೀಮ್ ಇಂಡಿಯಾ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ, ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮ ಗಳಿಸಿದ ಶತಕಗಳ ಬಲದಿಂದ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 162 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.
ಮೊದಲ ದಿನ ಬ್ಯಾಟಿಂಗ್ ನಡೆಸಿದ್ದ ವೆಸ್ಟ್ಇಂಡೀಸ್ ತಂಡ, ಭಾರತದ ಸ್ಪಿನ್ನರ್ಗಳ ದಾಳಿಗೆ ನಲುಗಿ ಕೇವಲ 150 ರನ್ ಗಳಿಸಿ ಆಲೌಟ್ ಆಗಿತ್ತು.
ಕಳೆದ ಕೆಲವು ತಿಂಗಳುಗಳಿಂದ ವೆಸ್ಟ್ಇಂಡೀಸ್ ತಂಡದ ಪ್ರದರ್ಶನ ತೀರಾ ಕಳಪೆಯಾಗುತ್ತಿದ್ದು, 2023ರ ಅಕ್ಟೋಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸಲು ಅರ್ಹತೆ ಪಡೆಯುವಲ್ಲಿಯೂ ವಿಫಲವಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.





