ರೈಲ್ವೆ ಸಂಚಾರದ ಸುರಕ್ಷತೆ ಮತ್ತು ರಸ್ತೆಗಳ ಸುಗಮ ಸಂಚಾರದ ದೃಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿ ಒಟ್ಟು ₹3,920 ಕೋಟಿ ವೆಚ್ಚದಲ್ಲಿ 127 ರಸ್ತೆ ಮೇಲ್ಸೇತುವೆ ಹಾಗೂ ರಸ್ತೆ ಕೆಳ ಸೇತುವೆಗಳ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಈ ಕುರಿತು ಬಳ್ಳಾರಿ ಸಂಸದ ಇ. ತುಕಾರಾಂ ಅವರು ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದರು. ರಾಜ್ಯದಲ್ಲಿ ಮಂಜೂರಾಗಿರುವ ಒಟ್ಟು 127 ಕಾಮಗಾರಿಗಳ ಪೈಕಿ ಏಳು ಪ್ರಮುಖ ಯೋಜನೆಗಳು ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ ಎಂದು ಸಚಿವರು ಹೇಳಿದ್ದಾರೆ.
ದೇಶಾದ್ಯಂತ 2025ರ ನವೆಂಬರ್ 1ರವರೆಗೆ ₹1,11,583 ಕೋಟಿ ವೆಚ್ಚದಲ್ಲಿ ಒಟ್ಟು 4,689 ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ಮಂಜೂರು ಮಾಡಲಾಗಿದೆ. ಕರ್ನಾಟಕದಲ್ಲಿನ ಯೋಜನೆಗಳು ಪ್ರಸ್ತುತ ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ಕಾಮಗಾರಿಗಳ ಪ್ರಗತಿಯ ವಿವರ
2014 ರಿಂದ 2025ರ ಅಕ್ಟೋಬರ್ ವರೆಗಿನ ಅವಧಿಯಲ್ಲಿ ದಾಖಲೆಯ 13,653 ಸೇತುವೆಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಕರ್ನಾಟಕದ 703 ಕಾಮಗಾರಿಗಳು ಸೇರಿವೆ ಎಂದು ಅಂಕಿ-ಅಂಶ ನೀಡಿದರು.
ಬಳ್ಳಾರಿ ಕ್ಷೇತ್ರದ 7 ಪ್ರಮುಖ ಯೋಜನೆಗಳು:
ಸಂಸದ ತುಕಾರಾಂ ಅವರ ಕ್ಷೇತ್ರವಾದ ಬಳ್ಳಾರಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ವಿವರ ಈ ಕೆಳಗಿನಂತಿದೆ:
ಮೋತಿ ವೃತ್ತದ ಸೇತುವೆ (ಬಳ್ಳಾರಿ ಯಾರ್ಡ್): ಬಳ್ಳಾರಿ ಕಂಟೋನ್ಮೆಂಟ್ ಮತ್ತು ನಿಲ್ದಾಣಗಳ ನಡುವೆ ಇರುವ (ಸೇತುವೆ ಸಂಖ್ಯೆ 262A) ಮೇಲ್ಸೇತುವೆಯನ್ನು ಅಗಲೀಕರಣಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಇದಕ್ಕೆ ಸಂಬಂಧಿಸಿದ ಪರಿಕಲ್ಪನಾ ಯೋಜನೆಯನ್ನು ರೈಲ್ವೆ ಪರಿಶೀಲಿಸಿದ್ದು, ಅಂದಾಜು ಶುಲ್ಕ ಭರಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ. ಸರ್ಕಾರದ ಪ್ರತಿಕ್ರಿಯೆಗೆ ಕಾಯಲಾಗುತ್ತಿದೆ.
ಹಗರಿಬೊಮ್ಮನಹಳ್ಳಿ: ಇಲ್ಲಿನ ಎಲ್‌ಸಿ ಸಂಖ್ಯೆ 37 ರ ಬದಲಿಗೆ ₹45.24 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ವಿನ್ಯಾಸ (GAD) ಸಿದ್ಧಪಡಿಸಲಾಗುತ್ತಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವರ್ತಮಾನದ ತಲ್ಲಣಗಳಿಗೆ ನಾರಾಯಣ ಗುರು – ಗಾಂಧಿಯೇ ಉತ್ತರ
ತೋರಣಗಲ್ಲು- ರಣಜಿತ್‌ಪುರ: ಜೋಡಿಮಾರ್ಗ ಯೋಜನೆಯ ಭಾಗವಾಗಿ ಬನ್ನಿಹಟ್ಟಿ ಬಳಿ ಮೇಲ್ಸೇತುವೆ ಮಂಜೂರಾಗಿದೆ.
ಪಾಪಿನಾಯಕನ ಹಳ್ಳಿ: ಇಲ್ಲಿನ ಎಲ್‌ಸಿ ನಂ. 90ರ ಬದಲಿಗೆ ಮೇಲ್ಸೇತುವೆ ನಿರ್ಮಿಸಲು ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ.
ಹೊಸಪೇಟೆ- ವ್ಯಾಸ ಕಾಲೋನಿ: ಎಲ್‌ಸಿ ಸಂಖ್ಯೆ 5ರ ಬದಲಿಗೆ ಮೇಲ್ಸೇತುವೆ ನಿರ್ಮಾಣ ತಾಂತ್ರಿಕವಾಗಿ ಸಾಧ್ಯವೆಂದು ವರದಿ ಬಂದಿದ್ದು, ರಾಜ್ಯ ಸರ್ಕಾರದೊಂದಿಗೆ ಜಂಟಿ ಪರಿಶೀಲನೆ ನಡೆಸಲಾಗಿದೆ. ಇದೇ ಮಾರ್ಗದ ಎಲ್‌ಸಿ ಸಂಖ್ಯೆ 10 ರ ಕಾಮಗಾರಿಗೆ ವರದಿ ಸಿದ್ಧವಾಗುತ್ತಿದೆ.
ವ್ಯಾಸ ಕಾಲೋನಿ- ಸ್ವಾಮಿಹಳ್ಳಿ: ಇಲ್ಲಿನ ಸೇತುವೆ ಸಂಖ್ಯೆ 39 ಜಲಮಾರ್ಗ ಸೇತುವೆಯಾಗಿದ್ದು, ನೀರಿನ ಹರಿವಿಗೆ ಸಾಕಾಗುವಷ್ಟು ಅಗಲವಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ತ್ವರಿತಗತಿಯಲ್ಲಿ ಕಾಮಗಾರಿ
ಯೋಜನೆಗಳ ವಿಳಂಬ ತಪ್ಪಿಸಲು ರೈಲ್ವೆ ಇಲಾಖೆ ಹೊಸ ಕ್ರಮಗಳನ್ನು ಕೈಗೊಂಡಿದೆ. ವಿನ್ಯಾಸ ಅನುಮೋದನೆಯ ಸಮಯ ಉಳಿಸಲು ಪ್ರಮಾಣೀಕೃತ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ, ರಾಜ್ಯ ಸರ್ಕಾರಗಳು ಒಪ್ಪಿದರೆ ಭೂಸ್ವಾಧೀನ ಮತ್ತು ನಿರ್ಮಾಣ ಎರಡನ್ನೂ ಒಂದೇ ಏಜೆನ್ಸಿಯ ಮೂಲಕ ನಿರ್ವಹಿಸಿ ಕಾಮಗಾರಿ ವೇಗಗೊಳಿಸಲು ರೈಲ್ವೆ ಸಿದ್ಧವಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.





