'12th Fail' ಮಹಾನ್ ವ್ಯಕ್ತಿಗಳ, ಸಾಧಕರ ಬದುಕನ್ನು ಕುರಿತಾದ ಸಿನಿಮಾವೇನಲ್ಲ. ಬಡತನದ ಹಿನ್ನೆಲೆಯಿಂದ ಬಂದು ಪಿಯುಸಿಯಲ್ಲಿ ಅನುತ್ತೀರ್ಣನಾಗಿ, ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರ ಸ್ಫೂರ್ತಿಯಿಂದ ಐಪಿಎಸ್ ಮಾಡಲು ಹೊರಟು ಸತತ ಸೋಲು, ಅಪಮಾನಗಳನ್ನು ಎದುರಿಸಿ ಗೆದ್ದವನ ಕತೆ...
ಭಾರತೀಯ ಸಿನಿಮಾರಂಗದಲ್ಲಿ ಬಯೋಪಿಕ್ ಸಿನಿಮಾಗಳು ಕಮರ್ಷಿಯಲ್ ಆಗಿ ಯಶಸ್ಸು ಕಂಡಿದ್ದು ಕಡಿಮೆ. ಹಾಗೆಯೇ Based on true story ಎಂದು ಉಪಶೀರ್ಷಿಕೆ ಹೊತ್ತು ತೆರೆ ಕಂಡ ಸಿನಿಮಾಗಳು ಅಷ್ಟಾಗಿ ಪ್ರೇಕ್ಷಕರನ್ನು ತಟ್ಟಿದಂತಿಲ್ಲ; ಇದಕ್ಕೆ ಕೆಲವು ಅಪವಾದಗಳೂ ಇರಬಹುದು. ‘ಗಾಂದಿ’, ‘ಬ್ಯಾಂಡಿಟ್ ಕ್ವೀನ್’ನಿಂದ ಮೊದಲಾಗಿ (ನಾನು 80ರ ದಶಕದ ನಂತರದ ಚಿತ್ರಗಳನ್ನು ಉಲ್ಲೇಖಿಸುತ್ತಿರುವೆ.) ಈ ವರ್ಷ ಬಂದ ಇಂದಿರಾ ಗಾಂಧಿಯವರ ಕಾಲದ ತುರ್ತು ಪರಿಸ್ಥಿತಿಯನ್ನಾಧರಿಸಿದ ‘ಎಮರ್ಜೆನ್ಸಿ’ಯವರೆಗೆ ಸೋತ ಚಿತ್ರಗಳೇ ಹೆಚ್ಚು. ವಿವಾದಿತರ ಜೀವನ ಚರಿತ್ರೆಗಳನ್ನು ಆಧರಿಸಿ ಕಾಸು, ಜನಪ್ರಿಯತೆ ಪಡೆಯಲು ತಯಾರಿಸಿದ ಸಿನಿಮಾಗಳೂ ಕೂಡ ಯಶಸ್ಸು ಕಾಣದೇ ಹೋದದ್ದನ್ನು ಕಾಣಬಹುದು. ಹಾಗೆಯೇ ಸಾಮಾಜಿಕ ಸಂದೇಶವನ್ನು, ಬದುಕಿನಲ್ಲಿ ಸಾಧನೆ ಮಾಡಿದವರ ಬದುಕನ್ನು ಇಟ್ಟುಕೊಂಡು ಮಾಡಿದ ಸಿನಿಮಾಗಳೂ ಸೋತಿವೆ. ಆದರೆ ಎರಡು ವರ್ಷಗಳ ಹಿಂದೆ ಹಿಂದಿಯಲ್ಲಿ ನಿರ್ಮಾಣವಾದ ’12th Fail’ ಎಂಬ ಸಿನಿಮಾ ಆರ್ಥಿಕವಾಗಿಯೂ ಗೆದ್ದಿದೆ; ತನ್ನ ಸಾಮಾಜಿಕ ಪರಿಣಾಮದಲ್ಲಿ ಹಲವರಲ್ಲಿ ಸ್ಫೂರ್ತಿಯನ್ನೂ ತರುವಂತಿದೆ. ಇದು ಇತ್ತೀಚೆಗೆ ಬಂದ ಭಾರತದ ಅತ್ಯುತ್ತಮ ಬಯೋಪಿಕ್‌ಗಳಲ್ಲಿ ಒಂದು ಎಂದು ನನಗೆ ಅನ್ನಿಸಿದೆ.
’12th Fail’ ಮಹಾನ್ ವ್ಯಕ್ತಿಗಳ, ಸಾಧಕರ ಬದುಕನ್ನು ಕುರಿತಾದ ಸಿನಿಮಾವೇನಲ್ಲ. ಬಡತನದ ಹಿನ್ನೆಲೆಯಿಂದ ಬಂದು ಪಿಯುಸಿಯಲ್ಲಿ ಅನುತ್ತೀರ್ಣನಾಗಿ, ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರ ಸ್ಫೂರ್ತಿಯಿಂದ ಐಪಿಎಸ್ ಮಾಡಲು ಹೊರಟು ಸತತ ಸೋಲು, ಅಪಮಾನಗಳನ್ನು ಎದುರಿಸಿ ಗೆದ್ದು ಪೊಲೀಸ್ ಅಧಿಕಾರಿಯಾದ ವ್ಯಕ್ತಿಯೊಬ್ಬರ ಜೀವನ ಚರಿತ್ರೆ ಇದು.
ಇದನ್ನು ಓದಿದ್ದೀರಾ?: ಗೌರಿ ನೆನಪು | ಅವಳೊಂದು ಶುಭ್ರ ಹೂವಿನಂತೆ
ಡಕಾಯಿತಿಯಿಂದ ಕುಖ್ಯಾತಿ ಪಡೆದಿರುವ ಮಧ್ಯಪ್ರದೇಶದ ಚಂಬಲ್ ಕಣಿವೆಯ ಪಕ್ಕದಲ್ಲಿರುವ ಗ್ರಾಮ ಬಿಲಾಗ್ರಾಂ. ಅಲ್ಲಿನ ಪಿಯುಸಿ ವಿದ್ಯಾರ್ಥಿ ಮನೋಜ್ ಕುಮಾರ್ ಶರ್ಮ. ತಂದೆ ಸರ್ಕಾರಿ ಕಚೇರಿಯೊಂದರಲ್ಲಿ ಗುಮಾಸ್ತ. ಲಂಚ ಪಡೆದು ಕಡತವೊಂದಕ್ಕೆ ಸಹಿ ಮಾಡಲು ನಿರಾಕರಿಸಿ ಮೇಲಧಿಕಾರಿಯಿಂದ ಅಮಾನತ್ತುಗೊಂಡು ನ್ಯಾಯಾಲಯದಲ್ಲಿ ಹೋರಾಡುತ್ತಿರುವ ವ್ಯಕ್ತಿ. ಮನೋಜ್‌ನ ಅಣ್ಣ ರಿಕ್ಷಾ ಚಾಲಕ. ಪಿಯುಸಿ ಪರೀಕ್ಷೆಯಲ್ಲಿ ಶಾಲೆಯ ಉತ್ತಮ ಫಲಿತಾಂಶಕ್ಕಾಗಿ ಶಾಲೆಯ ಆಡಳಿತ ಮಂಡಳಿಯೇ ವಿದ್ಯಾರ್ಥಿಗಳಿಗೆ ನಕಲು ಮಾಡಲು ಹೇಳಿಕೊಡುತ್ತದೆ. ಅದೇ ಸಂದರ್ಭದಲ್ಲಿ ದಾಳಿ ನಡೆಸುವ ಪೊಲೀಸರು ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥನನ್ನು ಬಂಧಿಸುತ್ತಾರೆ. ನಕಲು ಮಾಡಿದರೂ ಮನೋಜ್ ಪರೀಕ್ಷೆಯಲ್ಲಿ ಫೇಲ್ ಆಗುತ್ತಾನೆ. ಸಣ್ಣದೊಂದು ಗಲಾಟೆಯಲ್ಲಿ ಬಂಧನಕ್ಕೊಳಗಾಗುವ ಮನೋಜ್ ಮತ್ತು ಆತನ ಅಣ್ಣನನ್ನು ಬಿಡಿಸುವ ಹಿರಿಯ ಪೊಲೀಸ್ ಅಧಿಕಾರಿ ದುಶ್ಯಂತ್ ಸಿಂಗ್ ಇಬ್ಬರಿಗೂ ಬುದ್ಧಿ ಹೇಳುತ್ತಾನೆ. ಆ ಅಧಿಕಾರಿಯ ನಿಷ್ಠೆ, ಧೈರ್ಯದಿಂದ ಸ್ಫೂರ್ತಿಗೊಂಡ ಮನೋಜ್ ಮುಂದೆ ತಾನೂ ಐಪಿಎಸ್ ಅಧಿಕಾರಿಯಾಗಬೇಕೆಂಬ ನಿರ್ಧಾರ ತಳೆಯುತ್ತಾನೆ.
ತನ್ನ ಅಜ್ಜಿ ಕೂಡಿಸಿ ಕೊಟ್ಟ ಪಿಂಚಣಿ ಹಣದೊಂದಿಗೆ ಐಪಿಎಸ್ ಮಾಡಲು ಹೊರಡುವ ಮನೋಜ್ ಕುಮಾರ್ ಶರ್ಮನ ಮುಂದಿನ ಹೋರಾಟದ ಚಿತ್ರಣವೇ ಸಿನಿಮಾದ ಕತೆಯ ತಿರುಳು. ಬಸ್‌ನಲ್ಲಿ ಹಣ, ಬ್ಯಾಗ್ ಕಳೆದುಕೊಂಡು ಅಸಹಾಯಕನಾಗುವ ಮನೋಜ್‌ಗೆ ಪಾಂಡೆ ಎಂಬ ಶ್ರೀಮಂತರ ಮಗನೊಬ್ಬ ಸಿಕ್ಕಿ ಸಹಾಯ ಮಾಡಿ ದೆಹಲಿಗೆ ಕರೆದೊಯ್ಯುತ್ತಾನೆ. ದೆಹಲಿಯಲ್ಲಿ ತನ್ನ ಹಾಗೆಯೇ ಐಎಎಸ್, ಐಪಿಎಸ್ ಕನಸುಗಳನ್ನು ಹೊತ್ತು ಬಂದಿರುವ ಸಾವಿರಾರು ವಿದ್ಯಾರ್ಥಿಗಳ ಪಡಿಪಾಟಲು, ಸಂಕಟಗಳನ್ನು ನಿರ್ದೇಶಕ ವಿಧು ವಿನೋದ್ ಛೋಪ್ರಾ ಅಲ್ಲಿನ ವಾಸ್ತವಗಳನ್ನು ಕಣ್ಣೆದುರು ತೆರೆದಿಟ್ಟಿದ್ದಾರೆ. ಮನೋಜ್ ಹಗಲು ವೇಳೆ ಟಾಯ್ಲೆಟ್ ತೊಳೆಯುತ್ತಾ, ಗ್ರಂಥಾಲಯದಲ್ಲಿ, ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಾ, ರಾತ್ರಿ ವೇಳೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಾನೆ.
ಸತತ ಪರೀಕ್ಷಾ ಪ್ರಯತ್ನಗಳ ನಡುವೆ ಸೋತವರ ದುರಂತವನ್ನು ಸಿನಿಮಾ ಹೇಳುತ್ತದೆ. ತನ್ನೆಲ್ಲ ಪ್ರಯತ್ನಗಳಲ್ಲಿ ಸೋತು ಟೀ ಅಂಗಡಿ ಇಟ್ಟುಕೊಂಡು ಬದುಕುವ ಸಾಗಿಸುವ ಗೌರಿ ಎಂಬಾತನ ಪಾತ್ರವೊಂದು ಚಿತ್ರದಲ್ಲಿದೆ. ಗೌರಿ ತಾನು ಐಎಎಸ್ ಪರೀಕ್ಷೆಗಳಲ್ಲಿ ಅನುತ್ತೀರ್ಣನಾದರೂ ತನ್ನಂತೆಯೇ ಕನಸು ಕಂಡು ದೆಹಲಿಗೆ ಬಂದ ನೂರಾರು ಬಡ ವಿದ್ಯಾರ್ಥಿಗಳಲ್ಲಿ ಒಬ್ಬನಾದರೂ ಉನ್ನತ ಅಧಿಕಾರಿಯಾಗಲಿ ಎಂಬ ಆಸೆಯಿಂದ ಅವರೆಲ್ಲರಿಗೂ ತನ್ನ ಟೀ ಅಂಗಡಿಯ ಮುಂದೆಯೇ ಗೈಡ್ ಮಾಡುತ್ತಾ ಹೋಗುತ್ತಾನೆ.
ತರಬೇತಿ ಹೆಸರಿನಲ್ಲಿ ಲಕ್ಷಾಂತರ ರೂ. ದುಡ್ಡು ಮಾಡುವ ಕೋಚಿಂಗ್ ಸೆಂಟರ್‍ಗಳ ಮಾಫಿಯಾವನ್ನು ಸಿನಿಮಾ ತೆರೆದಿಟ್ಟಿದೆ. ಯಾವುದೇ ಕೋಚಿಂಗ್ ಸೆಂಟರ್‍ನ ಅಗತ್ಯವಿಲ್ಲದೆ ಐಎಎಸ್‌ನಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಯೊಬ್ಬನಿಗೆ ಲಕ್ಷ ರೂ. ಕೊಟ್ಟು ಆತನ ಫೋಟೋವನ್ನು ತಮ್ಮ ಕಚೇರಿಯಲ್ಲಿ ಹಾಕಿ ‘ಈತ ನಮ್ಮ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿ’ ಎಂದು ನೋಂದಣಿಗೆ ಬಂದ ವಿದ್ಯಾರ್ಥಿಗಳನ್ನು, ಪೋಷಕರನ್ನು ನಂಬಿಸುವ ಕೋಚಿಂಗ್ ಸೆಂಟರ್‍ಗಳ ಮತ್ತೊಂದು ಮುಖವನ್ನೂ ಚಿತ್ರ ಬಯಲಿಗೆಳೆಯುತ್ತದೆ.
ಚಿತ್ರದೊಳಗೊಂದು ಪ್ರೇಮ ಕತೆಯೂ ಇದೆ. ಶ್ರೀಮಂತ ಕುಟುಂಬದ ಹಿನ್ನೆಲೆಯ ಶ್ರದ್ಧಾ ಐಎಎಸ್ ಓದಲೆಂದು ದೆಹಲಿಗೆ ಬಂದು ಮನೋಜ್‌ಗೆ ಪರಿಚಯವಾಗುತ್ತಾಳೆ. ಆತನ ಮುಗ್ಧತೆ, ಬಡತನದ ಹಿನ್ನೆಲೆ ಗಮನಿಸುತ್ತಾ ಆತನನ್ನು ಪ್ರೇಮಿಸುತ್ತಾಳೆ. ಐಪಿಎಸ್ ಪರೀಕ್ಷೆಯೊಂದೇ ತನ್ನ ಗುರಿ ಎಂದುಕೊಂಡಿರುವ ಮನೋಜ್‌ಗೆ ಅದು ಇಷ್ಟವಿಲ್ಲದಿದ್ದರೂ ಅವಳೆಡೆಗೆ ವಾಲುತ್ತಾಳೆ. ಆ ವರ್ಷದ ಪ್ರಯತ್ನದಲ್ಲಿ ಮನೋಜ್ ಮತ್ತೆ ಫೇಲಾಗಿ ಹತಾಶೆಯಿಂದ ಊರಿಗೆ ಮರಳುತ್ತಾನೆ. ಅಲ್ಲಿ ಅದಾಗಲೇ ತೀರಿಕೊಂಡ ತನ್ನ ಪ್ರೀತಿಯ ಅಜ್ಜಿ, ಕೂಲಿ ಮಾಡುತ್ತಿರುವ ಅಣ್ಣ, ನ್ಯಾಯಾಲಯದ ವ್ಯಾಜ್ಯದ ಹೋರಾಟದಲ್ಲೇ ಅಲೆಯುತ್ತಿರುವ ಅಪ್ಪ, ಬಡತನದಲ್ಲೇ ಕಾಲ ನೂಕುತ್ತಿರುವ ತಾಯಿ ಎಲ್ಲವನ್ನೂ ಕಂಡು ಮತ್ತೆ ದೆಹಲಿಗೆ ಹೊರಡುತ್ತಾನೆ. ಕೊನೆಯ ಪ್ರಯತ್ನದ ಪರೀಕ್ಷಾ ಸಿದ್ಧತೆಗೆ ಗೌರಿ ಸಹಾಯ ಮಾಡುತ್ತಾನೆ. ನಿರಂತರ ಸಿದ್ಧತೆ, ಓದುವಿಕೆ ಮೂಲಕ ಮನೋಜ್ ಐಪಿಎಸ್ ಪಾಸಾಗುತ್ತಾನೆ.

ಇಷ್ಟೂ ಕತೆಯನ್ನು ನಿರ್ದೇಶಕ ವಿಧು ವಿನೋದ್ ಮಂಡಿಸುವ ಕ್ರಮ ಪರಿಣಾಮಕಾರಿಯಾಗಿದೆ. ರೋಮ್ಯಾಂಟಿಕ್ ಡ್ರಾಮ, ಕ್ರೈಂ ಥ್ರಿಲ್ಲರ್, ಡಾಕ್ಯುಮೆಂಟರಿ- ಹೀಗೆ ಬಹುತೇಕ ಎಲ್ಲ ಬಗೆಯ ಸಿನಿಮಾಗಳನ್ನು ಮಾಡಿರುವ ಬಾಲಿವುಡ್‌ನ ಹಿರಿಯ ನಿರ್ದೇಶಕ ಈ ಚಿತ್ರದ ಮೂಲಕ ಮತ್ತೊಂದು ಎತ್ತರ ತಲುಪಿದ್ದಾರೆ.

ಮಂಜುನಾಥ್ ಲತಾ
'ಮಂಜುನಾಥ ಲತಾ' ಎಂಬ ಕಾವ್ಯನಾಮದಿಂದ ಬರೆಯುವ ಮಂಜುನಾಥ್ ಎಸ್. ಅವರು ಪತ್ರಿಕೋದ್ಯಮ, ಅಭಿವೃದ್ದಿಪರ ಚಟುವಟಿಕೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಣ್ಣ ಕಥೆಗಳು ಓದುಗರ ಪ್ರೀತಿಗೆ ಪಾತ್ರವಾಗಿವೆ. ತೆಂಕಲಕೇರಿ, ಕತೆ ಎಂಬ ಇರಿವ ಅಲಗು, ಸ್ಟೋರಿ ಟೆಲ್ಲರ್ ಜವರ ಇನ್ನಿಲ್ಲ, ಕಥಾಗತ(ಕಥಾ ಸಂಕಲನಗಳು), ಪರದೇಸಿ ಮಗನ ಪದವು, ಆಹಾ ಅನಿಮಿಷ ಕಾಲ, ಸೋಜಿಗದ ಸೂಜಿ(ಕವನ ಸಂಕಲನಗಳು), ಪಲ್ಲಂಗ(ಕಾದಂಬರಿ), ಮಾತಿನ ಓದು(ಲೇಖನಗಳ ಸಂಗ್ರಹ) ಅವರ ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಗಳಿಸಿವೆ.




