ಕೊಲೆ ಆರೋಪದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರ ಮಹಿಳಾ ಅಭಿಮಾನಿಯೊಬ್ಬರು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸಿದ್ದು, ಆಕೆಯ ವಿರುದ್ಧ ದೂರು ದಾಖಲಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಮುಖಂಡರು ದೂರು ದಾಖಲಿಸಿದ್ದಾರೆ.
ಕೊಲೆ ಆರೋಪಿ ನಟ ದರ್ಶನ್ ಅವರ ಅಭಿಮಾನಿ ಮಂಗಳಾ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಮಂಗಳಾ ಅವರು ಸಾಮಾಜಿಕ ಜಾಲತಾಣದಲ್ಲಿ ಎಚ್.ಡಿ ಕುಮಾರಸ್ವಾಮಿ ವಿರುದ್ದ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಕೆ.ಆರ್ ಪೇಟೆಯ ಜೆಡಿಎಸ್ ಮುಖಂಡ ಜಾನಿಕೀರಾಮ್ ದೂರು ದಾಖಲಿಸಿದ್ದಾರೆ.
“ದರ್ಶನ್ ವಿರುದ್ಧ ಕೊಲೆ ಅಪರಾಧ ಬರುವಂತೆ ಕುಮಾರಸ್ವಾಮಿ ಮಾಡಿದ್ದಾನೆ. ದುಡ್ಡು ಕೊಟ್ಟು ದರ್ಶನ್ ವಿರುದ್ಧ ಧಿಕ್ಕಾರ ಕೂಗಿಸಿದ್ದಾನೆ” ಎಂದು ಆರೋಪಿಸಿ ಮಂಗಾಳ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು.
“ಮಂಡ್ಯದಲ್ಲಿ ಸ್ಪರ್ಧಿಸೋಕೆ ಸುಮಲತಾ ನಿನಗೆ ಚಾನ್ಸ್ ಕೊಟ್ಟಿರೋದು. ನೀನು ಡಿ ಬಾಸ್ ವಿರುದ್ದ ಸ್ಕೆಚ್ ಆಕ್ತಿಯಾ, ಸುಮಲತಾರಿಂದ ಭಿಕ್ಷೆ ಹಾಕಿಸಿಕೊಂಡ ಮಗ ನೀನು” ಎಂದು ಏಕವಚನದಲ್ಲಿ ಮಂಗಳಾ ನಿಂದಿಸಿದ್ದಾರೆ.
ಮಂಗಳ ವಿರುದ್ಧ ಮಂಡ್ಯ ನಗರದಲ್ಲಿಯೂ ದೂರು ದಾಖಲಾಗಿದೆ. ಮಂಡ್ಯ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ರಘುನಂದನ್ ಎಂ.ಎಸ್ ದೂರು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದರ್ಶನ್ ಪ್ರಕರಣ | ಮೊಬೈಲ್‌ಗಾಗಿ ಪೌರಕಾರ್ಮಿಕರನ್ನು ರಾಜಕಾಲುವೆಗೆ ಇಳಿಸಿದ ಪೊಲೀಸರು; ದಸಂಸ ಖಂಡನೆ
ಈ ಪ್ರಕರಣಕ್ಕೂ ಕುಮಾರಸ್ವಾಮಿ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ಕುಮಾರಸ್ವಾಮಿ ಹೆಸರನ್ನು ಎಳೆದು ತಂದು ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಬೈದು ಅವಮಾನ ಮಾಡಿದ್ದಾರೆ. ಇದರಿಂದ ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ ನೋವಾಗಿದೆ. ಹಾಗಾಗಿ, ವಿಡಿಯೋ ವೈರಲ್ ಆಗಿರುವುದರಿಂದ ಮಂಗಳ ಮತ್ತು ಅವರಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣದ ಖಾತೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಕಾರ್ಯಕರ್ತರು ದೂರಿನಲ್ಲಿ ಒತ್ತಾಯಿಸಿದ್ದಾರೆ.




