ಓವರ್ ಟೇಕ್ ಮಾಡಲು ಜಾಗ ಬಿಡಲಿಲ್ಲವೆಂದು ಕುಟಂಬವೊಂದು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದ್ವಿಚಕ್ರ ವಾಹನ ಸವಾರನೊಬ್ಬ ದಾಳಿ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಖಿಲ್ ಸಾಬು ಎಂಬುವವರು ತಮ್ಮ ಪತ್ನಿ ಹಾಗೂ ಮೂರು ವರ್ಷದ ಮಗಳ ಜೊತೆಗೆ ನಗರದ ಸರ್ಜಾಪುರ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಅಖಿಲ್ ಸಾಬು ಅವರು ಮೂಲತಃ ಕೇರಳದವರಾಗಿದ್ದು, ಐಟಿ ವೃತ್ತಿಪರರಾಗಿದ್ದಾರೆ.
ಓವರ್ ಟೆಕ್ ಮಾಡಲು ಜಾಗ ಬಿಡಲಿಲ್ಲ ಎಂದು ರೊಚ್ಚಿಗೆದ್ದ ಬೈಕ್ ಸವಾರ ಏಕಾಏಕಿ ಕಾರು ಚಾಲಕನ ಮೇಲೆ ದಾಳಿ ನಡೆಸಿದ್ದಾನೆ. ಈ ಘಟನೆ ಸಂಬಂಧ ಕಾರು ಮಾಲೀಕ ಅಖಿಲ್ ಸಾಬು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏನಿದು ಘಟನೆ?
ದಂಪತಿ ತಮ್ಮ ಮೂರು ವರ್ಷದ ಮಗುವಿನೊಂದಿಗೆ ನಗರದ ಸರ್ಜಾಪುರದ ರಸ್ತೆಯಲ್ಲಿ ಸಂಚಾರ ಮಾಡುವಾಗ ಓವರ್ ಟೇಕ್ ಮಾಡಲು ಸೈಡ್ ಬಿಡಲಿಲ್ಲ ಎಂದು ದ್ವಿಚಕ್ರ ವಾಹನ ಸವಾರನೊಬ್ಬ ಏಕಾಏಕಿ ಕಾರಿನ ಮೇಲೆ ದಾಳಿ ನಡೆಸಿದ್ದಾನೆ.
ಮೊದಲಿಗೆ ಬೈಕ್ ಸವಾರ ಕಾರನ್ನು ಅಡ್ಡಗಟ್ಟುವ ವೇಳೆ ಹೆಲ್ಮೆಟ್‌ನಿಂದ ಕಾರಿಗೆ ಬೀಸಿದ್ದಾನೆ. ಬಳಿಕ, ಕಾರಿನ ಮುಂದೆ ವಾಹನ ನಿಲ್ಲಿಸಿ, ಮತ್ತೆ ಕೆಳಗೆ ಬಿದ್ದ ಹೆಲ್ಮೆಟ್ ತೆಗೆದುಕೊಂಡು ಕಾರಿನ ಗಾಜಿಗೆ ಹೊಡೆದಿದ್ದಾನೆ. ಪರಿಣಾಮ ಬೈಕ್ ಚಾಲಕ ಕಾರಿನ ಗ್ಲಾಸ್ ಒಡೆದು ಹಾಕಿದ್ದು ಕಾರಿನೊಳಗಿದ್ದ ಮಗಳಿಗೆ ಗಾಯಗಳಾಗಿವೆ ಎಂದು ಅಖಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಜಗದೀಶ್ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೂರು ‘ಫೈವ್ ಸ್ಟಾರ್’ ಹೋಟೆಲ್‍ಗಳಿಗೆ ಬಾಂಬ್ ಬೆದರಿಕೆ; ಹೆಚ್ಚುತ್ತಿರುವ ಪ್ರಕರಣಗಳು
ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋದಲ್ಲಿ ಬೈಕ್ ಚಾಲಕ ಕಾರನ್ನು ಅಡ್ಡಗಟ್ಟುವುದನ್ನು ಕಾಣಬಹುದು. ಜತೆಗೆ, ನಡು ರಸ್ತೆಯಲ್ಲಿ ಕಾರು ಚಾಲಕ ಮತ್ತು ಬೈಕ್ ಚಾಲಕರಿಬ್ಬರು ಬಡಿದಾಡಿಕೊಂಡ ದೃಶ್ಯ ಕಾಣಬಹುದು.
ಘಟನೆಯಲ್ಲಿ ಕಾರು ಚಾಲಕನ ಕಣ್ಣು, ಮೂಗು, ಕೆನ್ನೆಗೆ ಗಾಯವಾಗಿದೆ. ಅಷ್ಟೆ ಅಲ್ಲದೇ ದ್ವಿಚಕ್ರ ವಾಹನ ಸವಾರ ತನ್ನ ಹೆಲ್ಮೆಟ್‌ನಿಂದ ಕಾರಿನ ಗಾಜು ಹೊಡೆದಿದ್ದರಿಂದ ಕಾರಿನಲ್ಲಿದ್ದ 3 ವರ್ಷದ ಮಗುವಿನ ಕೈಗೆ ಗಾಯವಾಗಿದೆ.




