ರಾಜ್ಯ ರಾಜಧಾನಿ ಬೆಂಗಳೂರಿನ ಅಮೃತಹಳ್ಳಿ ಠಾಣೆಯ ಪೊಲೀಸರು ಓರ್ವ ಆರೋಪಿಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು. ಮಾನವ ಹಕ್ಕುಗಳ ಆಯೋಗ ದಾಳಿ ನಡೆಸಿ ಈ ವಿಚಾರ ಬಯಲಿಗೆಳೆದಿದೆ.
ಅಮೃತಹಳ್ಳಿ ಠಾಣೆಯ ಪೊಲೀಸರು ಫೆಬ್ರುವರಿ 1ರಂದು ಆರೋಪಿಯೊಬ್ಬರನ್ನು ಬಂಧನ ಮಾಡಿ 10 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟಿತ್ತು. ಈ ಬಗ್ಗೆ ಆರೋಪಿಯ ಕುಟುಂಬಸ್ಥರಿಗೆ ಮಾಹಿತಿ ನೀಡಿರಲಿಲ್ಲ. ಜತೆಗೆ, ದಾಖಲಾತಿಯಲ್ಲಿ ನಮೂದಿಸಿರಲಿಲ್ಲ.
ಯಾಸಿನ್ ಮೆಹಬೂಬ್ ಖಾನ್ ವಿರುದ್ಧ 2023ರಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಆತನ ವಿರುದ್ಧ ಪ್ರಕರಣ ದಾಖಲಾದ ಬಳಿಕ, ಆತ ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದನು. ಆರೋಪಿಯನ್ನು ಬಂಧನ ಮಾಡಲು ನ್ಯಾಯಾಲಯ ಕೂಡ ವಾರೆಂಟ್ ಜಾರಿ ಮಾಡಿತ್ತು. ಪೊಲೀಸರು ವಾರೆಂಟ್ ಆಧರಿಸಿ ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿದ್ದರು.
ಆದರೆ, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದ ಬಗ್ಗೆ ದಾಖಲಾತಿಯಲ್ಲಿ ಉಲ್ಲೇಖಿಸಿರಲಿಲ್ಲ. ಕೋರ್ಟ್‌ಗೂ ಹಾಜರು ಪಡಿಸಿರಲಿಲ್ಲ. ಆರೋಪಿಯ ಮನೆಯವರಿಗೂ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ.
ಅಡ್ವೋಕೇಟ್ ಮಜೀದ್ ಠಾಣೆಗೆ ಭೇಟಿ ನೀಡಿದಾಗ ಆರೋಪಿ ತನ್ನ ಬಂಧನದ ಬಗ್ಗೆ ಅಡ್ವೋಕೇಟ್‌ಗೆ ಮಾಹಿತಿ ನೀಡಿದ್ದರು. ಹೀಗಾಗಿ ಮಾನವ ಹಕ್ಕುಗಳ ಆಯೋಗಕ್ಕೆ ಆರೋಪಿಯ ಕುಟುಂಬ ದೂರು ನೀಡಿತ್ತು. ಬಳಿಕ ಮಾನವ ಹಕ್ಕುಗಳು ಆಯೋಗದ ಡಿವೈಎಸ್‌ಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಅಧಿಕಾರಿಗಳ ದಾಳಿ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಿಟ್ ಆ್ಯಂಡ್ ರನ್‌ಗೆ 62 ವರ್ಷದ ವೃದ್ಧೆ ಬಲಿ
ಫೆ.10ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ ನಡೆಸಿತ್ತು. ಈ ವೇಳೆ ಅಮೃತಹಳ್ಳಿ ಪೊಲೀಸರು, ಆರೋಪಿಯನ್ನ ಅಕ್ರಮವಾಗಿ ಬಂಧನದಲ್ಲಿಟ್ಟಿರುವುದು ಪತ್ತೆಯಾಗಿದೆ.
ಸದ್ಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಸದ್ಯ ಅಧಿಕಾರಿಗಳು ಇನ್ಸ್ಪೆಕ್ಟರ್, ಸಿಬ್ಬಂದಿ ವಿಚಾರಣೆ ಮಾಡುತ್ತಿದ್ದಾರೆ.




